ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ‘ಸ್ಮಾರ್ಟ್‌’ ರಸ್ತೆಗಳಿಗೆ ₹436 ಕೋಟಿ ವೆಚ್ಚ

‘ಸ್ಮಾರ್ಟ್‌ ಸಿಟಿ’ ಯೋಜನೆಗಳಿಗೆ ಒಂದು ವರ್ಷ ಹೆಚ್ಚುವರಿ ಕಾಲಾವಕಾಶ l ರಸ್ತೆಗಳಿಗೆ ಮೊದಲ ಆದ್ಯತೆ: ಸೆಪ್ಟೆಂಬರ್‌ ಎರಡನೇ ವಾರಕ್ಕೆ ಸಿದ್ಧ
Last Updated 21 ಆಗಸ್ಟ್ 2022, 20:23 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಮಾರ್ಟ್‌ ಸಿಟಿ’ ಯೋಜನೆಗೆ ಬೆಂಗಳೂರನ್ನೂ ಸೇರಿಸಬೇಕು ಎಂದು ಎಲ್ಲೆಡೆಯ ಒತ್ತಾಯಕ್ಕೆ ಮಣಿದು ಕೇಂದ್ರ ಸರ್ಕಾರ ಮೂರನೇ ಸುತ್ತಿನಲ್ಲಿ ನಗರವನ್ನು ಆಯ್ಕೆ ಮಾಡಿತು. ಒಂದೆರಡು ವರ್ಷಗಳಲ್ಲಿ ಮುಗಿಯಬೇಕಿದ್ದ ಯೋಜನೆಗಳೂ ಇನ್ನೂ ಮುಗಿದಿಲ್ಲ. 2022ರ ಜೂನ್‌ಗೆ ಎಲ್ಲ ಕಾಮಗಾರಿಗಳೂ ಮುಗಿಯಬೇಕಿದ್ದವು. ಒಂದು ವರ್ಷ ಹೆಚ್ಚುವರಿ ಕಾಲಾವಕಾಶ ಪಡೆದಿರುವ ‘ಸ್ಮಾರ್ಟ್‌ ಯೋಜನೆ’ಗಳು ಪೂರ್ಣಗೊಳ್ಳುವ ನಿರೀಕ್ಷೆ ಇಲ್ಲ.

‘ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು ಶೇ 43.6ರಷ್ಟು ಹಣ ವ್ಯಯವಾಗಿರುವುದು ರಸ್ತೆಗಳಿಗೆ. ಬೆಂಗಳೂರಿನಲ್ಲಿ ₹436 ಕೋಟಿ ವೆಚ್ಚದಲ್ಲಿ 32 ರಸ್ತೆಗಳು ‘ಸ್ಮಾರ್ಟ್‌ ಟೆಂಡರ್ ಶ್ಯೂರ್‌’ ಮಾದರಿಯಲ್ಲಿ ಅಭಿವೃದ್ಧಿಯಾಗಿವೆ. ಇನ್ನು ಅವೆನ್ಯೂ ರಸ್ತೆ ಹಾಗೂ ಎಚ್‌ಕೆಪಿ ರಸ್ತೆ (ಕ್ವೀನ್ಸ್‌ ರಸ್ತೆಯಿಂದ ರಸೆಲ್‌ ಮಾರುಕಟ್ಟೆ) ಅಭಿವೃದ್ಧಿಯ ಕೊನೆ ಘಟ್ಟದಲ್ಲಿವೆ.

ನಗರದಲ್ಲಿ ಎಲ್ಲೆಡೆ ರಸ್ತೆ ಅಭಿವೃದ್ಧಿ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಆದರೆ, ‘ಸ್ಮಾರ್ಟ್‌ ಸಿಟಿ’ಯಡಿ ಅಭಿವೃದ್ಧಿಯಾಗಿರುವ 32 ರಸ್ತೆಗಳು ಮೂರು ವರ್ಷ ನಿರ್ವಹಣೆಯನ್ನೂ ಹೊಂದಿವೆ. ಅಂದರೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡ ಗುತ್ತಿಗೆದಾರರು ಮೂರು ವರ್ಷ ಇದರ ನಿರ್ವಹಣೆ ಮಾಡುತ್ತಾರೆ. ಇದು ‘ಸ್ಮಾರ್ಟ್‌ ಸಿಟಿ’ಯ ಷರತ್ತೂ ಹೌದು.

ಟೆಂಡರ್‌ ಶ್ಯೂರ್ ಯೋಜನೆಯಡಿ ಬಿಬಿಎಂಪಿ 2017ರಲ್ಲಿ 36 ರಸ್ತೆಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಿತ್ತು. ಇದು ಕಾರ್ಯಗತಗೊಂಡಿರಲಿಲ್ಲ. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ 12 ಪ್ರಾಜೆಕ್ಟ್‌ಗಳಲ್ಲಿ 32 ರಸ್ತೆಗಳನ್ನು ಅಭಿವೃದ್ಧಿ ಮಾಡಲು 2019ರ ನವೆಂಬರ್‌ 9ರಂದು ಮುಖ್ಯಮಂತ್ರಿಯವರಿಂದ ಶಂಕುಸ್ಥಾಪನೆಗೊಂಡು ಈ ರಸ್ತೆಗಳ ಅಭಿವೃದ್ಧಿ ಆರಂಭವಾಯಿತು. 2020ರ ಮೇ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಕೋವಿಡ್‌ ಲಾಕ್‌ಡೌನ್‌ನಿಂದ ವಿಳಂಬವಾಯಿತು. ಎಲ್ಲ ಲಾಕ್‌ಡೌನ್‌ಗಳು ಮುಗಿದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದಕ್ಕೆ ‘ಏಜೆನ್ಸಿಗಳ ನಡುವಿನ ಸಮನ್ವಯ ಕೊರತೆ’ ಎಂಬ ಸಬೂಬು ಕೇಳಿರುತ್ತದೆ. ಹೀಗಾಗಿ, ಎರಡು ವರ್ಷಗಳ ನಂತರ ರಸ್ತೆಗಳ ಅಭಿವೃದ್ಧಿ ‍ಪೂರ್ಣಗೊಂಡಿದೆ.

ಸ್ಮಾರ್ಟ್‌ ಟೆಂಡರ್‌ಶ್ಯೂರ್‌ ರಸ್ತೆಗಳು ಅನುಷ್ಠಾನವಾಗುವ ಸಂದರ್ಭದಲ್ಲಿ ಜನರಿಗೆ ಸಾಕಷ್ಟು ಸಂಕಷ್ಟವನ್ನೂ ನೀಡಿವೆ. ಇವೆಲ್ಲ ರಸ್ತೆಗಳು ನಗರದ ಹೃದಯಭಾಗದಲ್ಲೇ ಇವೆ. ಹೀಗಾಗಿ, ಸಂಚಾರ ದಟ್ಟಣೆ ಕಿರಿಕಿರಿ ಹೆಚ್ಚಾಗಿಯೇ ಇತ್ತು. ಈಗ ಆ ಸಮಸ್ಯೆ ಕಡಿಮೆಯಾಗಿದೆ. 32 ರಸ್ತೆಗಳಲ್ಲೂ ಸಂಚಾರ ಇದೆ. ಆದರೆ, ಅವೆನ್ಯೂ ರಸ್ತೆ ಹಾಗೂ ಎಚ್‌ಕೆಪಿ ರಸ್ತೆ (ಕ್ವೀನ್ಸ್‌ ರಸ್ತೆಯಿಂದ ರಸೆಲ್‌ ಮಾರುಕಟ್ಟೆ) ಹೊರತುಪಡಿಸಿ ಉಳಿದ 30 ರಸ್ತೆಗಳಲ್ಲಿ ಸಂಚಾರ ಆರಂಭವಾಗಿದೆ. ಒಟ್ಟು 29.53 ಕಿ.ಮೀ ರಸ್ತೆ ‘ಸ್ಮಾರ್ಟ್‌’ ಅಭಿವೃದ್ಧಿಯಾಗುತ್ತಿದೆ.

ಶೇ 80ರಷ್ಟು ಪೂರ್ಣ

‘ಒಳಚರಂಡಿ, ಕುಡಿವ ನೀರು, ವಿದ್ಯುತ್‌ ಸಂಪರ್ಕವನ್ನು ಪ್ರತಿ ಮನೆಗೆ ಒದಗಿಸಬೇಕಾದ್ದರಿಂದ ರಸ್ತೆ ಕಾಮಗಾರಿ ವಿಳಂಬವಾಯಿತು. ಹಲವು ಏಜೆನ್ಸಿಗಳ ಕೆಲಸವಾಗಬೇಕಾಗಿದೆ. ಅಲ್ಲದೆ, ಮಾರುಕಟ್ಟೆ ಪ್ರದೇಶದಲ್ಲಿ ರಾತ್ರಿಯ ಸುಮಾರು 5 ಗಂಟೆಯಷ್ಟು ಮಾತ್ರ ಕೆಲಸ ಮಾಡಲು ಸಮಯ ಇರುತ್ತದೆ. 30 ರಸ್ತೆಗಳು ಪೂರ್ಣಗೊಂಡು, ಸಂಚಾರಕ್ಕೆ ಅನುವಾಗಿವೆ. ಉಳಿದ ಎರಡು ರಸ್ತೆಗಳೂ ಸೆಪ್ಟೆಂಬರ್‌ ಎರಡನೇ ವಾರದಲ್ಲಿ ಪೂರ್ಣಗೊಳ್ಳಲಿವೆ‘ ಎಂದು ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ತಿಳಿಸಿದರು.

‘ಸ್ಮಾರ್ಟ್‌ ಸಿಟಿಯಲ್ಲಿ ಮೊದಲು ಯೋಜಿಸಿದ್ದ ಕಾಮಗಾರಿಗಳಲ್ಲಿ ಬಹುತೇಕ ಶೇ 80ರಷ್ಟು ಮುಗಿದಿವೆ. ಯೋಜನೆಗೆ ಹೊಸದಾಗಿ ಸೇರಿಕೊಂಡ ಕಾಮಗಾರಿಗಳು ವಿಳಂಬವಾಗಿವೆ ಬಹು ಅಂತಸ್ತಿನ ಕಾರು ಪಾರ್ಕಿಂಗ್‌ ಯೋಜನೆ ಇನ್ನು ಆರಂಭವಾಗಬೇಕಷ್ಟೇ’ ಎಂದರು.

ಯಾವ ಯಾವ ರಸ್ತೆಗಳು?

ಕಮರ್ಷಿಯಲ್‌ ಸ್ಟ್ರೀಟ್‌, ಕಾಮರಾಜ್‌ ರಸ್ತೆ, ಹಲಸೂರು ರಸ್ತೆ, ಡಿಕನ್ಸನ್‌ ರಸ್ತೆ, ಇನ್‌ಫೆಂಟ್ರಿ ರಸ್ತೆ, ಸೆಂಟ್ರಲ್‌ ಸ್ಟ್ರೀಟ್‌ (ಎಂ.ಜಿ. ರಸ್ತೆಯಿಂದ ಶಿವಾಜಿನಗರ ಬಸ್‌ ನಿಲ್ದಾಣ ರಸ್ತೆ), ಬೋರಿಂಗ್‌ ಆಸ್ಪತ್ರೆ ರಸ್ತೆ, ಮಿಲ್ಲರ್ಸ್‌ ರಸ್ತೆ, ರಾಜಭವನ ರಸ್ತೆ, ಮೆಕ್‌ಗ್ರಾತ್‌ ರಸ್ತೆ, ಕನ್ವೆಂಟ್‌ ರಸ್ತೆ (ರಿಚ್ಮಂಡ್‌ ರಸ್ತೆಯಿಂದ ರೆಸಿಡೆನ್ಸಿ ರಸ್ತೆ), ಹೇಯ್ಸ್‌ ರಸ್ತೆ, ವುಡ್‌ಸ್ಟ್ರೀಟ್‌, ಕ್ಯಾಸಲ್‌ ಸ್ಟ್ರೀಟ್‌, ಟಾಟಾ ಲೇನ್‌, ಕಸ್ತೂರಬಾ ರಸ್ತೆ, ಕ್ವೀನ್ಸ್‌ ರಸ್ತೆ, ರಾಜಾರಾಂ ಮೋಹನ್‌ರಾಯ್‌ ರಸ್ತೆ, ಲ್ಯಾವೆಲ್ಲೆ ರಸ್ತೆ, ಬ್ರಿಗೇಡ್‌ ರಸ್ತೆ, ಸೇಂಟ್‌ ಜಾನ್ಸ್‌ ರಸ್ತೆ, ಸೇಂಟ್‌ ಜಾನ್ಸ್‌ ಚರ್ಚ್‌ ರಸ್ತೆ, ಮಿಲ್ಲರ್ಸ್‌ ರಸ್ತೆ ವಿಸ್ತರಣೆ (ಅಂಡರ್‌ಪಾಸ್‌), ಕಂಟೋನ್ಮೆಂಟ್‌ ರಸ್ತೆ, ಎಚ್‌.ಕೆ.ಪಿ. ರಸ್ತೆ, ಜುಮ್ಮಾ ಮಸೀದಿ ರಸ್ತೆ, ಚಾಂದಿನಿ ಚೌಕ್‌ ರಸ್ತೆ, ರೇಸ್‌ ಕೋರ್ಸ್‌ ರಸ್ತೆ, ಮಿಲ್ಲರ್ಸ್‌ ರಸ್ತೆಯಿಂದ ಅಲಿ ಅಸ್ಕರ್‌ ರಸ್ತೆ, ಪ್ಯಾಲೇಸ್‌ ರಸ್ತೆ, ಅವೆನ್ಯೂ ರಸ್ತೆ, ಜನರಲ್‌ ತಿಮ್ಮಯ್ಯ ರಸ್ತೆಯಿಂದ ಲ್ಯಾಂಗ್‌ ಫೋರ್ಡ್‌ ರಸ್ತೆ.

ರಸ್ತೆಗಳ ವೈಶಿಷ್ಟ್ಯವೇನು?

* ಪಾದಚಾರಿಗಳಿಗೆ ವಿಸ್ತಾರ ಪಥ ಮತ್ತು ಸೈಕಲ್‌ ಟ್ರ್ಯಾಕ್‌

* ಸಾರ್ವಜನಿಕ ಸಾರಿಗೆಗಾಗಿ ‘ಬಸ್‌ ಬೇ’

* ಎರಡೂ ಭಾಗದಲ್ಲಿ ಗಿಡ– ಮರ ಬೆಳೆಸಲು ಅವಕಾಶ

* ಪಾರ್ಕಿಂಗ್‌ ವ್ಯವಸ್ಥೆ ಜೊತೆಗೆ ವಾಹನಗಳ ಸುಗಮ ಸಂಚಾರಕ್ಕೆ ವಿಸ್ತಾರವಾದ ಲೇನ್‌

* ಮಳೆ ನೀರಗಾಲುವೆ, ವಿದ್ಯುತ್‌, ಒಳಚರಂಡಿ, ನೀರು ಸರಬರಾಜು, ಒಎಫ್‌ಸಿ ಲೈನ್‌ಗಳಿಗೆ ಪ್ರತ್ಯೇಕ ಡಕ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT