ಬುಧವಾರ, ಆಗಸ್ಟ್ 10, 2022
23 °C

ಬಿಜೆಪಿಗೆ ಯಾರೂ ಅನಿವಾರ್ಯವಲ್ಲ: ಎಂ.ಪಿ. ರೇಣುಕಾಚಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬಿಜೆಪಿಗೆ ಯಾರೂ ಅನಿವಾರ್ಯ ಅಲ್ಲ. ನಮ್ಮ ಪಕ್ಷಕ್ಕೆ ದೊಡ್ಡ ಶಕ್ತಿ ಇದೆ. ಆದರೆ, ಜೆಡಿಎಸ್‌ಗೆ ಯಾರು ಅನಿವಾರ್ಯ ಎಂಬುದು ನನಗೆ ಗೊತ್ತಿಲ್ಲ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಸಭಾಪತಿ ಮೇಲೆ ಅವಿಶ್ವಾಸ ನಿರ್ಣಯಕ್ಕೆ ನಾವು ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಅವರು ಬಹಿರಂಗವಾಗಿಯೇ ಬೆಂಬಲ ನೀಡಿದ್ದಾರೆ’ ಎಂದರು.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ನಡೆದ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಭಾಪತಿಯವರು ಪೀಠಕ್ಕೆ ಬರುವುದಿಲ್ಲ ಎಂದು ಉಪಸಭಾಪತಿ ಪೀಠ ಅಲಂಕರಿಸಿದ್ದರು. ಆದರೆ ಕಾಂಗ್ರೆಸ್ ಗೂಂಡಾಗಳು ಅವರ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಅನಿವಾರ್ಯವಾಗಿ ಬಿಜೆಪಿ ಸದಸ್ಯರು ರಕ್ಷಣೆಗೆ ಹೋದರು. ಇಲ್ಲದಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು’ ಎಂದರು.

‘ಸಭಾಪತಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರೂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಿತೂರಿಯಿಂದ ಅವರನ್ನು ರಾಜೀನಾಮೆ ಕೊಡದಂತೆ ಒತ್ತಡ ಹಾಕಿದ್ದಾರೆ’ ಎಂದು ಹರಿಹಾಯ್ದರು.

ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ‘ಅವನೊಬ್ಬ ಬ್ಲಾಕ್‍ಮೇಲರ್‌’ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.

‘ನನ್ನ ವೈಯಕ್ತಿಕ ವಿಚಾರ ಮಾತನಾಡಲು ಅವನ್ಯಾರು. ಬಿಟ್ಟಿ ಹೋರಾಟ, ಬಿಟ್ಟಿ ಪ್ರಚಾರ ತೆಗೆದುಕೊಳ್ಳುತ್ತಾರೆ. ಹಸಿರು ಶಾಲು ಹಾಕಿ ರೈತ ಮುಖಂಡ ಅಂತಾರೆ ಅವರು. ಉಳುಮೆ ಮಾಡಿ ಎಷ್ಟು ವರ್ಷ ಆಯಿತು’ ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು