ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿ ಶೀಟರ್ ಕೊಲೆ ಆರೋಪಿ ಕಾಲಿಗೆ ಗುಂಡೇಟು

Last Updated 6 ಮೇ 2020, 20:23 IST
ಅಕ್ಷರ ಗಾತ್ರ

ಬೆಂಗಳೂರು: ರೌಡಿ ಶೀಟರ್ ಕರಣ್ ಸಿಂಗ್‌ನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆತನ ಸ್ನೇಹಿತ, ಮತ್ತೊಬ್ಬ ರೌಡಿ ಪ್ರಭು ಎಂಬಾತನ ಕಾಲಿಗೆ ಗುಂಡು ಹೊಡೆದು ಬುಧವಾರ ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ.

ಬಾಗಲಗುಂಟೆ ಠಾಣೆ ಪಿಎಸ್ಐ ಶ್ರೀಕಂಠೇಗೌಡ ನೇತೃತ್ವದ ತಂಡ ಆಚಾರ್ಯ ಕಾಲೇಜು ಬಳಿ ಸಾಸಿವೆಘಟ್ಟದಲ್ಲಿ ಈ ಕಾರ್ಯಾಚರಣೆ ನಡೆಸಿದೆ.

ತನ್ನನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಪ್ರಭು ಯತ್ನಿಸಿದ್ದಾನೆ.ಕಾರ್ಯಾಚರಣೆ ವೇಳೆ ಹೆಡ್‌ ಕಾನ್‌ಸ್ಟೆಬಲ್‌ ಹನುಮಂತೇಗೌಡ ಗಾಯಗೊಂಡಿದ್ದಾರೆ. ಈ ವೇಳೆ ಪೊಲೀಸರು ಆತನ ಎಡ ಕಾಲಿಗೆ ಗುಂಡು ಹೊಡೆದಿದ್ದಾರೆ.

ಸಿಡಿದೇಹಳ್ಳಿ ವೃತ್ತದ ಬಳಿ ಇದೇ 4ರಂದು ಹಾಡಹಗಲು ನಡುರಸ್ತೆಯಲ್ಲೇ ರೌಡಿಶೀಟರ್ ಕರಣ್‌ ಸಿಂಗ್‌ನ ಎದೆಗೆ ಚಾಕು ಇರಿದು ಕೊಲೆ ಮಾಡಿ ಪ್ರಭು ಪರಾರಿಯಾಗಿದ್ದ.

ಕರಣ್ ಸಿಂಗ್ ಮತ್ತು ಪ್ರಭು ಬಾಗಲಗುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ರೌಡಿಶೀಟರ್‌ಗಳಾಗಿದ್ದು ಇಬ್ಬರೂ ಸೇರಿ ಹೊಸ ಗ್ಯಾಂಗ್ ಕಟ್ಟಲು ಸಿದ್ದತೆ ನಡೆಸಿದ್ದರು. ಇದೇ ವಿಷಯದಲ್ಲಿ ಪ್ರಭು ಗಂಭೀರವಾಗಿ ಚರ್ಚಿಸುತ್ತಿದ್ದ. ಆದರೆ, ಆತನ ಮಾತಿನ ಕಡೆ ಗಮನ ಕೊಡದೇ ಕರಣ್ ಸಿಂಗ್ ಮತ್ತು ಅರ್ಜುನ್ ಸಿಂಗ್ ಇಬ್ಬರೂ ತಮ್ಮ ಪಾಡಿಗೆ ತಾವು ಮೊಬೈಲ್ ನಲ್ಲಿ ಪಬ್ಜಿ ಗೇಮ್ ಆಟದಲ್ಲಿ ನಿರತರಾಗಿದ್ದರು.

ಇದರಿಂದ ಕುಪಿತಗೊಂಡ ಪ್ರಭು ಜಗಳ ತೆಗೆದಿದ್ದ. ಜಗಳ ವಿಕೋಪಕ್ಕೆ ತಿರುಗಿದಾಗ ಅರ್ಜುನ್ ಸಿಂಗ್‌ಗೆ ಪ್ರಭು ಚಾಕುವಿನಿಂದ ಚುಚ್ಚಿದ್ದ. ಗಂಭೀರವಾಗಿ ಗಾಯಗೊಂಡ ಅರ್ಜುನ್ ಸಿಂಗ್‌ನನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಕರಣ್ ಸಿಂಗ್ ಆಸ್ಪತ್ರೆಯಿಂದ ಹೊರಬಂದು ಪ್ರಭು ಮೇಲೆ ಜಗಳ ಮಾಡಿದ್ದ. ಈ ವೇಳೆ ಕರಣ್ ಸಿಂಗ್‌ಗೂ ಪ್ರಭು ಚಾಕುವಿನಿಂದ ಇರಿದಿದ್ದ. ತೀವ್ರ ಗಾಯಗೊಂಡ ಕರಣ್ ಸಿಂಗ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎಂದು ಪ್ರಭು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.

ನಶೆಯಲ್ಲಿ ಜಗಳ: ಕೊಲೆಯಲ್ಲಿ ಅಂತ್ಯ
ಕೆ.ಆರ್.ಪುರದ ಆವಲಹಳ್ಳಿ ಬಳಿ ಮಂಗಳವಾರ ರಾತ್ರಿ 10.30ರ ಸುಮಾರಿಗೆ ಕುಡಿದ ನಶೆಯಲ್ಲಿ ಸ್ನೇಹಿತರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದೆ.

ಹಂಚರಹಳ್ಳಿಯ ನಿವಾಸಿ ವಿನಯ್ (32) ಕೊಲೆಯಾದ ಯುವಕ. ಪೂರ್ವ ತಾಲ್ಲೂಕಿನ ಹಂಚರಹಳ್ಳಿಯ ಚರ್ಚ್ ಬಳಿ ಈ ಘಟನೆ ನಡೆದಿದೆ.

ಮೇ 4ರಂದು ಮದ್ಯದ ನಶೆಯಲ್ಲಿ ಹಂಚರಹಳ್ಳಿಯ ಪ್ರಶಾಂತ್, ಮಧು, ರಾಜ್‌ಕುಮಾರ್ ಮತ್ತು ವಿನಯ್‌ ನಡುವೆ ಜಗಳ ನಡೆದಿತ್ತು. ಸ್ಥಳೀಯರು ಜಗಳ ಬಿಡಿಸಿ ಸಮಾಧಾನ ಮಾಡಿ ಕಳುಹಿಸಿದ್ದರು.

ಈ ಘಟನೆ ಬಳಿಕ ವಿನಯ್ ವಿರುದ್ಧ ಆಕ್ರೋಶಗೊಂಡಿದ್ದ ಪ್ರಶಾಂತ್, ಮಧು, ರಾಜ್‌ಕುಮಾರ್ ಸಂಚು ರೂಪಿಸಿ, ಹಂಚರಹಳ್ಳಿ ಚರ್ಚ್ ಬಳಿ ವಿನಯ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT