ಮಂಗಳವಾರ, ಫೆಬ್ರವರಿ 25, 2020
19 °C
ಪಾರ್ಶ್ವವಾಯು ಪೀಡಿತ ಪತಿಯ ಸ್ಥಿತಿಯೂ ಚಿಂತಾಜನಕ

ಪತ್ನಿ ಹತ್ಯೆ ಪ್ರಕರಣ: ಮನೆ ಮಾಲೀಕನ ಮಗಳೂ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ಫೆ. 11ರಂದು ನಡೆದಿದ್ದ ಮನೆ ಮಾಲೀಕನ ಪತ್ನಿ ಹತ್ಯೆ ಪ್ರಕರಣದಲ್ಲಿ, ಆರೋಪಿಯಿಂದ ಹಲ್ಲೆಗೀಡಾಗಿದ್ದ ಮನೆ ಮಾಲೀಕನ ಮಗಳು ಚೈತ್ರಾ (15) ಸ್ಥಳೀಯ ಆಸ್ಪತ್ರೆಯಲ್ಲಿ ಶುಕ್ರವಾರ ನಸುಕಿನಲ್ಲಿ ಅಸುನೀಗಿದ್ದಾಳೆ. 

ಹೆಗ್ಗನಹಳ್ಳಿ ಎಂಟನೇ ಕ್ರಾಸ್‍ನ ಮನೆಯೊಂದರಲ್ಲಿ ಲಕ್ಷ್ಮಿ, ಅವರ ಪತಿ ಶಿವರಾಜ್ (44) ಹಾಗೂ ಮಗಳು ಚೈತ್ರಾ ವಾಸವಿದ್ದರು. ಅವರ ಮನೆಯಲ್ಲೇ ಬಾಡಿಗೆಗಿದ್ದ ರಂಗಧಾಮಯ್ಯ (37) ಎಂಬಾತನೇ ಮೂವರ ಮೇಲೂ ಮಾರಕಾಸ್ತ್ರಗಳಿಂದ ಹೊಡೆದಿದ್ದ. ಲಕ್ಷ್ಮಿ ಅವರು ಮನೆಯಲ್ಲೇ ಮೃತಪಟ್ಟಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಶಿವರಾಜ್ ಹಾಗೂ ಚೈತ್ರಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪಾರ್ಶ್ವವಾಯು ಪೀಡಿತರಾಗಿರುವ ಶಿವರಾಜ್‌, ಎಡಗೈ ಮತ್ತು ಎಡಗಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಅವರ ಮೇಲೂ ಹಲ್ಲೆ ನಡೆಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿರುವುದಾಗಿ ವೈದ್ಯರು ತಿಳಿಸಿದರು.

‘ಕೃತ್ಯದ ಬಳಿಕ ಹೊಸದುರ್ಗದ ರಂಗಧಾಮಯ್ಯ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ಸಂಬಂಧ ಬೋರಮ್ಮ ಎಂಬುವರು ನೀಡಿರುವ ದೂರು ಆಧರಿಸಿ ತನಿಖೆ ಕೈಗೊಳ್ಳಲಾಗಿದೆ’ ಎಂದರು.

8ನೇ ತರಗತಿ ವಿದ್ಯಾರ್ಥಿನಿ: ‘ಶಿವರಾಜ್ ಹಾಗೂ ಲಕ್ಷ್ಮಿ ದಂಪತಿಗೆ ಇಬ್ಬರು ಮಕ್ಕಳು. ಹಿರಿಯ ಮಗಳಾದ ಚೈತ್ರಾ, 8ನೇ ತರಗತಿಯಲ್ಲಿ ಓದುತ್ತಿದ್ದಳು. ಕಿರಿಯ ಮಗ ಹಾಸ್ಟೆಲೊಂದರಲ್ಲಿ ಇದ್ದರು’ ಎಂದು ಪೊಲೀಸರು ಹೇಳಿದರು.

’ದಂಪತಿಗೆ ಎರಡು ಅಂತಸ್ತಿನ ಕಟ್ಟಡವಿದೆ. ಅದರಲ್ಲಿ ನಾಲ್ಕು ಮನೆಗಳಿದ್ದು, ಒಂದರಲ್ಲಿ ದಂಪತಿ ನೆಲೆಸಿದ್ದರು. ಎರಡು ಮನೆಗಳನ್ನು ಬಿಹಾರದ ಯುವಕರಿಗೆ ಬಾಡಿಗೆಗೆ ಕೊಟ್ಟಿದ್ದರು. ಮತ್ತೊಂದು ಮನೆಯಲ್ಲಿ ರಂಗಧಾಮಯ್ಯ ಬಾಡಿಗೆಗೆ ಇದ್ದ. ಆತನ ಪತ್ನಿ ಒಂದೂವರೆ ವರ್ಷದ ಹಿಂದಷ್ಟೇ ಮೃತಪಟ್ಟಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಲಕ್ಷ್ಮಿ ಅವರೇ ಆರೋಪಿಗೆ ಊಟ ಕೊಡುತ್ತಿದ್ದರು. ಬಟ್ಟೆಯನ್ನೂ ಒಗೆಯುತ್ತಿದ್ದರು. ಅವರಿಬ್ಬರ ನಡುವೆ ಸಲುಗೆಯೂ ಇತ್ತು. ಅದು ಶಿವರಾಜ್ ಅವರಿಗೆ ಗೊತ್ತಾಗಿ ಎಚ್ಚರಿಕೆ ನೀಡಿದ್ದರು. ಅಂದಿನಿಂದಲೇ ಲಕ್ಷ್ಮಿ ಅವರು ರಂಗಧಾಮಯ್ಯನಿಂದ ದೂರವುಳಿಯಲು ಯತ್ನಿಸಿದ್ದರು. ಅದೇ ಕಾರಣಕ್ಕೆ ಆರೋಪಿಯು ಲಕ್ಷ್ಮಿ ಜೊತೆ ಪತ್ನಿ ಹಾಗೂ ಮಗಳನ್ನೂ ಕೊಲ್ಲಲು ಮುಂದಾಗಿದ್ದ’ ಎಂದು ಮಾಹಿತಿ ನೀಡಿದರು.

ಅಜ್ಜಿ, ತಮ್ಮನಿಗೆ ಮೃತದೇಹ ಹಸ್ತಾಂತರ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚೈತ್ರಾಳ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಶುಕ್ರವಾರ ಮಧ್ಯಾಹ್ನವೇ ಮೃತದೇಹವನ್ನು ಅಜ್ಜಿ (ತಾಯಿ ಲಕ್ಷ್ಮಿ ಅಮ್ಮ) ಹಾಗೂ ತಮ್ಮನಿಗೆ ಹಸ್ತಾಂತರಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು