ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಬ್ಯಾಗ್‌ಗಳಲ್ಲಿ 50 ಕೆ.ಜಿ ಮರಳು: ನಿರಾಣಿ

Last Updated 30 ಜೂನ್ 2021, 21:47 IST
ಅಕ್ಷರ ಗಾತ್ರ

ಬೆಂಗಳೂರು: ಇನ್ನು ಮುಂದೆ ತಲಾ 50 ಕೆ.ಜಿ ಬ್ಯಾಗ್‌ಗಳಲ್ಲಿ ಮರಳು ಮಾರಾಟ ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ಧರಿಸಿದೆ.

ಕಲ್ಲು ಗಣಿಗಾರಿಕೆ, ಮರಳು ಕುರಿತು ಜಿಲ್ಲಾಧಿಕಾರಿಗಳು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಜತೆ ವಿಡಿಯೊ ಸಂವಾದ ನಡೆಸಿದ ಬಳಿಕ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ, ‘ಮನೆ ಕಟ್ಟುವವರು ಹಾಗೂ ಇತರರಿಗೆ ಸುಲಭವಾಗಿ ಮತ್ತು ಕೈಗೆಟಕುವ ದರದಲ್ಲಿ ಮರಳು ಸಿಗುವಂತೆ ಮಾಡಲು ಈ ಯೋಜನೆ ಜಾರಿಗೆ ತರಲಾಗುತ್ತಿದೆ.1 ಟನ್ ಮತ್ತು ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿಯೂ ಮರಳು ಖರೀದಿಸಬಹುದು’ ಎಂದರು.

‘ಪ್ರಾಯೋಗಿಕವಾಗಿ ರಾಜ್ಯದ ಐದು ಕಡೆ ಮಾರಾಟ ಘಟಕಗಳನ್ನು ಆರಂಭಿಸಲಾಗುವುದು. ಬ್ಯಾಗ್‍ಗಳನ್ನು ಸಿದ್ಧಪಡಿಸುವುದು, ಸಾಗಣೆ ಸೇರಿದಂತೆ ಎಲ್ಲ ರೀತಿಯ ತರಬೇತಿಯನ್ನು ಸಂಬಂಧಪಟ್ಟವರಿಗೆ ನೀಡಲಾಗುವುದು.ಬ್ಯಾಗ್ ಮೂಲಕ ಮಾರಾಟ ಮಾಡುವಾಗ ಎ, ಬಿ ಮತ್ತು ಸಿ ಶ್ರೇಣಿ ಎಂದು ವರ್ಗೀಕರಿಸಲಾಗುವುದು. ಮೊದಲು ಸ್ಟಾಕ್ ಯಾರ್ಡ್‍ಗಳಲ್ಲಿ ಪ್ರತ್ಯೇಕಗೊಳಿಸಿ, ಬಳಿಕ ವಿತರಿಸಲಾಗುವುದು’ ಎಂದು ತಿಳಿಸಿದರು.

‘ಮರಳು ಸಾಗಣೆ ವೇಳೆ ಕನಿಷ್ಠ ಶೇ 25ರಿಂದ 30ರಷ್ಟು ಅನುಪಯುಕ್ತವಾಗುತ್ತಿದೆ. ಇದನ್ನು ತಪ್ಪಿಸಲು ಮದ್ಯವನ್ನು ಯಾವ ರೀತಿ ಕರ್ನಾಟಕ ರಾಜ್ಯ ಪಾನೀಯ ನಿಗಮದ ಮೂಲಕ ಮಾರಾಟ ಮಾಡಲಾಗುತ್ತದೆಯೊ ಅದೇ ರೀತಿಯಲ್ಲಿ, ತನ್ನದೇ ಸಂಸ್ಥೆಯ ಮೂಲಕ ಬ್ಯಾಗ್‌ಗಳಲ್ಲಿ ಮರಳು ಮಾರಾಟ ಮಾಡಲು ಇಲಾಖೆ ಉದ್ದೇಶಿಸಿದೆ’ ಎಂದು ವಿವರಿಸಿದರು.

‘₹ 5 ಲಕ್ಷಕ್ಕಿಂತ ಕಡಿಮೆ ಮೊತ್ತದಲ್ಲಿ ಮನೆ ಕಟ್ಟಿಸಿಕೊಳ್ಳುವವರಿಗೆ ಯಾವುದೇ ರೀತಿಯ ರಾಜಧನ ಕಟ್ಟಿಸಿಕೊಳ್ಳುವುದಿಲ್ಲ. ಬಡವರು, ಬಡತನರೇಖೆಗಿಂತ ಕೆಳಗಿನವರು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಶ್ರಯ ಮನೆ ಕಟ್ಟಿಸಿಕೊಳ್ಳುವವರಿಗೆ ಉಚಿತವಾಗಿ ಮರಳು ವಿತರಿಸಲಾಗುವುದು’ ಎಂದು ತಿಳಿಸಿದರು.

*

ದೇಶಕ್ಕೆ ಮಾದರಿಯಾಗುವ ನೂತನ ಮರಳು ನೀತಿ ಸಿದ್ದವಾಗಿದೆ. ಮುಖ್ಯಮಂತ್ರಿ ಜೊತೆ ಚರ್ಚಿಸಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.
-ಮುರುಗೇಶ ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT