ಮಂಗಳವಾರ, ಏಪ್ರಿಲ್ 20, 2021
30 °C
ಮೂರೂವರೆ ವರ್ಷದಿಂದ ನಡೆಯುತ್ತಿರುವ ಕೆಳ ಸೇತುವೆ ನಿರ್ಮಾಣ

ಮುಕ್ತಾಯದ ಹಂತಕ್ಕೆ ಮುತ್ತುರಾಜ್ ಜಂಕ್ಷನ್ ಕಾಮಗಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕುಂಟುತ್ತಾ ಸಾಗಿದ್ದ ಹೊಸಕೆರೆಹಳ್ಳಿಯ ಮುತ್ತುರಾಜ್‌ ಜಂಕ್ಷನ್‌ನಲ್ಲಿ ಕೆಳ ಸೇತುವೆ ಕಾಮಗಾರಿ ಕೊನೆಗೂ ಮುಕ್ತಾಯದ ಹಂತ ತಲುಪಿದೆ.

ಬಿಬಿಎಂಪಿ ನಿರ್ವಹಿಸುತ್ತಿರುವ ಈ ಕಾಮಗಾರಿ ಆರಂಭವಾಗಿ ಮೂರೂವರೆ ವರ್ಷಗಳು ಕಳೆದಿವೆ. ಇದೇ ಮಾರ್ಚ್‌ನೊಳಗೆ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಹೇಳಿದ್ದ ಪಾಲಿಕೆ, ಮುಕ್ತಾಯಗೊಳಿಸಲು ಈಗಲೂ ಹೆಣಗುತ್ತಿದೆ.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಸಿಇಆರ್‌ಟಿ) ಕೇಂದ್ರ ಕಚೇರಿ ಬಳಿ ಕಾಮಗಾರಿ ನಡೆಯುತ್ತಿದ್ದು, ಈ ಸಲುವಾಗಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಹೊಸಕೆರೆಹಳ್ಳಿ, ಗುರುದತ್ತ ಲೇಔಟ್‌ ನಿವಾಸಿಗಳು ಸುಮಾರು 2 ಕಿ.ಮೀ.ನಷ್ಟು ಸುತ್ತು ಬಳಸಿ ಸಂಚರಿಸಬೇಕಾಗಿದೆ. ನಿತ್ಯವೂ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ.

ಈ ನಡುವೆ, ಸೀತಾ ಸರ್ಕಲ್ ಕಡೆಗಿನ ರಸ್ತೆ ಅಗೆದು ಹಾಗೇ ಬಿಡಲಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. 

ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ಹೊರವರ್ತುಲ ರಸ್ತೆಯಲ್ಲಿ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ನಾಯಂಡಹಳ್ಳಿವರೆಗೆ ಸಿಗ್ನಲ್‌ ಮುಕ್ತ ಕಾರಿಡಾರ್‌ ನಿರ್ಮಿಸುವ ಯೋಜನೆಯಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದೇ ಯೋಜನೆಯಡಿ ದಾಲ್ಮಿಯಾ ಜಂಕ್ಷನ್‌, ಡಾಲರ್ಸ್‌ ಕಾಲೋನಿ ಕೆಳ ಸೇತುವೆ ನಿರ್ಮಾಣವೂ ಸೇರಿಕೊಂಡಿದೆ. ಮೂರು ಸೇತುವೆಗಳ ನಿರ್ಮಾಣಕ್ಕೆ 18 ತಿಂಗಳ ಗಡುವು ನೀಡಲಾಗಿತ್ತು. ಇವುಗಳ ಪೈಕಿ ಮುತ್ತುರಾಜ್ ಜಂಕ್ಷನ್ ಕಾಮಗಾರಿ ಮಾತ್ರ ಬಾಕಿ ಇದೆ.

ಸದ್ಯ ಸೇತುವೆ ನಿರ್ಮಾಣ, ಅದರ ಕೆಳಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕೆಲಸ ಮುಗಿದಿದೆ. ಒಂದು ಕಡೆಯ ತಡೆಗೋಡೆ ಮತ್ತು ರಸ್ತೆ ವಿಭಜಕ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

‘ಮೂರೂವರೆ ವರ್ಷದಿಂದ ಕಾಮಗಾರಿ ಅಮೆಗತಿಯಲ್ಲಿ ಸಾಗಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಬೆಳಿಗ್ಗೆ ಮತ್ತು ಸಂಜೆ ವಾಹನ ದಟ್ಟಣೆ ಹೆಚ್ಚಿರುತ್ತದೆ. ಸಿಲ್ಕ್ ಬೋರ್ಡ್ ಕಡೆಯಿಂದ ಬರುವ ವಾಹನಗಳು ಈ ಜಂಕ್ಷನ್ ದಾಟಲು ಕನಿಷ್ಠ 45 ನಿಮಿಷ ಬೇಕಾಗುತ್ತಿದೆ. ಕಾಮಗಾರಿ ಆರಂಭಿಸುವಾಗ ಇದ್ದ ಉತ್ಸಾಹವನ್ನು ಕೆಲಸ ಪೂರ್ಣಗೊಳಿಸುವ ತನಕ ಅಧಿಕಾರಿಗಳು ಇಟ್ಟುಕೊಂಡಿಲ್ಲ. ಬಾಕಿ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು’ ಎಂದು ಕ್ಯಾಬ್ ಚಾಲಕ ಮುನಿರಾಜು ಒತ್ತಾಯಿಸಿದರು.

ಈ ಮೊದಲು ಸ್ಥಳಕ್ಕೆ ಭೇಟಿ ನೀಡಿದ್ದ ಮೇಯರ್ ಗಂಗಾಂಬಿಕೆ, ಕಾಮಗಾರಿ ನಿಧಾನವಾಗಿ ನಡೆಯುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.

‘ರಸ್ತೆಯ ಪಕ್ಕದಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾರ್ಯ, ನೆಲದಾಳದಲ್ಲಿನ ಕೇಬಲ್ ತೆರವು ಕೆಲಸದಿಂದ ಕಾಮಗಾರಿ ವಿಳಂಬವಾಗಿದೆ. ಇದೀಗ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಚಿಕ್ಕ ಕೆಲಸಗಳಷ್ಟೇ ಬಾಕಿ ಉಳಿದಿವೆ’ ಎನ್ನುತ್ತಾರೆ ಅಧಿಕಾರಿಗಳು.

ಬಂಡೆಯೇ ಅಡ್ಡಿ

ನಿಗದಿತ ಅವಧಿಯಲ್ಲಿ ಕಾಮಗಾರಿ ಮುಕ್ತಾಯವಾಗದಿರಲು ಬಂಡೆ ಸಿಕ್ಕಿದ್ದೇ ಕಾರಣ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ಯೋಜನೆ) ಕೆ.ಟಿ.ನಾಗರಾಜ್‌ ತಿಳಿಸಿದರು.

‘ಕೆಳ ಸೇತುವೆ ನಿರ್ಮಾಣ ಮಾಡಲು ಭೂಮಿ ಅಗೆಯುವ ಸಂದರ್ಭದಲ್ಲಿ 250 ಮೀಟರ್‌ ಉದ್ದಕ್ಕೂ ಬಂಡೆ ಸಿಕ್ಕಿತ್ತು. ಅಕ್ಕಪಕ್ಕದಲ್ಲಿ ಕಟ್ಟಡಗಳು ಇರುವ ಕಾರಣ ದೊಡ್ಡ ಸಿಡಿಮದ್ದುಗಳನ್ನು ಬಳಸುವಂತಿರಲಿಲ್ಲ. ನಿಯಂತ್ರಿತ ಸಿಡಿಮದ್ದುಗಳನ್ನೇ ಬಳಸಿ ಬಂಡೆ ಒಡೆದು ತೆಗೆಯಲಾಗಿದೆ. ಇದಕ್ಕೆ ಹೆಚ್ಚಿನ ಸಮಯ ಬೇಕಾಯಿತು’ ಎಂದು ಹೇಳಿದರು.

‘ಈಗ ಅಂತಿಮ ಹಂತದ ಕಾಮಗಾರಿ ಮಾತ್ರ ಬಾಕಿ ಇದೆ. ಸದ್ಯದಲ್ಲೇ ಪೂರ್ಣಗೊಳ್ಳಲಿದ್ದು, ಸಂಚಾರಕ್ಕೆ ಮುಕ್ತಗೊಳಿಸಲಾಗುವುದು’ ಎಂದರು.

ಅಂಕಿ ಅಂಶ

₹ 18.72 ಕೋಟಿ- ಕಾಮಗಾರಿಯ ವೆಚ್ಚ

277.16 ಮೀ - ಕೆಳ ಸೇತುವೆ ಉದ್ದ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು