ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ: ಶೀಘ್ರ ಮಾದರಿ ಕಾಯ್ದೆ ಜಾರಿ

ನಬಾರ್ಡ್‌ 38ನೇ ಸಂಸ್ಥಾಪನಾ ದಿನ * ರೈತರಿಗೆ ಸನ್ಮಾನ
Last Updated 12 ಜುಲೈ 2019, 19:31 IST
ಅಕ್ಷರ ಗಾತ್ರ

ಬೆಂಗಳೂರು:‘ಎಪಿಎಂಸಿ ಕಾಯ್ದೆಯು ಐದು ದಶಕಗಳಷ್ಟು ಹಳೆಯದಾಗಿದೆ. ಮಾದರಿ ಕಾಯ್ದೆ ರೂಪಿಸಲಾಗಿದ್ದು, ಶೀಘ್ರ ಜಾರಿಗೆ ತರಲಾಗುವುದು’ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ ಹೇಳಿದರು.

ನಗರದಲ್ಲಿ ಶುಕ್ರವಾರ ಜರುಗಿದ ನಬಾರ್ಡ್‌ನ 38ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘1960ರಲ್ಲಿ ರೂಪಿಸಿದ ಕಾಯ್ದೆಯೇ ಈಗಲೂ ಇರುವುದರಿಂದ ಸಾಕಷ್ಟು ತೊಂದರೆಯಾಗಿದೆ. ದಲ್ಲಾಳಿಗಳಿಂದ ರೈತರನ್ನು ಕಾಪಾಡಬೇಕೆಂದರೆ, ಕಾಯ್ದೆ ಬದಲಾಯಿಸುವ ಅಗತ್ಯವಿದೆ’ ಎಂದರು.

‘ಎಪಿಎಂಸಿ ಅಥವಾ ಕೃಷಿ ಇಲಾಖೆಗಳಲ್ಲಿ ಡಿಜಿಟಲೀಕರಣಕ್ಕೆ ಆದ್ಯತೆ ನೀಡಬೇಕಾಗಿದೆ. ರೈತರ ಉತ್ಪನ್ನಗಳ ಸರಿಯಾದ ಬೆಲೆ ಒದಗಿಸುವುದು ಮತ್ತು ಖರೀದಿ–ಮಾರಾಟದಲ್ಲಿ ಪಾರದರ್ಶಕತೆಯನ್ನು ತರಲು ಡಿಜಿಟಲೀಕರಣ ಅಗತ್ಯವಾಗಿದೆ’ ಎಂದರು.

‘ರಾಜ್ಯ ಸರ್ಕಾರದೊಂದಿಗೆ ನಬಾರ್ಡ್‌ ಕೈಜೋಡಿಸಿದರೆ, ಗ್ರಾಮೀಣ ಭಾಗದ ಆರ್ಥಿಕ ವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳ
ಬಹುದಾಗಿದೆ. ಕೃಷಿ ಮತ್ತು ಗ್ರಾಮೀಣ ಕ್ಷೇತ್ರದ ಏಳಿಗೆಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಇವುಗಳ ಜೊತೆಗೆ ನಬಾರ್ಡ್‌ ನೀಡುವ ನೆರವನ್ನೂ ಬಳಸಿಕೊಂಡರೆ, ರೈತರ ಆರ್ಥಿಕ ಮಟ್ಟ ಸಾಕಷ್ಟು ಸುಧಾರಿಸಲಿದೆ’ ಎಂದರು.

‘ಕಳೆದ 14 ವರ್ಷಗಳಲ್ಲಿ 12 ವರ್ಷ ರಾಜ್ಯವು ಬರ ಪರಿಸ್ಥಿತಿ ಎದುರಿಸಿದೆ. ಈ ವರ್ಷವೂ ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ತೀರಾ ಕಡಿಮೆ ಮಳೆಯಾಗಿದೆ. ಜಲಸಂರಕ್ಷಣೆಯಂತಹ ಕಾರ್ಯಕ್ರಮಗಳನ್ನು ಸರ್ಕಾರ, ಬ್ಯಾಂಕುಗಳು ಹಾಗೂ ಸಂಘ–ಸಂಸ್ಥೆಗಳು ಹಮ್ಮಿಕೊಳ್ಳಬೇಕು. ನಾಗರಿಕರು ನೀರಿನ ಸಂರಕ್ಷಣೆಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು.

ಎಫ್‌ಪಿಒಗಳಿಗೆ ಉತ್ತೇಜನ: ‘ನಬಾರ್ಡ್‌ ವತಿಯಿಂದ ರಾಜ್ಯದಲ್ಲಿ 242 ರೈತ ಉತ್ಪಾದಕ ಸಂಘಟನೆ (ಎಫ್‌ಪಿಒ)ಗಳನ್ನು ರಚಿಸಲಾಗಿದೆ. ರಾಜ್ಯ ಸರ್ಕಾರವೂ ಕೂಡ ಸಾಕಷ್ಟು ಎಫ್‌ಪಿಒಗಳನ್ನು ರಚಿಸಿ, ರೈತರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದರ ಜೊತೆಗೆ, ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ’ ಎಂದು ವಂದಿತಾ ಶರ್ಮಾ ಹೇಳಿದರು.

ಹಾಸನದ ನಿಟ್ಟೂರಿನ ಹಾಸನಾಂಬ ಎಫ್‌ಪಿಒದ ಸಿಇಒ ತೇಜಮೂರ್ತಿ, ‘ರೈತರು ಮಾರುಕಟ್ಟೆಗಳಲ್ಲಿ ಅನೇಕ ಸಮಸ್ಯೆ ಎದುರಿಸುತ್ತಿದ್ದರು. ತೂಕದಲ್ಲಿ, ಬೆಲೆಯಲ್ಲಿ ಮೋಸ ಮಾಡಲಾಗುತ್ತಿತ್ತು. ನಬಾರ್ಡ್‌ನ ಅಧಿಕಾರಿಗಳು ಬಂದು ಎಫ್‌ಪಿಒ ರಚನೆಗೆ ಸಲಹೆ ನೀಡಿದರು. ಸೌಹಾರ್ದ ಕಾಯ್ದೆಯಡಿ ನೋಂದಣಿ ಮಾಡಿಸಿ, ಪರವಾನಗಿ ನೀಡಿದರು. ಆರ್ಥಿಕ ನೆರವೂ ದೊರೆಯಿತು’ ಎಂದರು.

‘ಒಂದೇ ತಿಂಗಳಲ್ಲಿ 215 ರೈತರಿಂದ 300 ಟನ್‌ ಜೋಳ ಖರೀದಿ ಮಾಡಿದೆವು. ₹52 ಲಕ್ಷ ವ್ಯವಹಾರ ನಡೆಯಿತು. ₹81 ಸಾವಿರ ಆದಾಯ ಸಿಕ್ಕಿತು’ ಎಂದು ಹೇಳಿದರು.

ಅಂಕಿ– ಅಂಶಗಳು
* ₹199 ಕೋಟಿ –ರಾಜ್ಯದ ಜಲಾನಯನ ಪ್ರದೇಶ ಅಭಿವೃದ್ಧಿಗೆ ಪ್ರಸಕ್ತ ವರ್ಷ ನಬಾರ್ಡ್‌ ಮಂಜೂರು ಮಾಡಿರುವ ಅನುದಾನ
* ₹ 85.63 ಕೋಟಿ– ರಾಜ್ಯದ ಬುಡಕಟ್ಟು ಪ್ರದೇಶ ಅಭಿವೃದ್ಧಿಗೆ ನಬಾರ್ಡ್‌ ಮಂಜೂರು ಮಾಡಿರುವ ಅನುದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT