ಒಂದು ದಿನದ ಮಟ್ಟಿಗೆ ವೈದ್ಯೆಯಾದ ಬಾಲಕಿ- ಥಲಸ್ಸೇಮಿಯಾ ರೋಗಿಯ ಕನಸು ನನಸು

ಬೆಂಗಳೂರು: ಥಲಸ್ಸೇಮಿಯಾ ರೋಗದಿಂದ ಬಳಲುತ್ತಿರುವ 9 ವರ್ಷದ ಬಾಲಕಿ ಒಂದು ದಿನದ ಮಟ್ಟಿಗೆ ವೈದ್ಯೆಯಾಗಿ ಕಾರ್ಯನಿರ್ವಹಿಸಿ, ರೋಗಿಗಳ ಯೋಗಕ್ಷೇಮ ವಿಚಾರಿಸಿದ್ದಾಳೆ.
ವೈದ್ಯೆಯಾಗಬೇಕೆಂಬ ಬಾಲಕಿಯ ಕನಸನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ವೈದ್ಯರು ಸಾಕಾರ ಮಾಡಿದ್ದಾರೆ. ಕೇರಳದ ಇರುಟ್ಟಿ ತಾಲ್ಲೂಕಿನ ಫಾತಿಮಾ ಎ.ಕೆ. ಥಲಸ್ಸೇಮಿಯಾ ರೋಗದಿಂದ ಬಳಲುತ್ತಿದ್ದ ಬಾಲಕಿ. ಅಸ್ಥಿಮಜ್ಜೆ ಕಸಿಗೆ (ಬೋನ್ ಮ್ಯಾರೊ) ಒಳಗಾಗಿದ್ದ ಫಾತಿಮಾ, ತಪಾಸಣೆ ಸಂಬಂಧ ಆಸ್ಪತ್ರೆಗೆ ಭೇಟಿ ನೀಡಿದ್ದಳು. ಈ ವೇಳೆ ದೊಡ್ಡವಳಾದ ಮೇಲೆ ವೈದ್ಯೆಯಾಗುವ ಕನಸನ್ನು ವೈದ್ಯರ ಬಳಿ ವ್ಯಕ್ತಪಡಿಸಿದ್ದಳು.
ಬಾಲಕಿಯ ಕನಸನ್ನು ಸಾಕಾರಗೊಳಿಸಲು ನಿರ್ಧರಿಸಿದ ಆಸ್ಪತ್ರೆಯ ಆಡಳಿತ ಮಂಡಳಿ, ಪೀಡಿಯಾಟ್ರಿಕ್ ಹೆಮಟಾಲಜಿ, ಆಂಕಾಲಜಿ ಮತ್ತು ಬೋನ್ ಮ್ಯಾರೊ ಟ್ರಾನ್ಸ್‌ಪ್ಲಾಂಟೇಶನ್ ವಿಭಾಗದಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುವ ಅವಕಾಶ ನೀಡಿತು. ಬಿಳಿ ಕೋಟ್ ಧರಿಸಿದ ಬಾಲಕಿ, ಸ್ಟೆತೋಸ್ಕೋಪ್ ಹಿಡಿದು ಸಲಹಾ ವೈದ್ಯರ ತಂಡದ ಜತೆಗೆ ರೋಗಿಗಳನ್ನು ವಿಚಾರಿಸಿದಳು. ಈ ವೇಳೆ ವೈದ್ಯರು ಸ್ಟೆತೋಸ್ಕೋಪ್ ನೆರವಿನಿಂದ ರೋಗಿಗಳನ್ನು ತಪಾಸಣೆ ಮಾಡುವ ವಿಧಾನವನ್ನು ತಿಳಿಸಿದರು.
ರೋಗಿಗಳೊಂದಿಗೆ ಸಮಾಲೋಚನೆ: ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ವೈದ್ಯರಿಗೆ ನೆರವಾದ ಬಾಲಕಿ, ಒಳರೋಗಿ ವಿಭಾಗದಲ್ಲಿ ರೋಗಿಗಳ ಜತೆಗೆ ಸಮಾಲೋಚನೆ ನಡೆಸಿದಳು.
‘ಒಂದು ದಿನದ ಮಟ್ಟಿಗೆ ವೈದ್ಯೆಯಾಗಿ ಕಾರ್ಯನಿರ್ವಹಿಸಿರುವುದು ಖುಷಿ ನೀಡಿದೆ. ವೈದ್ಯರು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎನ್ನುವುದನ್ನು ತಿಳಿದುಕೊಂಡೆ. ದೊಡ್ಡವಳಾದ ಬಳಿಕ ವೈದ್ಯೆಯಾಗಿ, ಬಡ ರೋಗಿಗಳ ಆರೈಕೆ ಮಾಡುತ್ತೇನೆ’ ಎಂದು ಫಾತಿಮಾ ಎ.ಕೆ. ತಿಳಿಸಿದಳು.
ಆಸ್ಪತ್ರೆಯ ಬೋನ್ ಮ್ಯಾರೊ ಟ್ರಾನ್ಸ್‌ಪ್ಲಾಂಟೇಶನ್ ವಿಭಾಗದ ನಿರ್ದೇಶಕ ಡಾ. ಸುನಿಲ್ ಭಟ್, ‘ಥಲಸ್ಸೇಮಿಯಾ, ಕ್ಯಾನ್ಸರ್ ಸೇರಿ ವಿವಿಧ ರೋಗಗಳ ಬಗ್ಗೆ ಬಹುತೇಕರಿಗೆ ತಪ್ಪು ಕಲ್ಪನೆಗಳಿವೆ. ಇದರಿಂದಾಗಿಯೇ ರೋಗಿಗಳು ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಾರೆ. ಈ ರೀತಿಯ ನಡೆಗಳಿಂದ ರೋಗಿಗಳಲ್ಲಿ ಭರವಸೆ ತುಂಬಲು ಸಾಧ್ಯ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.