ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ್ ಹುಟ್ಟುಹಬ್ಬ: ಆಯೋಜಕರು, ಅಭಿಮಾನಿಗಳ ವಿರುದ್ಧ ಬಿತ್ತು ಕೇಸ್

ಆಯೋಜಕರು, ಅಭಿಮಾನಿಗಳ ವಿರುದ್ಧ ‘ಎನ್‌ಸಿಆರ್‌’
Last Updated 16 ಫೆಬ್ರುವರಿ 2020, 20:31 IST
ಅಕ್ಷರ ಗಾತ್ರ

ಬೆಂಗಳೂರು: ನಟ ದರ್ಶನ್‌ ಹುಟ್ಟು ಹಬ್ಬದ ಆಚರಣೆಗಾಗಿ ನಗರದ ಐಡಿಯಲ್ ಹೋಮ್ಸ್‌ ಲೇಔಟ್‌ನಲ್ಲಿರುವ ಅವರ ಮನೆ ಎದುರು ಶನಿವಾರ ತಡರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಸ್ಥಳೀಯರಿಗೆ ಕಿರಿಕಿರಿ ಉಂಟಾಗಿದ್ದು, ಈ ಸಂಬಂಧ ರಾಜರಾಜೇಶ್ವರಿನಗರ ಠಾಣೆಯಲ್ಲಿ ಎನ್‌ಸಿಆರ್‌ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ.

‘ದರ್ಶನ್ ಅಭಿಮಾನಿ’ ಎಂದು ಹೇಳಿಕೊಂಡು ಐಡಿಯಲ್ ಹೋಮ್ಸ್‌ ಲೇಔಟ್‌ನಲ್ಲೆಲ್ಲ ಓಡಾಡಿದ ಕೆಲವರು ರಾತ್ರಿಯೆಲ್ಲ ಕಿರುಚಾಡಿ ಸ್ಥಳೀಯರಿಗೆ ತೊಂದರೆ ನೀಡಿದರು. ಈ ಬಗ್ಗೆ ಹಲವು ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಠಾಣೆಗೂ ದೂರು ನೀಡಿದ್ದಾರೆ.

‘ಶನಿವಾರ ಸಂಜೆಯಿಂದಲೇ ಎಲ್ಲಿಂದಲೋ ಜನ ಲೇಔಟ್‌ಗೆ ಬಂದಿದ್ದರು. ಇಡೀ ಲೇಔಟ್‌ನಲ್ಲಿ ಗಲಾಟೆ ವಾತಾವರಣ ನಿರ್ಮಾಣವಾಗಿತ್ತು. ಕೆಲವರು ಸ್ಥಳೀಯರ ಮನೆಯ ಗೇಟ್‌ ಹತ್ತಿ ಒಳಗೆ ನುಗ್ಗಿ ಸಸಿಗಳಿದ್ದ ಕುಂಡ ಹಾಗೂ ವಿದ್ಯುತ್ ದೀಪಗಳನ್ನು ಒಡೆದು ಹಾಕಿದರು. ಮನೆಯ ಟೆರೇಸ್ ಏರಿ ವಿಚಿತ್ರವಾಗಿ ವರ್ತಿಸಿದರು. ರಾತ್ರಿಯೆಲ್ಲ ಭಯದಲ್ಲೇ ಕಾಲ ಕಳೆದೆವು’ ಎಂದು ನಿವಾಸಿಯೊಬ್ಬರು ದೂರಿದ್ದಾರೆ.

ಇನ್ನೊಬ್ಬ ನಿವಾಸಿ, ‘ಬಹುತೇಕರು ಮದ್ಯದ ಅಮಲಿನಲ್ಲಿದ್ದರು. ತಡರಾತ್ರಿ 2ರಿಂದ ನಸುಕಿನವರೆಗೂ ಕುಡುಕರ ಹಾವಳಿ ತಡೆಯಲು ಆಗಲಿಲ್ಲ.ಪೊಲೀಸರೇ ಲಾಠಿಯಿಂದ ಅಭಿಮಾನಿಗಳನ್ನು ಚದುರಿಸಿ ಸ್ಥಳದಿಂದ ಕಳುಹಿಸಿದರು’ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಜರಾಜೇಶ್ವರಿನಗರ ಠಾಣೆ ಪೊಲೀಸರು, ‘ಗಲಾಟೆ ಹಾಗೂ ಅಪರಿಚಿತರು ತೊಂದರೆ ನೀಡಿದ ಬಗ್ಗೆ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದಾರೆ. ನಿವಾಸಿಯೊಬ್ಬರ ಕಾರನ್ನು ಕೆಲವರು ಜಖಂ ಮಾಡಿದ್ದಾರೆ. ಅವರು ನೀಡಿರುವ ದೂರು ಆಧರಿಸಿ ಎನ್‌ಸಿಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದರು.

‘ಕಾರ್ಯಕ್ರಮ ಆಯೋಜಕರು ಹಾಗೂ ಕೆಲ ಅಭಿಮಾನಿಗಳನ್ನು ಆರೋಪಿಯನ್ನಾಗಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT