ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ 4 ವರ್ಷಗಳಲ್ಲಿ 2,557 ಶಿಶುಗಳ ಮರಣ

ನಗರದಲ್ಲಿ ವಾರ್ಷಿಕ ಸಾವಿರದ ಗಡಿ ದಾಟಿದ್ದ ಪ್ರಕರಣ ಇಳಿಮುಖ
Published 29 ಮಾರ್ಚ್ 2024, 22:25 IST
Last Updated 29 ಮಾರ್ಚ್ 2024, 22:25 IST
ಅಕ್ಷರ ಗಾತ್ರ

ಬೆಂಗಳೂರು: ಅವಧಿ ಪೂರ್ವ ಜನನ, ಉಸಿರಾಟದ ಸಮಸ್ಯೆ ಸೇರಿ ವಿವಿಧ ಕಾರಣಗಳಿಂದ ನಗರದಲ್ಲಿ ನಾಲ್ಕು ವರ್ಷಗಳಲ್ಲಿ 2,557 ನವಜಾತ ಶಿಶುಗಳು ಮೃತಪಟ್ಟಿವೆ. 

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಕಳೆದ ಮೂರು ವರ್ಷಗಳಿಂದ ಶಿಶು ಮರಣ ಪ್ರಕರಣಗಳು ನಗರದಲ್ಲಿ ಏರುಗತಿ ಪಡೆದಿತ್ತು. 2022–23ನೇ ಸಾಲಿನಲ್ಲಿ ಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಟಿತ್ತು. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಇಷ್ಟು ಪ್ರಕರಣಗಳು ವರದಿಯಾಗಿರಲಿಲ್ಲ. 2023–24ನೇ ಸಾಲಿನಲ್ಲಿ ಮರಣ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ.  

ನವಜಾತ ಶಿಶು ಮತ್ತು ಐದು ವರ್ಷದೊಳಗಿನ ಮಕ್ಕಳ ಮರಣ ದರವನ್ನು ಕಡಿತಗೊಳಿಸಲು ಹಾಗೂ ಮಕ್ಕಳ ಆರೋಗ್ಯ ಸುಧಾರಿಸಲು ಆರೋಗ್ಯ ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ವಿಶೇಷ ನವಜಾತ ಶಿಶು ಆರೈಕೆ ಘಟಕ, ಕಾಂಗರೂ ಮದರ್‌ ಕೇರ್, ತಾಯಿ ಎದೆ ಹಾಲುಣಿಸುವ ಕೇಂದ್ರಗಳ ಸ್ಥಾಪನೆ, ನವಜಾತ ಶಿಶುಗಳ ಆಂಬುಲೆನ್ಸ್ ಸೇವೆ ಸೇರಿ ವಿವಿಧ ಯೋಜನೆಗಳ ಮೂಲಕ ನವಜಾತ ಶಿಶುಗಳ ಆರೈಕೆ ಹಾಗೂ ಚಿಕಿತ್ಸೆಗೆ ಕ್ರಮವಹಿಸಲಾಗಿದೆ. ಸ್ತನ್ಯಪಾನ ಸಪ್ತಾಹದಂತಹ ಸಮುದಾಯ ಜಾಗೃತಿ ಕಾರ್ಯಕ್ರಮಗಳ ಮೂಲಕವೂ ಶಿಶುಗಳ ಆರೋಗ್ಯ ಸುಧಾರಣೆಗೆ ಆದ್ಯತೆ ನೀಡಲಾಗಿದೆ. ಇಷ್ಟಾಗಿಯೂ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಣ ಪ್ರಕರಣಗಳು ವರದಿಯಾಗುತ್ತಿವೆ. 

ತಾಯಿ–ಮಗುವಿನ ಚಿಕಿತ್ಸೆಗಾಗಿಯೇ ಸರ್ಕಾರಿ ಹಾಗೂ ಖಾಸಗಿ ವ್ಯವಸ್ಥೆಯಡಿ ನಗರದಲ್ಲಿ ವಿವಿಧ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ವಾಣಿವಿಲಾಸ ಆಸ್ಪತ್ರೆ, ಎಚ್.ಎಸ್.ಐ.ಎಸ್. ಘೋಷಾ ಆಸ್ಪತ್ರೆ ಸರ್ಕಾರಿ ವ್ಯವಸ್ಥೆಯಡಿ ತಾಯಿ–ಮಗುವಿನ ಚಿಕಿತ್ಸೆಗೆ ಮೀಸಲಿವೆ. ಜಯನಗರ ಸಾರ್ವಜನಿಕ ಆಸ್ಪತ್ರೆ, ಕೆ.ಸಿ. ಜನರಲ್ ಸೇರಿ ವಿವಿಧ ಆಸ್ಪತ್ರೆಗಳಲ್ಲಿಯೂ ತಾಯಿ–ಮಗುವಿನ ವಿಭಾಗಗಳಿವೆ. ಖಾಸಗಿ ವ್ಯವಸ್ಥೆಯಡಿಯೂ ತಾಯಿ–ಮಗುವಿನ ಆರೈಕೆಗೆ ಸಂಬಂಧಿಸಿದಂತೆ ಹಲವು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ನಗರದ ಜತೆಗೆ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಅಪೌಷ್ಟಿಕತೆ, ನ್ಯುಮೋನಿಯಾ, ಉಸಿರಾಟದ ಸಮಸ್ಯೆ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳು ಶಿಶುಗಳಿಗೆ ಕಾಣಿಸಿಕೊಂಡಾಗ ಇಲ್ಲಿನ ಆಸ್ಪತ್ರೆಗಳಿಗೆ ಕರೆತರಲಾಗುತ್ತಿದೆ.

ತುರ್ತು ಚಿಕಿತ್ಸೆಗೆ ಶಿಫಾರಸು: ನಗರದಲ್ಲಿ ವರದಿಯಾಗುತ್ತಿರುವ ಶಿಶು ಮರಣ ಪ್ರಕರಣಗಳಲ್ಲಿ ಹೆಚ್ಚಿನವು ಶಿಫಾರಸು ಆಧಾರದಲ್ಲಿ ಇಲ್ಲಿನ ಆಸ್ಪತ್ರೆಗಳಲ್ಲಿ ದಾಖಲಾದ ಪ್ರಕರಣಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಇಲ್ಲಿನ ಆಸ್ಪತ್ರೆಗಳಿಗೆ ಕರೆತರಲಾಗುತ್ತಿದೆ. ಕಡಿಮೆ ತೂಕ ಇರುವ ಮಕ್ಕಳಿಗೆ ಕಾಂಗರೂ ಮದರ್‌ ಕೇರ್ ಆರೈಕೆಯನ್ನು ನಗರದ ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತಿದೆ. ಉಸಿರಾಟ ಸೇರಿ ವಿವಿಧ ಸಮಸ್ಯೆಗಳು ಇರುವ ಮಕ್ಕಳನ್ನು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಇರಿಸಬೇಕಾಗುತ್ತದೆ. ಈ ವ್ಯವಸ್ಥೆ ಹಾಗೂ ಅದನ್ನು ನಿರ್ವಹಿಸುವ ತಜ್ಞ ವೈದ್ಯರ ಕೊರತೆಯಿಂದ ಇಲ್ಲಿಗೆ ಶಿಫಾರಸು ಮಾಡಲಾಗುತ್ತಿದೆ. 

‘ಉಸಿರಾಟದ ಸಮಸ್ಯೆ ಸೇರಿ ವಿವಿಧ ಕಾರಣಗಳಿಂದ ನವಜಾತ ಶಿಶುಗಳು ಮರಣಹೊಂದುತ್ತವೆ. ಸಂಕೀರ್ಣ ಹೆರಿಗೆ ವೇಳೆಯೂ ಶಿಶುವಿಗೆ ಅಪಾಯ ಇರುತ್ತದೆ. ತಾಯಿಯ ಆರೋಗ್ಯವೂ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ತಾಯಿಯ ಬಲಹೀನತೆ, ರಕ್ತಹೀನತೆಯೂ ಮಗುವಿನ ಮೇಲೆ ಪರಿಣಾಮ ಬೀರುತ್ತದೆ’ ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ ಡಾ. ಸಂಜಯ್ ಕೆ.ಎಸ್. ತಿಳಿಸಿದರು. 

.
.
ಶಿಶುಗಳಲ್ಲಿ ಸಂಕೀರ್ಣ ಸಮಸ್ಯೆ ಕಾಣಿಸಿಕೊಂಡಾಗ ಹೆಚ್ಚಿನ ಚಿಕಿತ್ಸೆಗೆ ಇಲ್ಲಿಗೆ ಶಿಫಾರಸು ಮಾಡಲಾಗುತ್ತಿದೆ. ಅಂತಹ ಶಿಶುಗಳಿಗೂ ಅಗತ್ಯ ಚಿಕಿತ್ಸೆ ನೀಡಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ
–।ಡಾ. ಸಂಜಯ್ ಕೆ.ಎಸ್. ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ

‘ನವಜಾತ ಶಿಶುಗಳಿಗೆ ಆಂಬುಲೆನ್ಸ್‌’

‘ನವಜಾತ ಶಿಶುಗಳ ಮರಣ ಪ್ರಮಾಣ ದರವು ರಾಜ್ಯದಲ್ಲಿ ಪ್ರತಿ ಸಾವಿರ ಜನನಕ್ಕೆ 14ರಷ್ಟಿದೆ. ಇದನ್ನು ಒಂದಂಕಿಗೆ ಇಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಅವಧಿಪೂರ್ವ ಜನಿಸಿದ ಶಿಶುಗಳು ಮತ್ತು ಗಂಭೀರ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗಿರುವ ಶಿಶುಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ. ಅಂತಹವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಸುಧಾರಿತ ಜೀವ ರಕ್ಷಕ ಸೌಲಭ್ಯಗಳನ್ನು ಒಳಗೊಂಡ ಆಂಬುಲೆನ್ಸ್‌ಗಳ ಸೇವೆ ಪ್ರಾರಂಭಿಸಲಾಗಿದೆ. ವೆಂಟಿಲೇಟ‌ರ್ ಸೇರಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಇರಲಿವೆ. ಬೆಂಗಳೂರಿನಲ್ಲಿ ವಾಣಿವಿಲಾಸ ಆಸ್ಪತ್ರೆಗೆ ಈ ಆಂಬುಲೆನ್ಸ್ ಒದಗಿಸಲಾಗಿದೆ. ಜನನಿ ಶಿಶು ಸುರಕ್ಷಾದಂತಹ ಯೋಜನೆಗಳ ಜತೆಗೆ ಮರಣ ಪ್ರಮಾಣ ಕಡಿಮೆ ಮಾಡಲು ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. 

ನವಜಾತ ಶಿಶುಗಳ ಮರಣಕ್ಕೆ ಕಾರಣಗಳು

*ಅವಧಿ ಪೂರ್ವ ಜನನ ಕಡಿಮೆ ತೂಕ

* ಆರೋಗ್ಯ ಕೇಂದ್ರಗಳಲ್ಲಿ ಮೂಲಸೌಕರ್ಯ ಕೊರತೆ

* ಪೌಷ್ಟಿಕಾಂಶದ ಕೊರತೆ ।ಆರೈಕೆ ಕೊರತೆ ‌

* ಜನನ ಸಮಯದಲ್ಲಿ ಉಸಿರಾಟದ ಸಮಸ್ಯೆ ನ್ಯುಮೋನಿಯಾ

* ಜನ್ಮಜಾತ ಅಂಗವೈಕಲ್ಯ ಹೃದಯ ಕಾಯಿಲೆ ನರ ಸಂಬಂಧಿ ಸಮಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT