ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊಸತನದ ಮಮಕಾರ ಟಿ.ಎನ್‌. ಸೀತಾರಾಂ ಉತ್ಸವ’ ಡಿ.6ರಂದು

Last Updated 26 ಫೆಬ್ರುವರಿ 2023, 16:26 IST
ಅಕ್ಷರ ಗಾತ್ರ

ಬೆಂಗಳೂರು: ‘ಧಾರಾವಾಹಿ– ಸಿನಿಮಾ ನಿರ್ದೇಶಕ ಟಿ.ಎನ್‌. ಸೀತಾರಾಂ ಅವರ 75ನೇ ಜನ್ಮದಿನದ ಅಂಗವಾಗಿ ಡಿ.6ರಂದು ರಾಜ್ಯದಾದ್ಯಂತ ‘ಹೊಸತನದ ಮಮಕಾರ ಟಿ.ಎನ್‌. ಸೀತಾರಾಂ ಉತ್ಸವ’ ಆಯೋಜಿಸಲಾಗುತ್ತದೆ ಎಂದು ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಹೇಳಿದರು.

ರಂಗಮಂಡಲ ಸಾಂಸ್ಕೃತಿಕ ಸಂಘ ಮತ್ತು ಸಿವಗಂಗ ಟ್ರಸ್ಟ್‌ನಿಂದ ‘ಕಾವ್ಯ ಬದುಕಿನ ಉತ್ಸವ ಶ್ರೀನಿವಾಸ ಜಿ. ಕಪ್ಪಣ್ಣ–75 ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಭಾನುವಾರ ಮಾತನಾಡಿದರು.

‘ಸೀತಾರಾಂ ಅವರ ಜನ್ಮದಿನ ಆಚರಣೆ ನಡೆಯುವುದಿಲ್ಲ. ಅವರ ನಾಟಕ, ಸಿನಿಮಾ, ಧಾರಾವಾಹಿ, ಉತ್ಸವ, ವಿಚಾರ ಸಂಕಿರಣ ಎಲ್ಲೆಡೆ ಆಯೋಜಿಸಲಾಗುತ್ತದೆ. ಜಿಲ್ಲೆ, ತಾಲ್ಲೂಕುಗಳಲ್ಲಿ ಅಲ್ಲಿನ ಸ್ಥಳೀಯ ಸಂಸ್ಥೆಗಳಿಂದ ಅಬ್ಬರವಿಲ್ಲದೆ ಅರ್ಥಪೂರ್ಣವಾಗಿ ಶಾಲೆ, ಸಮುದಾಯ ಭವನ, ಮನೆಅಂಗಳದಲ್ಲಿ ಕಾರ್ಯಕ್ರಮ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಸೀತಾರಾಂ ಕುರಿತಂತೆ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತದೆ. ಕೆಲವು ಕಾರ್ಯಕ್ರಮಗಳಲ್ಲಿ ಸೀತಾರಾಂ ಕೂಡ ಭಾಗವಹಿಸಲಿದ್ದಾರೆ. ಎಲ್ಲವುಗಳ ನೇತೃತ್ವವನ್ನು ನಾನೇ ವಹಿಸಲಿದ್ದೇನೆ. ಅಮೆರಿಕದಲ್ಲೂ ಈ ಉತ್ಸವ ನಡೆಸುವ ಬಗ್ಗೆ ಅಲ್ಲಿನ ನಿವಾಸಿ ವಲ್ಲೀಶ್‌ ಶಾಸ್ತ್ರಿ ಭರವಸೆ ನೀಡಿದ್ದಾರೆ’ ಎಂದು ಕಪ್ಪಣ್ಣ ಹೇಳಿದರು.

‘ಕಾವ್ಯ ಬದುಕಿನ ಉತ್ಸವ ಶ್ರೀನಿವಾಸ ಜಿ. ಕಪ್ಪಣ್ಣ–75 ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮದಲ್ಲಿ ಉದ್ಘಾಟಿಸಿದ ಟಿ.ಎನ್‌. ಸೀತಾರಾಂ ಅವರು, ಕಪ್ಪಣ್ಣ ಅವರೊಂದಿಗಿನ ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಎಚ್‌.ಎಸ್‌. ವೆಂಕಟೇಶಮೂರ್ತಿ, ‘ಎಲ್ಲ ಕಲಾವಿದರು, ಸಾಹಿತಿಗಳು ಸಾಕಷ್ಟು ದುಃಖ ಅನುಭವಿಸಿದ್ದಾರೆ. ಎಲ್ಲ ರೀತಿಯ ದುಃಖ, ಕಣ್ಣೀರನ್ನು ನಿವಾರಿಸುವ ಶಕ್ತಿ ಕವಿಯ ಕವಿತ್ವಕ್ಕಿದೆ’ ಎಂದರು. ಸೀತಾರಾಂ, ಕಪ್ಪಣ್ಣ, ವಲ್ಲೀಶ್‌ ಶಾಸ್ತ್ರಿ ಅವರ ಜತೆಗಿನ ಅಮೆರಿಕ ಪ್ರವಾಸವನ್ನು ಮೆಲುಕು ಹಾಕಿದರು.

ಸಿವಗಂಗ ಟ್ರಸ್ಟ್‌ನ ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಗುಂಡಣ್ಣ, ವಿಶ್ವೇಶ್ವರಯ್ಯ ಒಂದನೇ ಬ್ಲಾಕ್‌ ನಿವಾಸಿಗಳ ಸಂಘದ ಅಧ್ಯಕ್ಷ ರಮೇಶ್‌, ಗಿರಿಯಾಚಾರ್ ಇದ್ದರು.

ಐದು ಕಾವ್ಯಗಾಯನ, ಐದು ಕವಿಗೋಷ್ಠಿಗಳು ನಡೆದವು. ಸಾಹಿತಿ ಚಂದ್ರಶೇಖರ ಕಂಬಾರ ಸರ್ವಾಧ್ಯಕ್ಷತೆ ವಹಿಸಿದ್ದರು. ‘ಒಡನಾಡಿಗಳು ಕಂಡಂತೆ ಕಪ್ಪಣ್ಣ’ ಕಾರ್ಯಕ್ರಮದಲ್ಲಿ ಅವರ ಆಪ್ತೇಷ್ಟರು ಅನುಭವಗಳನ್ನು ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT