ಮಂಗಳವಾರ, ಏಪ್ರಿಲ್ 7, 2020
19 °C
ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಎನ್‌ಐಸಿ ಸಾಫ್ಟ್‌ವೇರ್ ಬಳಕೆ ಕಡ್ಡಾಯ ಸಾಧ್ಯವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರದ ಅಂಗ ಸಂಸ್ಥೆಯಾಗಿರುವ ‘ನ್ಯಾಷನಲ್ ಇನ್ಫರ್ಮೆಟಿಕ್ ಸೆಂಟರ್ (ಎನ್‍ಐಸಿ)’ ಅಭಿವೃದ್ಧಿಪಡಿಸಿರುವ ಸಾಫ್ಟ್‌ವೇರ್ ಅನ್ನು ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪರೀಕ್ಷಾ ವ್ಯವಸ್ಥೆಗೆ ಬಳಸಿಕೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್. ಓಕಾ ಹಾಗೂ ಅಶೋಕ್ ಎಸ್‌. ಕಿಣಗಿ ಅವರಿದ್ದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.

‘ಪರೀಕ್ಷಾ ವ್ಯವಸ್ಥೆಯ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಿ ಮೈಸೂರು ವಿಶ್ವವಿದ್ಯಾಲಯ 2019ರ ಆಗಸ್ಟ್ 31ರಂದು ಕರೆದಿರುವ ಟೆಂಡರ್ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಈಗ ಬಳಸುತ್ತಿರುವ ಸಾಫ್ಟ್‌ವೇರ್‌ಗಿಂತ ಎನ್‌ಐಸಿ ಸಾಫ್ಟ್‌ವೇರ್ ಉತ್ತಮವಾಗಿದೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಅಧ್ಯಯನ ವರದಿ ಅರ್ಜಿದಾರರ ಬಳಿ ಇಲ್ಲ. ಈ ವಿಚಾರದಲ್ಲಿ ಪ್ರಾವೀಣ್ಯತೆ ಕೋರ್ಟ್‌ಗೆ ಇಲ್ಲ, ಅರ್ಜಿದಾರರಿಗೂ ಇಲ್ಲ. ಹೀಗಾಗಿ ಇಂತಹದೇ ಸಾಫ್ಟ್‌ವೇರ್‌ ಬಳಸಿ ಎಂದು ಕೋರ್ಟ್ ಹೇಳಲು ಆಗುವುದಿಲ್ಲ’ ಎಂದು ಪೀಠ ಸ್ಪಷ್ಟಪಡಿಸಿತು.

‘ಅರ್ಜಿ ಮಾನ್ಯ ಮಾಡಿದರೆ ಅದರ ಪರಿಣಾಮ ಎಲ್ಲಾ ಪರೀಕ್ಷೆಗಳ ಮೇಲೆ ಬೀರಲಿದೆ. ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಪೀಠ ಹೇಳಿತು.

‘ಭದ್ರತೆ ವಿಷಯವನ್ನು ತಜ್ಞರು ನಿರ್ಧರಿಸಬೇಕಾಗುತ್ತದೆ’ ಎಂದು ಹೇಳಿದ ಪೀಠ, ಅರ್ಜಿ ವಜಾಗೊಳಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು