ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮನೋವಿಕಾಸದ ಬಗ್ಗೆ ಅಧ್ಯಯನ: ನಿಮ್ಹಾನ್ಸ್ ಒಪ್ಪಂದ

Published 7 ನವೆಂಬರ್ 2023, 21:30 IST
Last Updated 7 ನವೆಂಬರ್ 2023, 21:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಹಾಗೂ ಲಂಡನ್‌ನಲ್ಲಿನ ತಾಯಿ–ಮಗುವಿನ ಮಾನಸಿಕ ಆರೋಗ್ಯ ಮತ್ತು ಮನೋವಿಕಾಸದ ಬಗ್ಗೆ ಅಧ್ಯಯನ ನಡೆಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಹಾಗೂ ಲಂಡನ್‌ನ ಲಿವರ್‌ಪೂಲ್ ವಿಶ್ವವಿದ್ಯಾಲಯ ಒ‍ಪ್ಪಂದ ಮಾಡಿಕೊಂಡಿವೆ.

ಈ ಅಧ್ಯಯನ ಯೋಜನೆಗೆ ಪ್ರತೀಕ್ಷಾ ಟ್ರಸ್ಟ್ ₹15.34 ಕೋಟಿ ಧನಸಹಾಯ ಮಾಡಲಿದೆ. ಈ ಒಪ್ಪಂದದಡಿ ಮಿದುಳಿನ ಸೋಂಕು, ಅಪಸ್ಮಾರ ಹಾಗೂ ಸಾಮಾನ್ಯ ನರವಿಜ್ಞಾನದ ಬಗ್ಗೆಯೂ ಅಧ್ಯಯನ ಹಾಗೂ ಸಂಶೋಧನೆ ನಡೆಸಲಾಗುತ್ತದೆ. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ‘ಸಂಸ್ಥೆಯು ‘ಪ್ಲಾಟಿನಮ್ ಜುಬಲಿ’ ಸಂಭ್ರಮದಲ್ಲಿದೆ. ಈ ಅವಧಿಯಲ್ಲಿ ಅಧ್ಯಯನಕ್ಕೆ ಆರ್ಥಿಕ ಬೆಂಬಲ ಸಿಕ್ಕಿರುವುದು ಉತ್ತಮ ಬೆಳವಣಿಗೆ. ನಮ್ಮ ಸಂಸ್ಥೆಯು 2002ರಿಂದಲೂ ಲಿವರ್‌ಪೂಲ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಮಿದುಳು ಆರೋಗ್ಯಕ್ಕೆ ಸಂಬಂಧಿಸಿದಂತೆ ವಿವಿಧ ಅಧ್ಯಯನ ನಡೆಸುತ್ತಿದೆ. ಎರಡು ದೇಶಗಳ ನಡುವೆ ಶೈಕ್ಷಣಿಕ ವಿನಿಮಯಕ್ಕೂ ಇದು ಸಹಕಾರಿಯಾಗಿದ್ದು, ಒಪ್ಪಂದದಡಿ ಮಿದುಳು ಸೋಂಕು ಸೇರಿ ಮೂರು ವಿಭಾಗಗಳಲ್ಲಿ ಅಧ್ಯಯನ ನಡೆಸಲಾಗುತ್ತದೆ. ಈ ಸಹಭಾಗಿತ್ವ ಪಿಎಚ್.ಡಿ ಕಾರ್ಯಕ್ರಮ ಹಾಗೂ ವಿವಿಧ ಸಂಶೋಧನೆಗಳನ್ನು ಒಳಗೊಂಡಿದೆ’ ಎಂದರು. 

ದೀರ್ಘಾವಧಿಯ ಅಧ್ಯಯನ: ನಿಮ್ಹಾನ್ಸ್ ಪ್ರಾಧ್ಯಾಪಕಿ ಡಾ. ಪ್ರಭಾ ಚಂದ್ರ, ‘ತಾಯಿ ಮತ್ತು ಮಗುವಿನ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ 2014ರಿಂದಲೇ ಅಧ್ಯಯನ ನಡೆಸಲಾಗುತ್ತಿದೆ. ಈಗ ವಿಭಿನ್ನ ಸಾಂಸ್ಕೃತಿಕ ವಾತಾವರಣದ ಆಯಾಮದಲ್ಲಿ ಅಧ್ಯಯನ ನಡೆಸಲಾಗುತ್ತದೆ. ನಮ್ಮ ಹಾಗೂ ಲಂಡನ್‌ನ ಸಂಸ್ಕೃತಿ ವಿಭಿನ್ನವಾಗಿದೆ. ಇಲ್ಲಿ ಬಹುಭಾಷೆ ಹಾಗೂ ಪ್ರಾದೇಶಿಕ ವೈವಿಧ್ಯತೆಯನ್ನು ಕಾಣಬಹುದು. ಎರಡು ವಿಭಿನ್ನ ಪರಿಸರಗಳಲ್ಲಿ ಬೆಳೆಯುವ ಮಕ್ಕಳ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸದಂತೆ ಅಧ್ಯಯನ ನಡೆಸಲಾಗುತ್ತದೆ’ ಎಂದು ತಿಳಿಸಿದರು. 

ಪ್ರತೀಕ್ಷಾ ಟ್ರಸ್ಟ್ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್, ‘ನರವಿಜ್ಞಾನದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ನರರೋಗದಿಂದ ದೇಶದಲ್ಲಿ ಹಲವರು ಬಳಲುತ್ತಿದ್ದಾರೆ’ ಎಂದು ಹೇಳಿದರು. 

ಲಿವರ್‌ಪೂಲ್ ವಿಶ್ವವಿದ್ಯಾಲಯದ ಕುಲಪತಿ ಟಿಮ್ ಜೋನ್ಸ್, ‘ಸಂಶೋಧನೆಗಳಿಗೆ ಆರ್ಥಿಕ ನೆರವು ನೀಡಲು ಸರ್ಕಾರಗಳಿಗೆ ಕೆಲವೊಂದು ನಿರ್ಬಂಧಗಳಿರುತ್ತವೆ. ಈ ಒಪ್ಪಂದದಡಿ ಮುಂದಿನ ಹಂತದಲ್ಲಿ ಪಿಎಚ್.ಡಿ ಕಾರ್ಯಕ್ರಮ ಪರಿಚಯಿಸಲಾಗುವುದು. ಇದರಿಂದ ವಿದ್ಯಾರ್ಥಿಗಳು ಏಕಕಾಲದಲ್ಲಿ ಎರಡು ಕಡೆ ಪಿಎಚ್.ಡಿ ಮಾಡಬಹುದು. ಅಲ್ವಾವಧಿಯ ಫೆಲೋಶಿಪ್ ಕಾರ್ಯಕ್ರಮವನ್ನೂ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT