ನಿರ್ಭಯಾ ನಿಧಿ ಟೆಂಡರ್: ಏಪ್ರಿಲ್‌ನಲ್ಲೇ ದೂರು

ಬೆಂಗಳೂರು: ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗಾಗಿ ಮೀಸಲಿಟ್ಟಿರುವ ‘ನಿರ್ಭಯಾ ನಿಧಿ’ ಯೋಜನೆಯ ₹ 612 ಕೋಟಿ ಕೆಲಸದ ಗುತ್ತಿಗೆ ವಿಚಾರ ಹೆಚ್ಚು ಸದ್ದು ಮಾಡುತ್ತಿದ್ದು, ದಿನಕ್ಕೊಂದು ಮಾಹಿತಿ ಹೊರಬೀಳುತ್ತಿದೆ.
‘ಸುರಕ್ಷ ನಗರ’ ಕೆಲಸದ ಟೆಂಡರ್ ನೀಡುವ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದು ಆರೋಪಿಸಿ ಏಪ್ರಿಲ್‌ನಲ್ಲೇ ದೂರು ಸಲ್ಲಿಕೆಯಾಗಿದ್ದ ವಿಷಯ ಈಗ ಬಯಲಾಗಿದೆ.
ಅಖಿಲ ಭಾರತೀಯ ಭ್ರಷ್ಟಾಚಾರ ನಿಗ್ರಹ ಸೊಸೈಟಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶರದ್ ಆಜಾದ್ ಎಂಬುವರು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಜಾಗೃತಿ ವಿಭಾಗಕ್ಕೆ ದೂರು ನೀಡಿದ್ದರು. ಅದೇ ದೂರು ಉಲ್ಲೇಖಿಸಿ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದ ಡಿಪಿಎಆರ್ ಅಧೀನ ಕಾರ್ಯದರ್ಶಿ, ‘ನಿಯಮಗಳ ಅನುಸಾರ ಕ್ರಮ ಕೈಗೊಂಡು ದೂರುದಾರರಿಗೆ ಮಾಹಿತಿ ನೀಡಿ’ ಎಂದಿದ್ದರು.
ಆದರೆ, ದೂರನ್ನು ನಿರ್ಲಕ್ಷಿಸಿದ್ದ ಗೃಹ ಇಲಾಖೆಯು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ದೂರು ಚಾಲ್ತಿಯಲ್ಲಿದ್ದರೂ ಟೆಂಡರ್ ಪ್ರಕ್ರಿಯೆ ನಡೆಸಲು ಅನುಮತಿ ನೀಡಿತ್ತು. ಈ ಬಗ್ಗೆ ದೂರುದಾರರು ಪ್ರಶ್ನಿಸಿದಾಗಲೂ ಗೃಹ ಇಲಾಖೆ ಯಾವುದೇ ಉತ್ತರ ನೀಡಿಲ್ಲ.
ಇದೀಗ ಎಂಟು ತಿಂಗಳ ನಂತರ ಗುತ್ತಿಗೆ ವಿಚಾರದಲ್ಲಿ ಪುನಃ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಕಮಿಷನರ್ (ಆಡಳಿತ) ಹೇಮಂತ್ ನಿಂಬಾಳ್ಕರ್ ಹಾಗೂ ಗೃಹ ಇಲಾಖೆ ಕಾರ್ಯದರ್ಶಿ ಡಿ. ರೂಪಾ ನಡುವೆ ಜಟಾಪಟಿಯೂ ಶುರುವಾಗಿದೆ.
ಪ್ರಕರಣದ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಐಪಿಎಸ್ ಅಧಿಕಾರಿಗಳ ನಡುವಿನ ಜಟಾಪಟಿ ಬಗ್ಗೆ ಮುಖ್ಯ ಕಾರ್ಯದರ್ಶಿಯವರು ಮಾತನಾಡಿದ್ದಾರೆ. ಪ್ರತಿಯೊಬ್ಬ ಅಧಿಕಾರಿಗೂ ಸೇವಾ ನಿಯಮಾವಳಿ ಇರುತ್ತದೆ. ಅದರ ಪ್ರಕಾರವೇ ಮುಖ್ಯ ಕಾರ್ಯದರ್ಶಿ ಸೂಚನೆ ನೀಡುತ್ತಾರೆ’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.