ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ಪ್ರದೇಶಗಳ ಸುತ್ತ ಕಟ್ಟಡ ನಕ್ಷೆಗಿಲ್ಲ ಒಪ್ಪಿಗೆ: ನಾಗರಿಕರಿಗೆ ಸಂಕಷ್ಟ

ಬಿಬಿಎಂಪಿ ವ್ಯಾಪ್ತಿಯಲ್ಲಿ ಹಳೆಯ ಕಟ್ಟಡಗಳ ನವೀಕರಣಕ್ಕೂ ದೊರೆಯದ ಸಮ್ಮತಿ
Last Updated 1 ಜನವರಿ 2023, 21:02 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿರುವ ರಕ್ಷಣಾ ಪ್ರದೇಶಗಳ ಸುತ್ತಮುತ್ತಲಿರುವ ಪ್ರದೇಶಗಳಲ್ಲಿ ವಸತಿ ಸೇರಿದಂತೆ ಯಾವುದೇ ರೀತಿಯ ಕಟ್ಟಡ ನಿರ್ಮಾಣ, ಪುನರ್‌ ನಿರ್ಮಾಣಕ್ಕೆ ರಕ್ಷಣಾ ಇಲಾಖೆಯ ನಿರಾಕ್ಷೇಪಣಾ ಪತ್ರ ಕಡ್ಡಾಯಗೊಳಿಸಿರುವುದು ನಾಗರಿಕರನ್ನು ಸಂಕಷ್ಟಕ್ಕೆ ದೂಡಿದೆ.

ಹೆಬ್ಬಾಳ, ಆರ್‌.ಟಿ.ನಗರ, ಅಗರ, ಹಲಸೂರು, ಬಾಣಸವಾಡಿ, ದೊಮ್ಮಲೂರು, ಯಲಹಂಕ ವಾಯುನೆಲೆ, ಜಾಲಹಳ್ಳಿ, ಯಲಹಂಕಗಳಲ್ಲಿ ರಕ್ಷಣಾ ಇಲಾಖೆಗೆ ಸೇರಿದ ಪ್ರದೇಶಗಳಿವೆ. ಈ ಪ್ರದೇಶಗಳ ಅಂಚಿನಿಂದ ನಿರ್ಬಂಧಿತ ಪ್ರದೇಶದಲ್ಲಿ ಹೊಸ ನಿರ್ಮಾಣದ ನಕ್ಷೆಗೆ ಬಿಬಿಎಂಪಿ ಅನುಮತಿ ನೀಡುತ್ತಿಲ್ಲ.

ಯಲಹಂಕ, ಜಾಲಹಳ್ಳಿ ಸೇರಿದಂತೆ ಹಲವು ಪ್ರದೇಶಗಳು ಬಿಬಿಎಂಪಿಗೆ ಸೇರುವ ಮುನ್ನವೇ ಸಾಕಷ್ಟು ಕಟ್ಟಡಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಅನುಮತಿ ಪಡೆದು ನಿರ್ಮಾಣವಾಗಿವೆ. ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಮೇಲೆಯೂ ವಸತಿ, ವಸತಿ ಸಂಕೀರ್ಣ ಸೇರಿದಂತೆ ವಾಣಿಜ್ಯ ಕಟ್ಟಡಗಳಿಗೆ ನಕ್ಷೆ ನೀಡಲಾಗಿದೆ.ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ನೀಡಲಾಗಿದೆ. ಆದರೆ, ಅದೇ ಪ್ರದೇಶದಲ್ಲಿರುವ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆಗೆ ಸಮ್ಮತಿ ನೀಡುತ್ತಿಲ್ಲ. ಅಕ್ಕಪಕ್ಕದಲ್ಲಿ ಕಟ್ಟಡವಿದ್ದರೂ ನಿವೇಶನದಾರರು ನಿರ್ಮಾಣ ಮಾಡದಂತಾಗಿದೆ.

‘ರಕ್ಷಣಾ ಪ್ರದೇಶಗಳ ಬಫರ್‌ ಝೋನ್‌ನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮೊದಲು ರಕ್ಷಣಾ ಇಲಾಖೆ
ಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು’ ಎಂದು ಬಿಡಿಎ, ಬಿಬಿಎಂಪಿ, ಬಿಎಂಆರ್‌ಡಿಎ, ಜಿಲ್ಲಾ
ಪಂಚಾಯಿತಿ, ಬಿಐಎಎಪಿಎ, ಬಿಎಂಐಸಿ
ಎಪಿಎ, ನಗರ ಜಿಲ್ಲೆಯ ತಹಶೀಲ್ದಾರ್‌,ಚಿಕ್ಕಬಾಣಾವರ, ಹುಣಸೆಮಾರನಹಳ್ಳಿ ಪುರಸಭೆ, ತಾಲ್ಲೂಕು ಪಂಚಾಯಿತಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

‘ಬೆಂಗಳೂರು ಮಹಾನಗರ ಪಾಲಿಕೆಯ ಕಟ್ಟಡ ಉಪವಿಧಿಗಳು– 2003 ಹಾಗೂ ಪರಿಷ್ಕೃತ ಮಾಸ್ಟರ್‌ ಪ್ಲಾನ್‌ –2015ರ ವಲಯ ನಿಯಮಾವಳಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿಲ್ಲ. ಹೀಗಾಗಿ, ಜಿಲ್ಲಾ
ಧಿಕಾರಿಯವರ ಸೂಚನೆಯನ್ನು ಪಾಲಿಸಲು ನಿಯಮಗಳೇ ಇಲ್ಲ. ಅದರ ಬಗ್ಗೆ ಸ್ಪಷ್ಟ ಹಾಗೂ ಕೈಗೊಳ್ಳಬೇಕಾದ ಮಾರ್ಗಸೂಚಿಗಳ ವಿವರ ನೀಡಲು ಪತ್ರ ಬರೆಯಲಾಗಿದೆ. ಈ ವರೆಗೆ ಯಾವುದೇ ಮಾಹಿತಿ ಬಂದಿಲ್ಲ’ ಎಂದು ಬಿಬಿಎಂಪಿ ನಗರ ಯೋಜನೆ ಅಧಿಕಾರಿಗಳು ತಿಳಿಸಿದರು.

‘ರಕ್ಷಣಾ ಇಲಾಖೆಯಿಂದ ಅನುಮತಿ ಅಥವಾ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯಬೇಕೆಂದು ಬಿಬಿಎಂಪಿಯ ನಗರಯೋಜನೆ ಅಧಿಕಾರಿಗಳು ಹಾಗೂ ವಲಯ ಜಂಟಿ ಆಯುಕ್ತರು ಹೇಳುತ್ತಿದ್ದಾರೆ. ಆದರೆ, ಎಲ್ಲಿ ಪಡೆಯಬೇಕು, ಯಾವ ಕಚೇರಿ, ಯಾರನ್ನು ಕೇಳಬೇಕೆಂಬ ವಿವರ ಯಾರಲ್ಲಿಯೂ ಇಲ್ಲ. ರಕ್ಷ ಇಲಾಖೆಯ ಕೇಂದ್ರಗಳಿರುವ ಕಡೆ ಕೇಳಿದರೆ ಭದ್ರತಾ ಸಿಬ್ಬಂದಿ ಒಳಗೆ ಬಿಡುವುದಿಲ್ಲ’ ಎಂದು ನಾಗರಿಕರಾದ ರಮೇಶ್, ರಾಮಕೃಷ್ಣ, ವೇಣುಗೋಪಾಲ್‌, ಭರತ್‌ ಅಳಲು ತೋಡಿಕೊಂಡರು.

ಎಲ್ಲೆಲ್ಲಿ ನಿರ್ಬಂಧ?: ರಕ್ಷಣಾ ಇಲಾಖೆಯ ಕೇಂದ್ರದ ಕಾಂಪೌಂಡ್‌ನಿಂದ 10 ಮೀಟರ್‌ ವರೆಗಿನ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಇರುವಂತಿಲ್ಲ. ವಾಯುನೆಲೆಯಂತಹ ಕೇಂದ್ರಗಳ ಕಾಂಪೌಂಡ್‌ನಿಂದ ಈ ನಿರ್ಬಂಧ 100 ಮೀಟರ್‌ವರೆಗಿದೆ.

‘ಅಭಿಪ್ರಾಯ ಬಂದಿಲ್ಲ...’

‘ರಕ್ಷಣಾ ಇಲಾಖೆಯ ಕೇಂದ್ರಗಳಿರುವ ಪ್ರದೇಶದ ಸುತ್ತಮುತ್ತ ಕಟ್ಟಡಗಳ ನಕ್ಷೆಗೆ ಅನುಮೋದನೆ ನೀಡುವಲ್ಲಿ ಸ್ವಲ್ಪ ತಡೆಯಾಗಿದೆ. ರಕ್ಷಣಾ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವಿದ್ದರೆ ಮಾತ್ರ ನಕ್ಷೆ ಅನುಮೋದಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಈ ಬಗ್ಗೆ ನಾಗರಿಕರ ಆಕ್ಷೇಪಣೆಗಳು ಸೇರಿದಂತೆ ಕೆಲವು ವಿವರಗಳನ್ನು ಕೇಳಲಾಗಿದೆ. ಅದಕ್ಕೆ ಇನ್ನೂ
ಯಾವುದೇ ರೀತಿಯ ಸ್ಪಷ್ಟನೆ ರಕ್ಷಣಾ ಇಲಾಖೆಯಿಂದ ಬಂದಿಲ್ಲ’ ಎಂದು ಬಿಬಿಎಂಪಿ ನಗರ ಯೋಜನೆ ಹೆಚ್ಚುವರಿ ನಿರ್ದೇಶಕ ಗಿರೀಶ್‌ ಅವರು ಹೇಳಿದರು.

‘ಇದಲ್ಲದೆ, ಯಲಹಂಕ ವೈಮಾನಿಕ ತರಬೇತಿ ಶಾಲೆಯ ರನ್‌ವೇ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಎತ್ತರದ ಕಟ್ಟಡಗಳ ತೆರವು ಸೇರಿದಂತೆ ಕೆಲವು ಮಾರ್ಗಸೂಚಿಗಳನ್ನು ನೀಡಲಾಗಿದೆ. ಎಲ್ಲ ರೀತಿಯ ಅನುಮತಿಯನ್ನು ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರಗಳಿಂದ ಪಡೆದು, ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇವುಗಳ ಮೇಲೆ ಹೇಗೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟ ವಿವರಗಳನ್ನು ನೀಡಬೇಕು ಎಂದು ಜಕ್ಕೂರು ವಿಮಾನ ನಿಲ್ದಾಣದ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಯ ನಿರ್ದೇಶಕರಿಗೆ ಅ.25ರಂದು ಪತ್ರ ಬರೆಯಲಾಗಿದೆ. ಅವರಿಂದ ಪ್ರತಿಕ್ರಿಯೆ ಬಂದಿಲ್ಲ’ ಎಂದರು.

‘ನಿಯಮ ಪಾಲಿಸಿದರೆ ಸಂಕಷ್ಟ...’

‘ಹತ್ತಾರು ವರ್ಷಗಳಿಂದ ನಾವು ಇಲ್ಲಿ ಮನೆ ಕಟ್ಟಿಕೊಂಡಿದ್ದೇವೆ. ನಕ್ಷೆ ಅನುಮೋದನೆಯನ್ನೂ ಪಡೆಯಲಾಗಿದೆ. ಆದರೆ, ಇದೀಗ ಮರು ನಿರ್ಮಾಣದ ಸಂಬಂಧ ನಕ್ಷೆ ಅನುಮೋದನೆಗೆ ಸಲ್ಲಿಸಿದರೆ ಬಿಬಿಎಂಪಿ ಸಮ್ಮತಿ ನೀಡುತ್ತಿಲ್ಲ. ರಕ್ಷಣಾ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಬೇಕೆನ್ನುತ್ತಾರೆ. ನಮ್ಮ ಮನೆಯ ಸುತ್ತಮುತ್ತಲೂ ನಾಲ್ಕಾರು ಅಂತಸ್ತಿನ ಕಟ್ಟಡಗಳಿವೆ. ಅವರಿಗೆ ಯಾವುದೇ ನಿರ್ಬಂಧ ಇಲ್ಲ. ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆದಾರರು, ಸಾಮಗ್ರಿಗಳಿಗೆಲ್ಲ ಮುಂಗಡ ನೀಡಲಾಗಿದೆ. ಸಾಕಷ್ಟು ಸಂಕಷ್ಟದಲ್ಲಿದ್ದೇವೆ. ಶೀಘ್ರ ಪರಿಹಾರ ನೀಡಲಿ’ ಎಂದು ಯಲಹಂಕದ ಪ್ರದೀಪ್‌ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT