ಬುಧವಾರ, ಜೂನ್ 23, 2021
30 °C
ವಿಧಾನ ಸಭೆಯಲ್ಲಿ ಕಾರ್ಮಿಕ ಇಲಾಖೆ ನೀಡಿರುವ ಉತ್ತರದಿಂದ ಬಹಿರಂಗ

ವಲಸೆ ಕಾರ್ಮಿಕರ ಮಾಹಿತಿಯೇ ಇಲ್ಲ!

ಅಕ್ರಂ ಮೊಹಮ್ಮದ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಲಸ ಅರಸಿ ಬೆಂಗಳೂರು ನಗರಕ್ಕೆ ಬಂದಿರುವ ವಲಸೆ ಕಾರ್ಮಿಕರ ವಿಳಾಸ, ಲಿಂಗ ಮತ್ತಿತರ ಮಾಹಿತಿಯೇ ಕಾರ್ಮಿಕ ಇಲಾಖೆ ಬಳಿ ಇಲ್ಲ!

ಸೆಪ್ಟೆಂಬರ್‌ನಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನಸಭೆಗೆ ನೀಡಿರುವ ಉತ್ತರದಲ್ಲಿ ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ ಈ ವಿಷಯ ತಿಳಿಸಿದ್ದಾರೆ. ಇದು, ಲಾಕ್‌ಡೌನ್‌ ಅವಧಿಯಲ್ಲಿ ಆರು ಲಕ್ಷ ಕಾರ್ಮಿಕರಿಗೆ ಆಹಾರ ಕಿಟ್‌ ವಿತರಿಸಿರುವುದಾಗಿ ಕಾರ್ಮಿಕ ಇಲಾಖೆ ನೀಡಿರುವ ಮಾಹಿತಿ ಕುರಿತು ಸಂದೇಹ ಸೃಷ್ಟಿಸಿದೆ.

‘ಕಟ್ಟಡ ನಿರ್ಮಾಣ ಕಾರ್ಮಿಕರ ವಿಳಾಸ ನೋಂದಣಿಗೆ ಇಲಾಖೆಯಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಹೀಗಾಗಿ ಪುರುಷ ಮತ್ತು ಮಹಿಳಾ ಕಾರ್ಮಿಕರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ’ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.

13 ಲಕ್ಷ ಕಾರ್ಮಿಕರ ನೋಂದಣಿ: ‘ಸಚಿವರ ಉತ್ತರದಲ್ಲಿ ಸತ್ಯಾಂಶವಿಲ್ಲ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 13 ಲಕ್ಷ ಕಾರ್ಮಿಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ಅವರಲ್ಲಿ 6.08 ಲಕ್ಷ ಕಾರ್ಮಿಕರಿಗೆ ಮಾತ್ರ ಆಹಾರ ಕಿಟ್‌ ವಿತರಿಸಲಾಗಿದೆ’ ಎನ್ನುತ್ತಾರೆ ಸಿಐಟಿಯು ರಾಜ್ಯ ಮಂಡಳಿ ಕಾರ್ಯದರ್ಶಿ ಕೆ.ಎನ್‌. ಉಮೇಶ್‌.

ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಸರಾಸರಿ 7,388 ಕಿಟ್‌ಗಳನ್ನು ವಿತರಿಸಿದ್ದರೆ, ಕಾಂಗ್ರೆಸ್‌ ಶಾಸಕರ ಕ್ಷೇತ್ರದಲ್ಲಿ ವಿತರಿಸಿರುವ ಕಿಟ್‌ಗಳ ಸರಾಸರಿ ಸಂಖ್ಯೆ 4,667 ಮಾತ್ರ ಎಂಬುದು ಸಚಿವರು ಸದನಕ್ಕೆ ನೀಡಿರುವ ಮಾಹಿತಿಯನ್ನು ವಿಶ್ಲೇಷಿಸಿದಾಗ ಕಂಡುಬರುತ್ತದೆ.

ಬಿಜೆಪಿ ಶಾಸಕರಿರುವ ಮಹದೇವಪುರ ಕ್ಷೇತ್ರದಲ್ಲಿ 16,710 ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 14,758 ಕಾರ್ಮಿಕರಿಗೆ ಕಿಟ್‌ ವಿತರಿಸಲಾಗಿದೆ. ಕಾಂಗ್ರೆಸ್‌ ಶಾಸಕರಿರುವ ಹೆಬ್ಬಾಳ ಕ್ಷೇತ್ರದಲ್ಲಿ 8,504 ಕಿಟ್‌ಗಳನ್ನು ಮಾತ್ರ ವಿತರಿಸಲಾಗಿದೆ.

ಲಾಕ್‌ಡೌನ್‌ ಅವಧಿಯಲ್ಲಿ 16.48 ಲಕ್ಷ ಕಟ್ಡಡ ನಿರ್ಮಾಣ ಕಾರ್ಮಿಕರಿಗೆ ತಲಾ ₹ 5,000ದಂತೆ ₹ 824.21 ಕೋಟಿ ನೆರವು ನೀಡಿರುವುದಾಗಿ ಕಾರ್ಮಿಕ ಇಲಾಖೆ ಹೇಳಿದೆ. ಆದರೆ, 6.08 ಲಕ್ಷ ಕಾರ್ಮಿಕರಿಗೆ ಮಾತ್ರ ಆಹಾರ ಕಿಟ್‌ ವಿತರಿಸಿರುವುದಾಗಿ ಮಾಹಿತಿ ನೀಡಿದೆ. ಈ ವಿಚಾರದಲ್ಲಿ ಲೋಪ ಆಗಿಲ್ಲ ಎಂದು ಇಲಾಖೆ ಹೇಳುತ್ತಿದೆ.

‘ಹೇಳಿದಷ್ಟೂ ವಿತರಿಸಿಲ್ಲ’: ‘ಶಿವಾಜಿನಗರ ಕ್ಷೇತ್ರದಲ್ಲಿ 3,097 ಕಾರ್ಮಿಕರಿಗೆ ಆಹಾರ ಕಿಟ್‌ ವಿತರಿಸಿರುವುದಾಗಿ ಕಾರ್ಮಿಕ ಇಲಾಖೆ ತಿಳಿಸಿದೆ. ಆದರೆ, ವಾಸ್ತವದಲ್ಲಿ 2,000ಕ್ಕಿಂತ ಕಡಿಮೆ ಕಾರ್ಮಿಕರಿಗೆ ಕಿಟ್‌ ವಿತರಿಸಲಾಗಿದೆ’ ಎನ್ನುತ್ತಾರೆ ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌.

ಪಕ್ಷಪಾತ ಮಾಡಿಲ್ಲ: ಹೆಬ್ಬಾರ್

‘ಕಾರ್ಮಿಕರಿಗೆ ನೆರವು ನೀಡಲು ಅವರ ವಿಳಾಸ, ಲಿಂಗದ ಮಾಹಿತಿ ಕಡ್ಡಾಯವಲ್ಲ. ಬ್ಯಾಂಕ್‌ ಖಾತೆ ವಿವರ ಬೇಕಿತ್ತು. ಅದನ್ನು ಪಡೆದು, ನೆರವು ನೀಡಲಾಗಿದೆ. ಪಕ್ಷ, ಕ್ಷೇತ್ರದ ಆಧಾರದಲ್ಲಿ ಯಾವುದೇ ರೀತಿಯಲ್ಲೂ ಪಕ್ಷಪಾತ ಮಾಡಿಲ್ಲ’ ಎಂದು ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು