ಭಾನುವಾರ, ಸೆಪ್ಟೆಂಬರ್ 19, 2021
30 °C
ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕು ಪತ್ತೆದರ ಇಳಿಕೆ

ಆ.15ರವರೆಗೆ ಬೆಂಗಳೂರಿನಲ್ಲಿ ವಾರಾಂತ್ಯ ಕರ್ಫ್ಯೂ ಇಲ್ಲ: ಸಚಿವ ಅಶೋಕ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಇದೇ 15ರವರೆಗೆ ವಾರಾಂತ್ಯದ  ಕರ್ಫ್ಯೂ ಜಾರಿಗೊಳಿಸುವುದಿಲ್ಲ. ನಂತರ ಪರಿಸ್ಥಿತಿ ನೋಡಿಕೊಂಡು ಅಗತ್ಯ ಬಿದ್ದರೆ ಮಾತ್ರ  ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಬಿಗುಗೊಳಿಸಲಿದ್ದೇವೆ’ ಎಂದು ಆರ್‌.ಅಶೋಕ ತಿಳಿಸಿದರು.

ಸುದ್ದಿಗಾರರ ಪ್ರಶ್ನೆಗಳಿಗೆ ಸೋಮವಾರ ಉತ್ತರಿಸಿದ ಅವರು, ‘ರಾಜ್ಯದಲ್ಲಿ ಸೋಂಕು ಪತ್ತೆ ದರ ಶೇ 2ಕ್ಕಿಂತ ಹೆಚ್ಚು ಇರುವ ಕಡೆ ಮಾತ್ರ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿದೆ. ನಗರದಲ್ಲಿ ಸೋಂಕು ಪತ್ತೆ ದರ ಶೇ 0.9 ದಿಂದ 0.64ಕ್ಕೆ ಇಳಿಕೆ ಆಗಿದೆ. ಇಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 179 ಮಂದಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 479 ಮಂದಿ ಮಾತ್ರ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಬಿಬಿಎಂಪಿಯ ಹೊರಗಿನ ಪ್ರದೇಶಗಳಲ್ಲಿ 68 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ವಾರಾಂತ್ಯ ಕರ್ಫ್ಯೂವಿನ ಅಗತ್ಯ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸ್ವಾತಂತ್ರ್ಯ ದಿನಾಚರಣೆಯನ್ನೂ ಕೋವಿಡ್‌ ನಿಯಂತ್ರಣ ನಿಯಮಗಳನ್ನು ಪಾಲಿಸಿ ಆಚರಣೆ ಮಾಡಲಾಗುತ್ತದೆ’ ಎಂದರು.

‘ಈ ತಿಂಗಳಲ್ಲಿ ಶ್ರಾವಣ ಶನಿವಾರವೂ ಸೇರಿದಂತೆ ನಾಲ್ಕೈದು ಹಬ್ಬಗಳು ಬರುತ್ತಿವೆ. ಈ ಸಂದರ್ಭದಲ್ಲಿ ನಗರದ ಎಲ್ಲ ದೇವಸ್ಥಾನಗಳಲ್ಲಿ ಪೂಜೆಗಳು, ಹಬ್ಬದೂಟ ಜಾಸ್ತಿ ಆಗುತ್ತವೆ. ದೇವಸ್ಥಾನಗಳಲ್ಲಿ ಕೋವಿಡ್ ನಿಯಂತ್ರಣ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲಿದ್ದೇವೆ. ಭಕ್ತರೂ ಮಾಸ್ಕ್‌ ಧರಿಸುವ ಹಾಗೂ ಅಂತರ ಕಾಪಾಡುವ ಮೂಲಕ ಮುಂಜಾಗ್ರತೆ ವಹಿಸಬೇಕು’ ಎಂದರು. 

‘ಕಲಾಸಿಪಾಳ್ಯ ಹಾಗೂ ಕೆ.ಆರ್‌.ಮಾರುಕಟ್ಟೆಗಳನ್ನು ಮುಚ್ಚಿದರೆ ಬೀದಿಬದಿ ವ್ಯಾಪಾರಿಗಳು ಹಾಗೂ ರೈತರು ಜೀವನ ನಿರ್ವಹಣೆ ಸಮಸ್ಯೆ ಎದುರಿಸುತ್ತಾರೆ. ಈ ಮಾರುಕಟ್ಟೆಗೆ ಒಮ್ಮೆಗೆ ನಿರ್ದಿಷ್ಟ ಸಂಖ್ಯೆಯ ಜನರಿಗೆ ಮಾತ್ರ ಪ್ರವೇಶಾವಕಾಶ ನೀಡಲು ಸಾಧ್ಯವೇ ಎಂಬ ಬಗ್ಗೆ ನಗರ ಪೊಲೀಸ್‌ ಕಮಿಷನರ್‌ ಹಾಗೂ ಇತರ ಪೊಲೀಸ್‌ ಅಧಿಕಾರಿಗಳ ಜೊತೆ ಚರ್ಚಿಸಿದ್ದೇವೆ. ಇಲ್ಲಿ ಬಿಗಿ ಕ್ರಮ ಜಾರಿಗೊಳಿಸುತ್ತೇವೆ’ ಎಂದರು.

ವಾರಾಂತ್ಯದಲ್ಲಿ ನಗರದ ಗಡಿ ಮುಚ್ಚುವ ಸಾಧ್ಯತೆ ಅಲ್ಲಗಳೆದ ಅವರು, ‘ಮಹಾರಾಷ್ಟ್ರ ಹಾಗೂ ಕೇರಳದಿಂದ ನಿತ್ಯ ಐದಾರು ಸಾವಿರ ಜನ ನಗರಕ್ಕೆ ಬರುತ್ತಿದ್ದಾರೆ. ಅವರೆಲ್ಲ ಗಡಿ ಭಾಗದಲ್ಲಿ ತಪಾಸಣಾ ಪ್ರಕ್ರಿಯೆ ಮುಗಿಸಿಯೇ ಬರಬೇಕಾದ ಸ್ಥಿತಿ ಇದೆ. ಕೇರಳದ ಗಡಿಯಲ್ಲಿ ಬಿಗಿ ತಪಾಸಣೆ ಕೈಗೊಂಡಿದ್ದಕ್ಕೇ ಅಲ್ಲಿನ ಮುಖ್ಯಮಂತ್ರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಅದಕ್ಕೆ ಹೆಚ್ಚಿನ ಬೆಲೆ ಕೊಟ್ಟಿಲ್ಲ. ಕರ್ನಾಟಕದಲ್ಲಿ ಕೋವಿಡ್‌ ಸ್ಥಿತಿ ಅಧ್ವಾನಕ್ಕೆ ತಲುಪಿದ್ದು ಕೇರಳದಿಂದ. ಇನ್ನು ಮುಂದೆಯೂ ಕೋವಿಡ್‌ ಸೋಂಕು ಇಲ್ಲ ಎಂಬುದನ್ನು ದೃಢಪಡಿಸುವವರನ್ನು ಮಾತ್ರ ರಾಜ್ಯದೊಳಗೆ ಬಿಟ್ಟುಕೊಳ್ಳುತ್ತೇವೆ’ ಎಂದರು.

ಲಸಿಕೆ ಕೊರತೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ರಾಜ್ಯಕ್ಕೆ ಹಂಚಿಕೆಯಾಗಿದ್ದಕ್ಕಿಂತ 1 ಕೋಟಿ ಲಸಿಕೆಯನ್ನು ಹೆಚ್ಚುವರಿಯಾಗಿ ನೀಡುವಂತೆ ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ. ಅಷ್ಟೂ ಲಸಿಕೆ ಈ ತಿಂಗಳಲ್ಲೇ ಸಿಗುವ ವಿಶ್ವಾಸ ಇಲ್ಲ. ಮುಂದಿನ ತಿಂಗಳಲ್ಲಿ ಸಿಗಬಹುದು’ ಎಂದರು.

---

'ಮಕ್ಕಳ ಕೋವಿಡ್‌ ಚಿಕಿತ್ಸೆಗೆ ನಗರದ ಪ್ರತಿ ಕ್ಷೇತ್ರದಲ್ಲೂ ಆಸ್ಪತ್ರೆ'

‘ಕೋವಿಡ್‌ನಿಂದ ಬಳಲುವ ಮಕ್ಕಳ ಆರೈಕೆಗಾಗಿ ಪದ್ಮನಾಭ ನಗರದಲ್ಲಿ ನಿರ್ಮಿಸಿರುವ ಆಸ್ಪತ್ರೆ ಉದ್ಘಾಟನೆಗೆ ಸಿದ್ಧವಾಗಿದೆ. ಇಲ್ಲಿ ಮಕ್ಕಳ ಮನರಂಜನಾ ಚಟುವಟಿಕೆಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಮಗುವಿನ ತಂದೆ ಅಥವಾ ತಾಯಿ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲೂ ಇಂತಹ ಆಸ್ಪತ್ರೆ ನಿರ್ಮಿಸಲಾಗುತ್ತದೆ’ ಎಂದರು. 

-----

‘ತರಗತಿ ಆರಂಭ– ಪೋಷಕರ ಅನುಮತಿ ಅಗತ್ಯ’

ಶಾಲಾ ಕಾಲೇಜುಗಳ ಪುನರಾರಂಭದ ಬಗ್ಗೆ ತಜ್ಞರೂ ಶಿಫಾರಸು ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲೂ ಇದರ ಬಗ್ಗೆ ಚರ್ಚೆ ಆಗಿದೆ. ಸೋಂಕು ಹರಡುವಿಕೆ ತಡೆಯಲು ಶಾಲಾ ಕಾಲೇಜುಗಳು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ತರಗತಿ ಆರಂಭಿಸಲು ಪೋಷಕರ ಅನುಮತಿ ಪಡೆಯಬೇಕು. ಪೋಷಕರು ಇಚ್ಛೆ ಇದ್ದರೆ ಮಾತ್ರ ಮಕ್ಕಳನ್ನು ಕಳುಹಿಸಬಹುದು’ ಎಂದು ಆರ್‌.ಅಶೋಕ ತಿಳಿಸಿದರು.

‘ಅನೇಕ ದೇಶಗಳು ಶಾಲಾ ಕಾಲೇಜುಗಳ ಕಾರ್ಯ ನಿರ್ವಹಣೆಯನ್ನು ನಿಲ್ಲಿಸಿಯೇ ಇಲ್ಲ. ನಮ್ಮಲ್ಲಿ 9ನೇ ತರಗತಿಗಿಂತ ಮೇಲಿನ ತರಗತಿಗಳನ್ನು ಶುರು ಮಾಡಲಿದ್ದೇವೆ. ವಿದ್ಯಾರ್ಥಿಗಳ ಹಾಜರಾತಿ ಹಾಗೂ ಕೋವಿಡ್‌ ಪರಿಸ್ಥಿತಿ ನೋಡಿಕೊಂಡು ನಂತರ 7 ಮತ್ತು 8ನೇ ತರಗತಿಗಳನ್ನು ಆರಂಭಿಸುತ್ತೇವೆ’ ಎಂದರು. 

------

 ಕೋಟ್‌....

ಕೋವಿಡ್‌ ಮೂರನೇ ಅಲೆ ಕರ್ನಾಟಕಕ್ಕೆ ಬರುತ್ತದೋ, ಇಲ್ಲವೋ ಗೊತ್ತಿಲ್ಲ. ಅದು ಬರಲಿ ಅಥವಾ ಬಾರದೇ ಇರಲಿ ಮುಂಜಾಗ್ರತಾ ಕ್ರಮಗಳನ್ನಂತೂ ನಾವು ಅನುಸರಿಸಲಿದ್ದೇವೆ

 ಆರ್‌.ಅಶೋಕ್‌, ಕಂದಾಯ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು