ಗುರುವಾರ , ಮಾರ್ಚ್ 4, 2021
30 °C
ಸಿದ್ಧಲಿಂಗಯ್ಯನವರಿಗೆ ನೃಪತುಂಗ; ಐವರಿಗೆ ಮಯೂರವರ್ಮ ಪ್ರಶಸ್ತಿ ಪ್ರದಾನ

ಕಸಬರಿಕೆ ಸಂಭ್ರಮದಲ್ಲಿ ದಲಿತ ಅಸ್ಮಿತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ಪತ್ರಿಕೆಯಲ್ಲಿ ಕವಿತೆ ಪ್ರಕಟವಾದ ಕಾರಣಕ್ಕಾಗಿ ವಿದ್ಯಾರ್ಥಿಯೊಬ್ಬನಿಗೆ ಹಾಸ್ಟೆಲ್‌ನಲ್ಲಿ ಸನ್ಮಾನ ಕಾರ್ಯಕ್ರಮ. ಭಾವುಕತೆ ಹಾಗೂ ತುಸು ಹೆಮ್ಮೆಯಿಂದ ಸುತ್ತಲೂ ನೋಡಿದ ಯುವಕವಿಗೆ ಕಾಣಿಸಿದ್ದು, ಅದೇ ಕಟ್ಟಡದ ಎದುರು ಮಾಳಿಗೆಯಲ್ಲಿ ಕಸಬರಿಕೆ ಹಿಡಿದು ನಿಂತಿದ್ದ ಅಮ್ಮ.

‘ನಾನು ಇಲ್ಲಿಗೆ ಬರಲಿಕ್ಕೆ ಕಾರಣ ನನ್ನ ಅಮ್ಮ. ಅವಳಿಗೆ ನನ್ನ ಕೃತಜ್ಞತೆ’ ಎಂದು ಯುವಕವಿ ಹೇಳಿದಾಗ, ಮಗ ನೆಲೆಸಿದ್ದ ಹಾಸ್ಟೆಲ್‌ನಲ್ಲಿಯೇ ಕಸ ಗುಡಿಸುತ್ತಿದ್ದ ಆ ತಾಯಿ ಕಸಬರಿಕೆಗಳ ಸಮೇತ ತನ್ನ ಎರಡೂ ಕೈಗಳನ್ನು ಮೇಲೆತ್ತಿ ಪತಾಕೆಯಂತೆ ಬೀಸಿ ಸಂಭ್ರಮಿಸಿದಳು. ಅದು ದಲಿತ ಅಸ್ಮಿತೆಯ ಪತಾಕೆ.’

ಇನ್ನೂ ಬಿಡುಗಡೆ ಆಗಬೇಕಾದ ‘ಊರುಕೇರಿ – ಭಾಗ 3’ ಪುಸ್ತಕದ ಭಾಗವೊಂದನ್ನು ವಿಮರ್ಶಕ ಎಸ್‌.ಆರ್‌. ವಿಜಯಶಂಕರ ನೆನಪಿಸಿಕೊಂಡಾಗ ರವೀಂದ್ರ ಕಲಾಕ್ಷೇತ್ರದ ತುಂಬ ಚಪ್ಪಾಳೆ. ವೇದಿಕೆಯ ಮೇಲೆ ಕುಳಿತಿದ್ದ ಸಿದ್ಧಲಿಂಗಯ್ಯ ಅವರ ಮುಖದಲ್ಲಿ ತಾನು ಕೇಳುತ್ತಿರುವುದು ಯಾರದೋ ಕಥೆ ಎನ್ನುವ ಭಾವ.

‘ಕನ್ನಡ ಸಾಹಿತ್ಯ ಪರಿಷತ್ತು’ ಹಾಗೂ ‘ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ’ ಸೋಮವಾರ ಏರ್ಪಡಿಸಿದ್ದ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಪುರಸ್ಕೃತ ಸಿದ್ಧಲಿಂಗಯ್ಯನವರನ್ನು ಅಭಿನಂದಿಸಿ ವಿಜಯಶಂಕರ್‌ ಮಾತನಾಡಿದರು. 7 ಲಕ್ಷದ 1 ರೂಪಾಯಿ ನಗದು ಹಾಗೂ ಪುರಸ್ಕಾರವನ್ನು ಪ್ರಶಸ್ತಿ ಒಳಗೊಂಡಿದೆ.

ದಲಿತ ಧ್ವನಿ: ‘ಕನ್ನಡ ಸಾಹಿತ್ಯ ಹೊಸ ಚಿಂತನೆಯತ್ತ ಹೊರಳುತ್ತಿದ್ದ ಸಂದರ್ಭದಲ್ಲಿ ಸಿದ್ಧಲಿಂಗಯ್ಯನವರ ಕಾವ್ಯ ‘ದಲಿತ ಧ್ವನಿ’ಯಾಗಿ ಮೂಡಿಬಂತು. ವೈಯಕ್ತಿಕ ಅನುಭವ ಸಾರ್ವಜನಿಕ ಕಾವ್ಯವಾಯಿತು. ಅದು ಭಾವದ ಆಕ್ರೋಶಕ್ಕಷ್ಟೇ ಸೀಮಿತವಾಗಲಿಲ್ಲ. ಕವಿ ಮತ್ತು ಒಂದು ಜನಾಂಗದ ಬದುಕಿನ ಸಂಕಟ ಕಾವ್ಯವಾಗಿ ಅಭಿವ್ಯಕ್ತಗೊಳ್ಳುವುದು ಸಾಧ್ಯವಾದುದು ಕನ್ನಡದ ಯೋಗಾಯೋಗ. ಪ್ರತಿಭಟನೆ ಕಾವ್ಯವಾಗಿದ್ದೂ ಕನ್ನಡ ಕಾವ್ಯ ಪರಂಪರೆಯೊಳಗಿನಿಂದಲೇ ರೂಪುಗೊಂಡಿರುವುದು ಸಿದ್ಧಲಿಂಗಯ್ಯನವರ ಕಾವ್ಯದ ವಿಶೇಷ’ ಎಂದವರು ಹೇಳಿದರು.

ಇದೇ ಕಾರ್ಯಕ್ರಮದಲ್ಲಿ ಎಂ.ಎನ್. ನಂದೀಶ್‌, ಬಿ.ಇ. ಶಿವರಾಜ, ಲಕ್ಷ್ಮಣ ನಂದಿಹಾಳ, ಕೃಷ್ಣಪ್ಪ ಎಸ್‌. ಗುಡಗುಡಿ ಹಾಗೂ ಗಣಪತಿ ಗೋ. ಚಲವಾದಿ ಅವರಿಗೆ ಯುವ ಸಾಹಿತಿಗಳಿಗೆ ನೀಡುವ ‘ಮಯೂರವರ್ಮ ಸಾಹಿತ್ಯ ಪ್ರಶಸ್ತಿ’ ನೀಡಲಾಯಿತು. ₹ 25 ಸಾವಿರ ನಗದು ಹಾಗೂ ಪುರಸ್ಕಾರವನ್ನು ಪ್ರಶಸ್ತಿ ಒಳಗೊಂಡಿದೆ.

**

ನಾಲ್ವಡಿ ಹೆಸರಲ್ಲಿ ಪ್ರಶಸ್ತಿ

ಗಾಂಧೀಜಿಯವರಿಂದ ರಾಜರ್ಷಿ ಎನ್ನುವ ಪ್ರಶಂಸೆಗೆ ಪಾತ್ರರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ ನಮಗೆ ಆದರ್ಶವಾಗಬೇಕು. ಸಾರಿಗೆ ಸಂಸ್ಥೆಯಿಂದ ₹ 2 ಕೋಟಿ ಇಡುಗಂಟು ಒದಗಿಸುವ ಮೂಲಕ ಮುಂದಿನ ವರ್ಷದಿಂದ ಒಡೆಯರ್ ಹೆಸರಿನಲ್ಲಿ ಪ್ರಶಸ್ತಿ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಡಿ.ಸಿ. ತಮ್ಮಣ್ಣ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು