ಶುಕ್ರವಾರ, ಜನವರಿ 22, 2021
25 °C

ಶೌಚಾಲಯದಲ್ಲಿ ಕ್ಯಾಮೆರಾ; ನರ್ಸ್ ಪ್ರಿಯಕರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಸತಿಗೃಹದ ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಬಚ್ಚಿಟ್ಟು ಸಹೋದ್ಯೋಗಿಗಳ ಅರೆನಗ್ನ ವಿಡಿಯೊ ಚಿತ್ರೀಕರಿಸುತ್ತಿದ್ದ ಆರೋಪದಡಿ ನರ್ಸ್ ಅಶ್ವಿನಿ ಎಂಬುವರನ್ನು ಇತ್ತೀಚೆಗಷ್ಟೇ ಬಂಧಿಸಿದ್ದ ವೈಟ್‌ಫೀಲ್ಡ್ ಠಾಣೆ ಪೊಲೀಸರು, ಇದೀಗ ಅವರ ಪ್ರಿಯಕರ ಪ್ರಭು (31) ಎಂಬುವರನ್ನು ಸೆರೆ ಹಿಡಿದಿದ್ದಾರೆ.

‘ಚೆನ್ನೈನ ಹೋಟೆಲೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಪ್ರಭು, ವೈಟ್‌ಫೀಲ್ಡ್ ಬಳಿಯ ಆಸ್ಪತ್ರೆಯೊಂದರ ತುರ್ತು ನಿಗಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಜೊತೆ ಸಲುಗೆ ಇಟ್ಟುಕೊಂಡಿದ್ದರು. ಇಬ್ಬರೂ ಸೇರಿ ಕೃತ್ಯ ಎಸಗಿದ್ದರು’ ಎಂದು ಪೊಲೀಸರು ಹೇಳಿದರು.

‘ಹಲವು ವರ್ಷಗಳಿಂದ ಪರಿಚಿತರಾಗಿದ್ದ ಆರೋಪಿಗಳು, ಪರಸ್ಪರ ಪ್ರೀತಿಸುತ್ತಿದ್ದರು ಎಂದು ಗೊತ್ತಾಗಿದೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅಶ್ವಿನಿ ಅವರಿಗೆ, ಆಸ್ಪತ್ರೆಯವರೇ ವಸತಿಗೃಹದ ಕೊಠಡಿಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿದ್ದರು. ಅದೇ ಕೊಠಡಿಯಲ್ಲಿ ಸಹೋದ್ಯೋಗಿಗಳು ಸಹ ಇದ್ದರು.’

‘ಸಹೋದ್ಯೋಗಿಗಳ ಅರೆನಗ್ನ ವಿಡಿಯೊಗಳನ್ನು ಚಿತ್ರೀಕರಿಸಿ ಕಳುಹಿಸುವಂತೆ ಪ್ರಭು ಹೇಳಿದ್ದರು. ಆತನ ಮಾತಿನಂತೆ ಅಶ್ವಿನಿ, ಶೌಚಾಲಯದಲ್ಲಿ ಮೊಬೈಲ್ ಇಟ್ಟು ಅದರ ಕ್ಯಾಮೆರಾ ಮೂಲಕ ಚಿತ್ರೀಕರಣ ಮಾಡಿದ್ದರು. ನಂತರ, ವಿಡಿಯೊಗಳನ್ನು ವಾಟ್ಸ್‌ಆ್ಯಪ್‌ ಮೂಲಕ ಪ್ರಿಯಕರನಿಗೆ ಕಳುಹಿಸಿದ್ದರು’ ಎಂದೂ ಪೊಲೀಸರು ಹೇಳಿದರು.

‘ಡಿ. 5ರಂದು ಸಹೋದ್ಯೋಗಿಯೊಬ್ಬರಿಗೆ ಶೌಚಾಲಯದಲ್ಲಿ ಕ್ಯಾಮೆರಾ ಕಂಡಿತ್ತು. ಗಾಬರಿಗೊಂಡಿದ್ದ ಅವರು ಆಡಳಿತ ಮಂಡಳಿಗೆ ದೂರು ನೀಡಿದ್ದರು. ಆಂತರಿಕ ತನಿಖೆ ನಡೆಸಿದ್ದ ಆಡಳಿತ ಮಂಡಳಿ, ಅಶ್ವಿನಿ ಹಾಗೂ ಇತರರ ವಿರುದ್ಧ ಠಾಣೆಗೆ ದೂರು ನೀಡಿದ್ದರು’ ಎಂದೂ ತಿಳಿಸಿದರು.

'ಚಿತ್ರೀಕರಿಸಿದ್ದ ವಿಡಿಯೊವನ್ನು ಆರೋಪಿಗಳು ಯಾವುದಕ್ಕೆ ಬಳಸುತ್ತಿದ್ದರೆಂದು ಗೊತ್ತಾಗಿಲ್ಲ. ಅಶ್ವಿನಿ ಹಾಗೂ ಪ್ರಭು ಇಬ್ಬರನ್ನೂ ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಾಗಿದೆ' ಎಂದೂ ಪೊಲೀಸರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.