ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್‌ಎಸ್‌ಎಸ್‌ಗೆ ನೌಕರರು ತೆರಳಲು ಅಧಿಕೃತ ಅವಕಾಶ ತಪ್ಪು: ಮಾರ್ಗರೇಟ್‌ ಆಳ್ವ

Published : 12 ಸೆಪ್ಟೆಂಬರ್ 2024, 16:02 IST
Last Updated : 12 ಸೆಪ್ಟೆಂಬರ್ 2024, 16:02 IST
ಫಾಲೋ ಮಾಡಿ
Comments

ಬೆಂಗಳೂರು: ಆರ್‌ಎಸ್‌ಎಸ್‌ ಶಾಖೆಗಳಿಗೆ ಸರ್ಕಾರಿ ನೌಕರರು ಹೋಗಬಹುದು ಎಂದು ಅಧಿಕೃವಾಗಿ ಸುತ್ತೋಲೆ ಹೊರಡಿಸಿರುವುದು ತಪ್ಪು ಎಂದು ಮಾಜಿ ರಾಜ್ಯಪಾಲರಾದ ಮಾರ್ಗರೇಟ್‌ ಆಳ್ವ ತಿಳಿಸಿದರು.

ರಾಜ್ಯ ಸರ್ಕಾರಿ ಮಹಿಳೆಯರ ನೌಕರ ಸಂಘ ಗುರುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಒಮ್ಮೆ ಸರ್ಕಾರಿ ನೌಕರರಾಗಿ ನೇಮಕಗೊಂಡ ಮೇಲೆ ಸಂವಿಧಾನಕ್ಕೆ ಬದ್ಧರಾಗಿ ಕೆಲಸ ಮಾಡಬೇಕು. ಯಾವುದೇ ಧರ್ಮ, ಜಾತಿ, ಪಕ್ಷಗಳಿಗೆ ಸೀಮೀತರಾಗದೇ ವೃತ್ತಿ ನಿರ್ವಹಿಸಬೇಕು. ವೈಯಕ್ತಿಕ ನಿಲುವುಗಳು ಬೇರೆ. ಆದನ್ನು ಸರ್ಕಾರವೇ ಹೇಳಬಾರದು. ಇದು ನೌಕರರ ನಡುವೆ ಭೇದವನ್ನು ಉಂಟು ಮಾಡಲಿದೆ’ ಎಂದು ತಿಳಿಸಿದರು.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ‘ಮಹಿಳೆಯರು ಪುರುಷರಿಗಿಂತ ಮುಂದೆ ಇದ್ದಾರೆ. ಅದನ್ನು ಒಪ್ಪಿಕೊಳ್ಳುವ ಮನಃಸ್ಥಿತಿಯನ್ನು ಪುರುಷರು ಬೆಳೆಸಿಕೊಳ್ಳಬೇಕು. ಪುರುಷರಂತೆ ಮಹಿಳೆಯರೂ ಕೆಲವು ತಪ್ಪುಗಳನ್ನು ಮಾಡುತ್ತಿರಬಹುದು. ತಪ್ಪಾದಾಗ ತಿದ್ದುವ ಕೆಲಸ ಮಾಡಬಹುದು. ಆದರೆ, ಮಹಿಳೆ ಎನ್ನುವ ಕಾರಣಕ್ಕೆ ಶೋಷಣೆ, ಅಪಹಾಸ್ಯ ಮಾಡಬಾರದು’ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ತನ್ನ ನಿವೃತ್ತಿ ಹಣ ₹ 70 ಲಕ್ಷವನ್ನು ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಗೆ ನೀಡಿದ ಶಿಕ್ಷಣ ಮಾತೆ ಲೂಸಿಯಮ್ಮ ಅವರನ್ನು ಸನ್ಮಾನಿಸಲಾಯಿತು. ‘ದೇಶದ ಅಭಿವೃದ್ದಿ ಪಥದಲ್ಲಿ ಸರ್ಕಾರಿ ಮಹಿಳಾ ನೌಕರರ ಕೊಡುಗೆ’ ಬಗ್ಗೆ ನಿವೃತ್ತ ಐಎಎಸ್‌ ಅಧಿಕಾರಿ ಬಿ.ಆರ್‌. ಮಮತಾ ಮಾತನಾಡಿದರು.

ಶೈಕ್ಷಣಿಕ ಕಿರುಚಿತ್ರ ‘ವೀಣಾ ಟೀಚರ್‌’, ‘ಸಂಕಲ್ಪ’ ಪುಸ್ತಕ ಬಿಡುಗಡೆ ಮಾಡಲಾಯಿತು. ಸಾಧಕ ನೌಕರರನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವೆ ರಾಣಿ ಸತೀಶ್‌,  ಸಾಹಿತಿ ರಾಧಾಕೃಷ್ಣ ಕೆ.ಇ., ಮಂಡ್ಯದ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್. ನಾಗರಾಜ್, ಸಾವಿತ್ರಿಬಾಯಿ ಪುಲೆ ಶಿಕ್ಷಕರ ಸಂಘದ ರಾಷ್ಟ್ರೀಯ ಅಧ್ಯಕ್ಷೆ ಲತಾ ಮುಳ್ಳೂರ, ಇತಿಹಾಸ ಪ್ರಾಧ್ಯಪಕರಾದ ಅನುರಾಧಾ, ಕೊಪ್ಪಳ  ಸಿಇಒ ಮಲ್ಲಿಕಾರ್ಜುನ್, ರಾಜ್ಯ ಸರ್ಕಾರಿ ಮಹಿಳೆಯರ ನೌಕರ ಸಂಘದ ಅಧ್ಯಕ್ಷೆ ರಮಾ ಆರ್., ಪ್ರಧಾನ ಕಾರ್ಯದರ್ಶಿ ಸಿ.ವಿ. ಶೈಲಜಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT