ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಹೂಡಿಕೆ ಆಮಿಷ: ₹ 94.95 ಲಕ್ಷ ಕಳೆದುಕೊಂಡ ಟೆಕಿಗಳು

ಪ್ರಜ್ವಲ್ ಡಿಸೋಜಾ
Published 21 ನವೆಂಬರ್ 2023, 0:30 IST
Last Updated 21 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ನಗರದ ಇಬ್ಬರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳಿಂದ ₹ 94.95 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಸೈಬರ್ ಕ್ರೈಂ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಮಹದೇವಪುರದ ಸಾಫ್ಟ್‌ವೇರ್‌ ಎಂಜಿನಿಯರ್ ರಾಮ್ ತೇಜ್ (33) ಹಾಗೂ ವೈಟ್‌ಫೀಲ್ಡ್‌ನ ಸಾಫ್ಟ್‌ವೇರ್ ಎಂಜಿನಿಯರ್ ಸೌರಭ್ ಕುಮಾರ ಶರ್ಮಾ (40) ಅವರು ಹಣ ಕಳೆದುಕೊಂಡಿದ್ದಾರೆ. ತಮಗಾದ ವಂಚನೆ ಬಗ್ಗೆ ಪ್ರತ್ಯೇಕವಾಗಿ ಠಾಣೆಗಳಿಗೆ ದೂರು ನೀಡಿದ್ದಾರೆ.

‘ರಾಮ್‌ ತೇಜ್ ಅವರ ವಾಟ್ಸ್‌ಆ್ಯಪ್‌ಗೆ ಸೆ. 9ರಂದು ಸಂದೇಶ ಬಂದಿತ್ತು. ‘ಹೋಟೆಲ್ ಬಗ್ಗೆ ಅನಿಸಿಕೆ ತಿಳಿಸಿ, ಹಣ ಗಳಿಸಿ. ಪ್ರತಿ ಅನಿಸಿಕೆಗೆ ₹ 250 ಸಿಗುತ್ತದೆ’ ಎಂದು ಅದರಲ್ಲಿ ಬರೆಯಲಾಗಿತ್ತು. ಸಂದೇಶ ನಂಬಿದ್ದ ರಾಮ್‌ತೇಜ್, ಲಿಂಕ್ ಕ್ಲಿಕ್ ಮಾಡಿ ಮೊದಲ ಅನಿಸಿಕೆ ಬರೆದಿದ್ದರು’ ಎಂದು ಪೊಲೀಸರು ಹೇಳಿದರು.

‘ಆರಂಭದಲ್ಲಿ ಒಂದು ಅನಿಸಿಕೆಗೆ ಆರೋಪಿಗಳು ₹ 250 ನೀಡಿದ್ದರು. ಮತ್ತಷ್ಟು ಹೋಟೆಲ್ ಅನಿಸಿಕೆ ಬರೆಯುವ ಅವಕಾಶಕ್ಕಾಗಿ ಹಣ ಹೂಡಿಕೆ ಮಾಡಿ ನೋಂದಣಿ ಮಾಡಿಕೊಳ್ಳುವಂತೆ ಆರೋಪಿಗಳು ಹೇಳಿದ್ದರು. ಅದನ್ನೂ ನಂಬಿದ್ದ ರಾಮ್‌ತೇಜ್, ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಂಡಿದ್ದರು. ಇದಾದ ನಂತರ ಆರೋಪಿಗಳು, ಹಂತ ಹಂತವಾಗಿ ₹49 ಲಕ್ಷವನ್ನು ಹೂಡಿಕೆ ಮಾಡಿಸಿಕೊಂಡಿದ್ದರು. ಇದಾದ ಬಳಿಕ, ಆರೋಪಿಗಳು ನಾಪತ್ತೆಯಾಗಿದ್ದಾರೆ’ ಎಂದು ತಿಳಿಸಿದರು.

₹ 45.95 ಲಕ್ಷ ಕಳೆದುಕೊಂಡ ಮತ್ತೊಬ್ಬ: ‘ದೂರುದಾರ ಸೌರಭ್‌ಕುಮಾರ್ ಶರ್ಮಾ ಅವರು ವಂಚನೆ ಜಾಲಕ್ಕೆ ಸಿಲುಕಿ ₹ 45.95 ಲಕ್ಷ ಕಳೆದುಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸಿದ್ದ ಆರೋಪಿಗಳು, ‘ಮನೆಯಿಂದಲೇ ಅರೆಕಾಲಿಕ ಕೆಲಸ ಮಾಡಿ, ಹಣ ಗಳಿಸಿ’ ಎಂದಿದ್ದರು. ಅದನ್ನು ನಂಬಿದ್ದ ದೂರುದಾರ, ಸಂದೇಶಕ್ಕೆ ಪ್ರತಿಕ್ರಿಯಿಸಿದ್ದರು. ‘₹1,000 ಹೂಡಿಕೆ ಮಾಡಿದರೆ, ಕೆಲವೇ ದಿನಗಳಲ್ಲಿ ₹ 1,300 ನೀಡುತ್ತೇವೆ’ ಎಂಬುದಾಗಿ ಆರೋಪಿಗಳು ತಿಳಿಸಿದ್ದರು.’

‘ದೂರುದಾರ ಆರಂಭದಲ್ಲಿ ₹ 1,000 ಹೂಡಿಕೆ ಮಾಡಿದ್ದರು. ಕೆಲ ದಿನ ಬಿಟ್ಟು ₹ 1,300 ಬಂದಿತ್ತು. ಹೆಚ್ಚು ಹಣ ಬರಬಹುದೆಂದು ತಿಳಿದ ದೂರುದಾರ, ಆರೋಪಿಗಳು ಹೇಳಿದ್ದ 14 ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹ 45.95 ಲಕ್ಷ ವರ್ಗಾಯಿಸಿದ್ದರು. ಇದಾದ ನಂತರ ಆರೋಪಿಗಳು, ಯಾವುದೇ ಹಣ ನೀಡದೇ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT