ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ವೆಚ್ಚ ಮಿತಿ ಮೀರಿದರೆ ಗೆದ್ದವರು ಅನರ್ಹರು

ವಿಧಾನಸಭಾ ಚುನಾವಣೆ ವೆಚ್ಚ; ಅಂತಿಮಗೊಳಿಸಿದ ಜಿಲ್ಲಾ ಚುನಾವಣಾಧಿಕಾರಿ
Last Updated 30 ಮಾರ್ಚ್ 2018, 8:53 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಅಭ್ಯರ್ಥಿಗಳು ಚುನಾವಣಾ ವೆಚ್ಚವಾಗಿ ₹ 28 ಲಕ್ಷದವರೆಗೆ ವೆಚ್ಚ ಮಾಡಲು ಅವಕಾಶವಿದ್ದು, ಈ ಸಂಬಂಧ ಚುನಾವಣೆಯಲ್ಲಿ ಖರ್ಚು ಮಾಡಬಹುದಾದ ಎಲ್ಲಾ ವಸ್ತುಗಳ ದರಗಳನ್ನು ಅಂತಿಮಗೊಳಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಮುದ್ರಣಾಲಯಗಳ ಮಾಲೀಕರು ಹಾಗೂ ಮಾಧ್ಯಮದವರೊಂದಿಗೆ ಸಭೆ ನಡೆಸಿದ ಚುನಾವಣಾಧಿಕಾರಿ ಜ್ಯೋತ್ಸ್ನಾ, ಚುನಾವಣಾ ವೆಚ್ಚಗಳ ದರವನ್ನು ಅಂತಿಮಗೊಳಿಸಿದರು.

‘ಚುನಾವಣಾ ಕಣದಲ್ಲಿನ ಪ್ರತಿ ಅಭ್ಯರ್ಥಿಗಳು ನಿಯಮಾನಸಾರ ₹ 28 ಲಕ್ಷದವರೆಗೆ ವೆಚ್ಚ ಮಾಡಲು ಅವಕಾಶ ಇದೆ. ಮಿತಿ ದಾಟಿದರೆ ಅಭ್ಯರ್ಥಿ ಆಯ್ಕೆಯಾದರೂ  ಅನರ್ಹರಾಗುತ್ತಾರೆ’ ಎಂದು ಎಚ್ಚರಿಸಿದರು.

‘ರ‍್ಯಾಲಿಯ ವೇಳೆ ಉಪಯೋಗಿಸುವ ಪೆಂಡಾಲ್, ಖುರ್ಚಿ, ಶಾಮಿಯಾನ, ಜನರೇಟರ್, ಫ್ಲೆಕ್ಸ್, ಕರಪತ್ರಗಳು, ಮೈಕ್ ಸೇರಿದಂತೆ ಉಪಯೋಗಿಸುವ ಪ್ರತಿಯೊಂದಕ್ಕೂ ಲೆಕ್ಕ ನೀಡಬೇಕು. ಅಭ್ಯರ್ಥಿಗಳಿಗೆ ಸ್ವಂತ ವಾಹನಗಳಿದ್ದರೂ, ಚುನಾವಣೆಗಾಗಿ ಒಂದು ವಾಹನಕ್ಕೆ ತಗಲುವ ಇಂಧನ, ವಾಹನ ಚಾಲಕರ ಭತ್ಯೆ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಆದರೆ ಅವರ ಸ್ವಂತ ವಾಹನಗಳು ಒಂದಕ್ಕಿಂತ ಹೆಚ್ಚು ಇದ್ದು ಇವುಗಳನ್ನು ಉಪಯೋಗಿಸಿದಲ್ಲಿ, ಇವುಗಳ ಬಾಡಿಗೆ ವೆಚ್ಚವನ್ನು ಅಭ್ಯರ್ಥಿಯ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ’ ಎಂದು ವಿವರಿಸಿದರು.

‘ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಜಾಲತಾಣ ಸೇರಿದಂತೆ ಕೇಬಲ್ ಟಿ.ವಿ.ಗಳಲ್ಲಿ ನೀಡುವ ಜಾಹೀರಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ವಿದ್ಯುನ್ಮಾನ ಮಧ್ಯಮಗಳಲ್ಲಿ ಜಾಹೀರಾತು ನೀಡಲು ಪೂರ್ವ ಪ್ರಾಮಾಣೀಕರಣ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕಾಗುತ್ತದೆ. ಮುದ್ರಣ ಮಾಧ್ಯಮಗಳಲ್ಲಿ ನೀಡಲಾಗುವ ಜಾಹೀರಾತುಗಳು ಸೇರಿದಂತೆ ಇತರೆ ಎಲ್ಲಾ ವೆಚ್ಚಗಳನ್ನೂ ಅಭ್ಯರ್ಥಿಗಳ ವೆಚ್ಚವಾಗಿ ಪರಿಗಣಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಕಾನೂನಾತ್ಮಕ ವೆಚ್ಚಗಳಿಗೆ ಮಾತ್ರ ಅವಕಾಶ ಇದ್ದು ಕಾನೂನುಬಾಹಿರ ವೆಚ್ಚಗಳಿಗೆ ಅವಕಾಶಗಳಿರುವುದಿಲ್ಲ. ಅಭ್ಯರ್ಥಿಗಳು ಚುನಾವಣಾ ಲೆಕ್ಕವನ್ನು ಕರಾರುವಕ್ಕಾಗಿ ನಿಗದಿತ ಅವಧಿಯಲ್ಲಿ ನೀಡಬೇಕು. ಫಲಿತಾಂಶ ಬಂದು 30 ದಿನಗಳೊಳಗಾಗಿ ಅಂತಿಮ ಖರ್ಚಿನ ವಿವರವನ್ನು ಸಲ್ಲಿಸಬೇಕು’ ಎಂದರು.

‘ಎಲ್ಲಾ ರಾಜಕೀಯ ಪಕ್ಷದವರು ಚುನಾವಣಾ ಆಯೋಗದ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಬೇಕು. ವಿವಿಧ ರ‍್ಯಾಲಿಗಳಿಗೆ ಅನುಮತಿಗಾಗಿ ನಿಗದಿತ ನಮೂನೆಯಲ್ಲಿ ಮಾತ್ರ ಪ್ರಮಾಣಪತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ಅದರಲ್ಲಿ ಉಪಯೋಗಿಸುವ ಪ್ರತಿ ವಸ್ತುಗಳ ವಿವರ, ದರದ ವಿವರವನ್ನು ನೀಡಬೇಕು. ವೆಚ್ಚದ ದರಗಳ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಿಗೆ ಪುಸ್ತಕ ಒದಗಿಸಲಾಗಿದೆ. ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ವಿವರಗಳು ಲಭ್ಯವಿರುತ್ತವೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಸಂಗಪ್ಪ, ಉಪವಿಭಾಗಾಧಿಕಾರಿ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ವಿಜಯಕುಮಾರ್ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ಹಿರಿಯೂರು ಸೂಕ್ಷ್ಮ ಕ್ಷೇತ್ರ

ಹಿಂದಿನ ಚುನಾವಣೆ ಅಂಕಿ ಅಂಶಗಳನ್ನು ಆಧಿರಿಸಿ ಹಿರಿಯೂರು ವಿಧಾನಸಭಾ ಕ್ಷೇತ್ರವನ್ನು ಚುನಾವಣಾ ವೆಚ್ಚದ ಸೂಕ್ಷ್ಮ ಕ್ಷೇತ್ರ ಎಂದು ಪರಿಗಣಿಸಲಾಗಿದೆ. ಇಲ್ಲಿ ಹೆಚ್ಚುವರಿಯಾಗಿ ವಿವಿಧ ತಂಡಗಳನ್ನು ನಿಯೋಜಿಸಲಾಗಿದೆ. ಬೇರೆ ಕ್ಷೇತ್ರಗಳಿಗೆ ಸಹಾಯಕ ವೆಚ್ಚ ವೀಕ್ಷಕರು ಒಬ್ಬರಿದ್ದರೆ, ಇಲ್ಲಿಗೆ ಇಬ್ಬರು ಇರುತ್ತಾರೆ’ ಎಂದು ಚುನಾವಣಾಧಿಕಾರಿ ಜ್ಯೋತ್ಸ್ನಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT