ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಚಾಲಕನಿಂದ ಅಂಗಾಂಗ ದಾನ

ಮನೆ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ 28 ವರ್ಷದ ವ್ಯಕ್ತಿ
Published 27 ಮೇ 2023, 0:36 IST
Last Updated 27 ಮೇ 2023, 0:36 IST
ಅಕ್ಷರ ಗಾತ್ರ

ಬೆಂಗಳೂರು: ಮಿದುಳು ನಿಷ್ಕ್ರಿಯಗೊಂಡಿದ್ದ ಆಟೊ ಚಾಲಕರೊಬ್ಬರ ಹೃದಯವನ್ನು, ಅಂಗಾಂಗ ವೈಫಲ್ಯದಿಂದ ಒಳಲುತ್ತಿದ್ದ 59 ವರ್ಷದ ವ್ಯಕ್ತಿಗೆ ಕಸಿ ಮಾಡಲಾಗಿದೆ.

ಮಳೆ ನೀರು ಮನೆಯೊಳಗೆ ಬರದಂತೆ ತಡೆಯಲು ಮಹಡಿ ಮೇಲೆ ಹತ್ತಿದ 28 ವರ್ಷದ ಆಟೊ ಚಾಲಕ, ಬಿದ್ದು ಗಂಭೀರ ಗಾಯಗೊಂಡಿದ್ದರು. ಅವರನ್ನು ಜೆ.ಪಿ ನಗರದ ಆಸ್ಟರ್‌ ಆರ್‌ವಿ ಆಸ್ಪತ್ರೆಗೆ ಮೇ 21ರಂದು ದಾಖಲಿಸಲಾಗಿತ್ತು. ಮೇ 24ರಂದು ಅವರ ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಘೋಷಿಸಿದರು. ಅವರಿಗೆ ಪತ್ನಿ ಹಾಗೂ ಒಂದೂವರೆ ವರ್ಷದ ಮಗುವಿದೆ. ಕುಟುಂಬದವರು ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದ್ದರಿಂದ ಹೃದಯ ಪಡೆದು, ರಾಜರಾಜೇಶ್ವರಿ ನಗರದ ಸ್ಪರ್ಶ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗೆ ಮೇ 25ರಂದು ಕಸಿ ನಡೆಸಲಾಯಿತು.

ದಾನಿಯ ಯಕೃತ್ತು ಮತ್ತು ಒಂದು ಮೂತ್ರಪಿಂಡವನ್ನು ಆಸ್ಟರ್ ಆರ್‌ವಿ, ಮೇದೋಜೀರಕ ಗ್ರಂಥಿ ಮತ್ತು ಇನ್ನೊಂದು ಮೂತ್ರಪಿಂಡವನ್ನು ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಗೆ, ಕಾರ್ನಿಯಾವನ್ನು ನಾರಾಯಣ ನೇತ್ರಾಲಯಕ್ಕೆ ನೀಡಲಾಗಿದೆ. 

ಕಸಿಗೆ ಒಳಗಾದ 59 ವರ್ಷದ ವ್ಯಕ್ತಿ ‘ಇಸ್ಕೀಮಿಕ್ ಕಾರ್ಡಿಯೋಮಯೋಪಥಿ’ಯಿಂದ ಬಳಲುತ್ತಿದ್ದರು. ಅವರ ಹೃದಯವು ಪರಿಣಾಮಕಾರಿಯಾಗಿ ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ಕಳೆದುಕೊಂಡಿತ್ತು. ಇದರಿಂದಾಗಿ ಕಳೆದೊಂದು ವರ್ಷದಿಂದ ಅವರ ಆರೋಗ್ಯದ ಸ್ಥಿತಿ ಹದಗೆಟ್ಟಿತ್ತು. ಮೂರು ತಿಂಗಳ ಹಿಂದೆ ಜೀವಸಾರ್ಥಕತೆ ಅಡಿ ಅಂಗಾಂಗಕ್ಕೆ ಹೆಸರು ನೋಂದಾಯಿಸಲಾಗಿತ್ತು. ಹೃದಯ ಕಸಿಯಿಂದ ಅವರು ಚೇತರಿಸಿಕೊಂಡಿದ್ದಾರೆ ಎಂದು ಸ್ಪರ್ಶ್ ಆಸ್ಪತ್ರೆ ತಿಳಿಸಿದೆ. 

‘ಕೆಲ ವರ್ಷಗಳಿಂದ ಅಂಗಾಂಗ ದಾನ ಮತ್ತು ಅಂಗಾಂಗ ಕಸಿ ರಾಜ್ಯದಲ್ಲಿ ಗಮನಾರ್ಹ ವೇಗ ಪಡೆದುಕೊಂಡಿದೆ. ಅಂಗಾಂಗ ದಾನದಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಅಂಗಾಂಗ ದಾನಕ್ಕೆ ಹೆಚ್ಚಿನ ಜನರು ಮುಂದೆ ಬರುವಂತೆ ಪ್ರೋತ್ಸಾಹಿಸಬೇಕು’ ಎಂದು ಸ್ಪರ್ಶ್ ಆಸ್ಪತ್ರೆ ಸಮೂಹದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಜೋಸೆಫ್ ಪಸಂಘ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT