ಬುಧವಾರ, ಏಪ್ರಿಲ್ 1, 2020
19 °C
ಕಾರ್ಗಿಲ್ ಯುದ್ದದ ನೆನಪಿನ ಬುತ್ತಿ ಬಿಚ್ಚಿಟ್ಟ ಯೋಧ

‘ನಮ್ಮ ಸೈನಿಕರ ಕಣ್ಣು ಗುಡ್ಡೆ ಕಿತ್ತಿದ್ದ ಪಾಕ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ‘ಪಾಕಿಸ್ತಾನದ ಸೈನಿಕರು ಕಾಶ್ಮೀರದ ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದರು. ಅವರ ಬಗ್ಗೆ ಮಾಹಿತಿ ಸಂಗ್ರಹಿಸಲು ನಮ್ಮ ಐವರು ಸೈನಿಕರನ್ನು ಕಳುಹಿಸಿದ್ದೆವು. ವಾರವಾದರೂ ಸೈನಿಕರು ಬರಲಿಲ್ಲ. ಅವರ ಶವಗಳು ಬಂದವು. ಅವರ ಕಣ್ಣುಗುಡ್ಡೆಗಳನ್ನು ಕೀಳಲಾಗಿತ್ತು. ಒಂದು ಕಿವಿಯಿಂದ ಮತ್ತೊಂದು ಕಿವಿಯ ಕಡೆಗೆ ಬರುವ ಹಾಗೆ ಕಬ್ಬಿಣದ ಸಲಾಕೆಯನ್ನು ಚುಚ್ಚಲಾಗಿತ್ತು...’ 

ಕಾರ್ಗಿಲ್‌ ಯುದ್ಧದ ಸಂದರ್ಭದ ಘಟನೆಗಳನ್ನು ನಿವೃತ್ತ ಯೋಧ ಕ್ಯಾಪ್ಟನ್‌ ನವೀನ್‌ ನಾಗಪ್ಪ ಹೀಗೆ ಹೇಳುತ್ತಿದ್ದರೆ, ಗ್ರಾಮಸ್ಥರ ಕಣ್ಣಾಲಿಗಳು ತುಂಬಿಕೊಂಡಿದ್ದವು.

ಸಿ.ಎನ್.ಅರ್. ಹಿತಚಿಂತನ ಚಾರಿಟಬಲ್ ಟ್ರಸ್ಟ್ ಮಹಾಶಿವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘120 ಸೈನಿಕರನ್ನು 12 ತಂಡಗಳಾಗಿ ಮಾಡಿಕೊಂಡು ಯುದ್ಧ ಮಾಡಬೇಕಾಗಿತ್ತು. ಹತ್ತು ಬಂಕರ್‌ಗಳ ಮೂಲಕ ಪಾಕಿಸ್ತಾನ ಸೈನಿಕರು ನಮ್ಮ ಮೇಲೆ ದಾಳಿ ಮಾಡುತ್ತಿದ್ದರು.
ಎಂಟು ಬಂಕರ್‌ಗಳನ್ನು ನಾವು ವಶಪಡಿಸಿಕೊಂಡೆವು. ಆದರೆ,
ಪಾಕಿಸ್ತಾನ ಸೈನಿಕನೊಬ್ಬ ಬಿಸಾಕಿದ ಬಾಂಬ್‌ನಿಂದ ನನ್ನ ಕಾಲನ್ನು ಕಳೆದುಕೊಳ್ಳಬೇಕಾಯಿತು’ ಎಂದು ಅವರು ನೆನಪಿಸಿಕೊಂಡರು.

‘ನನ್ನ ಅನೇಕ ಗೆಳೆಯರನ್ನು ಯುದ್ಧದಲ್ಲಿ ಕಳೆದುಕೊಳ್ಳಬೇಕಾಯಿತು. ತಾಯಿಯೊಬ್ಬರು ನನ್ನ
ಬಳಿ ಬಂದು, ನೀನೊಬ್ಬನೇ ಬಂದೆ. ನನ್ನ ಮಗನನ್ನೇಕೆ ಕರೆದುಕೊಂಡು ಬರಲಿಲ್ಲ ಎಂದು ಕೇಳಿದಾಗ ಅತೀವ ನೋವಾಯಿತು. ಯುದ್ಧದಲ್ಲಿ ಗೆಳೆಯನನ್ನು ಕಳೆದುಕೊಂಡ ನೋವು ಈಗಲೂ ನನ್ನನ್ನು ಬಾಧಿಸುತ್ತಿದೆ’
ಎಂದು ನವೀನ್‌ ನಾಗಪ್ಪ ಅವರು ಕಣ್ಣೀರಾದರು.

ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ‘ಗಡಿಯಲ್ಲಿ ನಮ್ಮ ಸೈನಿಕರು ಹಸಿವು, ನಿದ್ದೆ ಬಿಟ್ಟು ದೇಶ ಕಾಯುತ್ತಿದ್ದಾರೆ. ಆದರೆ, ನಾವು ನಮ್ಮ ದೇಶದಲ್ಲೇ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗುವ ಭಂಡತನ ತೋರುತ್ತಿದ್ದೇವೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)