ಕೆ.ಆರ್.ಪುರ: ‘ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಬೇಕು’ ಎಂದು ಕ್ರಿಕೆಟಿಗ ರಿತೇಶ್ ಭಟ್ಕಳ್ ಹೇಳಿದರು.
ಕೆ.ಆರ್.ಪುರ ಸಮೀಪದ ರಾಂಪುರ ಗ್ರಾಮದ ಪ್ರೆಸ್ಟಿಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ‘ಸ್ಪೋರ್ಟ್ಸ್ ಒ ಮೇನಿಯ’ ಎಂಟನೇ ವರ್ಷದ ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.
‘ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆ ಹೆಚ್ಚು ಪೂರಕವಾಗಿದ್ದು, ಸದೃಢ ಅರೋಗ್ಯಕ್ಕೆ ಹೆಚ್ಚು ಸಹಕಾರಿಯಾಗಿದೆ. ವಿದ್ಯಾರ್ಥಿ ಗಳು ಕ್ರೀಡೆಗಳಲ್ಲಿ ಹೆಚ್ಚಾಗಿ ತೊಡಗಿಕೊಂಡಾಗ ಆರೋಗ್ಯದ ಜೊತೆಗೆ ಮಾನಸಿಕವಾಗಿ ನೆಮ್ಮದಿ ಸಾಧಿಸಬಹುದು’ ಎಂದು ಹೇಳಿದರು.
ಪ್ರೆಸ್ಟೀಜ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಅಂಜಿನಪ್ಪ, ‘ಶಿಕ್ಷಕರು ಮತ್ತು ಪೋಷಕರ ಸಹಕಾರದಿಂದ ಮಕ್ಕಳಲ್ಲಿ ಕ್ರೀಡೆಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗಿದೆ. ಕ್ರಿಕೆಟ್ ಸ್ವಿಮಿಂಗ್ ಮತ್ತು ಸ್ಕೇಟಿಂಗ್ ನಂತಹ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು’ ಎಂದರು.
ಶಾಲೆಯ ನಿರ್ದೇಶಕಿ ರಮಾದೇವಿ, ನಿರ್ದೇಶಕ ಪ್ರಶಾಂತ್ ಆನಂದ್, ಲಾಸ್ಯ ಸೌಜನ್ಯ, ಪ್ರಾಂಶುಪಾಲ ಪಿ.ಮಂಗಲ್ ರಾಜ್ ಇದ್ದರು.