ಹೆತ್ತವರಿಗೇ ಗುಂಡು ಹೊಡೆಯಲು ಓಡಾಡುತ್ತಿದ್ದ!

7
ಪ್ರೇಮವಿವಾಹಕ್ಕೆ ಪೋಷಕರ ನಿರಾಕರಣೆ l ಪಿಸ್ತೂಲ್ ಖರೀದಿಸಿದ್ದ ಆರೋಪಿ l ಎಂಜಿನಿಯರಿಂಗ್ ಪದವೀಧರ ಸೆರೆ

ಹೆತ್ತವರಿಗೇ ಗುಂಡು ಹೊಡೆಯಲು ಓಡಾಡುತ್ತಿದ್ದ!

Published:
Updated:
ಶರತ್

ಬೆಂಗಳೂರು: ತನ್ನನ್ನು ಮನೆಯಿಂದ ಹೊರಹಾಕಿದರು ಎಂಬ ಕಾರಣಕ್ಕೆ ಹೆತ್ತವರನ್ನೇ ಗುಂಡಿಕ್ಕಿ ಕೊಲ್ಲಲು ಸಂಚು ರೂಪಿಸಿದ್ದ ಎಂಜಿನಿಯರಿಂಗ್ ಪದವೀಧರ ಶರತ್ (25) ಪಿಸ್ತೂಲಿನ ಸಮೇತ ಬಸವೇಶ್ವರನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಪಾಪರೆಡ್ಡಿಪಾಳ್ಯ 11ನೇ ಬ್ಲಾಕ್‌ನ ಪೇಯಿಂಗ್ ಗೆಸ್ಟ್‌ ಕಟ್ಟಡದಲ್ಲಿ ನೆಲೆಸಿದ್ದ ಈತ, ಕುಖ್ಯಾತ ಬೈಕ್ ಕಳ್ಳನೂ ಆಗಿದ್ದಾನೆ.

ಜುಲೈ 5ರ ರಾತ್ರಿ ಪೊಲೀಸರು ಕುರುಬರಹಳ್ಳಿ ವೃತ್ತದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಈತನಿಂದ ಹತ್ತು ಐಷಾರಾಮಿ ಬೈಕ್‌ಗಳು, ಪಿಸ್ತೂಲ್ ಹಾಗೂ ಎಂಟು ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ.

ಶರತ್‌ ಪೋಷಕರು ಕಾಮಾಕ್ಷಿಪಾಳ್ಯ ಸಮೀಪದ ವೃಷಭಾವತಿನಗರದಲ್ಲಿ ನೆಲೆಸಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿರುವ ಈತ, ಹೆಚ್ಚು ವರಮಾನದ ಉದ್ಯೋಗ ಸಿಗಲಿಲ್ಲವೆಂದು ವಾಹನ ಕಳವು ಮಾಡುವ ಹಾದಿ ತುಳಿದಿದ್ದ. ಮಧ್ಯಾಹ್ನದ ವೇಳೆ ಪ್ರತಿಷ್ಠಿತ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ಆರೋಪಿ, ಮನೆ ಮುಂದೆ ನಿಲ್ಲಿಸಲಾದ ಐಷಾರಾಮಿ ಬೈಕ್‌ಗಳ ಫೋಟೊ ತೆಗೆದುಕೊಳ್ಳುತ್ತಿದ್ದ. ನಂತರ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅದೇ ಬೈಕ್ ಕದಿಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕದ್ದ ವಾಹನಗಳನ್ನು ಪರಿಚಿತರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಶರತ್, ಬಂದ ಹಣದಲ್ಲಿ ಗೆಳತಿಯರ ಜೊತೆ ಗೋವಾಕ್ಕೆ ತೆರಳಿ ಮೋಜು ಮಾಡುತ್ತಿದ್ದ. ಈ ವರ್ತನೆಯು ಪೋಷಕರ ಬೇಸರಕ್ಕೆ ಕಾರಣವಾಗಿತ್ತು. ‘ಮದುವೆ ಮಾಡಿದರೆ ಮಗ ಸರಿಹೋಗುತ್ತಾನೆ’ ಎಂದು ಅವರು ಮಧುವಿನ ಹುಡುಕಾಟ ಪ್ರಾರಂಭಿಸಿದ್ದರು.

ಆದರೆ, ತಾನು ಪ್ರೀತಿಸುತ್ತಿರುವ ಹುಡುಗಿಯನ್ನೇ ಮದುವೆ ಆಗುವುದಾಗಿ ‌ಪಟ್ಟು ಹಿಡಿದಿದ್ದರಿಂದ ಆರು ತಿಂಗಳ ಹಿಂದೆ ಮಗನನ್ನು ಮನೆಯಿಂದ ಹೊರಹಾಕಿದ್ದರು. ಇದರಿಂದ ಖಿನ್ನೆತೆಗೆ ಒಳಗಾದ ಶರತ್, ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಾಲ್ಕು ಸಲ ಯತ್ನ:‌ ‘ಪೋಷಕರು ಬೈದಿದ್ದರಿಂದ ಬೇಸರವಾಗಿತ್ತು. ಸಾಯಬೇಕೆಂದು ಎರಡು ಬಾರಿ ನಿದ್ರೆ ಮಾತ್ರೆಗಳನ್ನು ನುಂಗಿದರೂ ಪ್ರಯೋಜನವಾಗಲಿಲ್ಲ. ಆ ನಂತರ ಮಾಗಡಿ ರಸ್ತೆಯಲ್ಲಿ ವೇಗವಾಗಿ ಕಾರು ಚಾಲನೆ ಮಾಡಿ ಬೇಕಂತಲೇ ವಿಭಜಕಕ್ಕೆ ವಾಹನ ಗುದ್ದಿಸಿದ್ದೆ. ಆಗಲೂ ಸಾಯಲಿಲ್ಲ. ಬದಲಾಗಿ ಬೆನ್ನು ಹಾಗೂ ಎದೆ ಮೂಳೆಗಳು ಮುರಿದು ಹೋದವು. ಕೊನೆಗೆ, ದಾಳಿಂಬೆ ಗಿಡಗಳಿಗೆ ಸಿಂಪಡಿಸುವ ಕ್ರಿಮಿನಾಶಕದ ಪುಡಿಯನ್ನು ತಿಂದಿದ್ದೆ. ಅದೂ ಕೆಲಸ ಮಾಡಲಿಲ್ಲ’ ಎಂದು ಆರೋಪಿ ಹೇಳಿಕೆ ನೀಡಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

‘ನಾನೊಬ್ಬನೇ ಏಕೆ ಸಾಯಬೇಕು. ಪ್ರತಿ ವಿಚಾರದಲ್ಲೂ ನನ್ನ ವಿರುದ್ಧವಾಗಿ ನಡೆದುಕೊಳ್ಳುವ ಅಪ್ಪ–ಅಮ್ಮ ಕೂಡ ಸಾಯಬೇಕು. ಅವರನ್ನು ಕೊಂದು, ನಂತರ ಆತ್ಮಹತ್ಯೆ ಮಾಡಿಕೊಳ್ಳುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದೆ’ ಎಂದು ಹೇಳಿದ್ದಾನೆ.

ಟ್ಯಾಂಕ್‌ಗೇ ಕ್ರಿಮಿನಾಶಕ ಸುರಿದಿದ್ದ!: ಆರೋಪಿಯ ಪೋಷಕರು, ಅಡುಗೆ ಕೆಲಸಕ್ಕೆ ಟ್ಯಾಂಕ್ ನಿರನ್ನೇ ಬಳಸುತ್ತಾರೆ. ಈ ವಿಚಾರ ತಿಳಿದಿದ್ದ ಶರತ್, ಅವರನ್ನು ಮುಗಿಸಲು ಇತ್ತೀಚೆಗೆ ಆ ಟ್ಯಾಂಕ್‌ಗೇ ನಾಲ್ಕು ಡಬ್ಬ ಕ್ರಿಮಿನಾಶಕ ಸುರಿದಿದ್ದ. ಆದರೆ, ನೀರು ವಾಸನೆ ಬರುತ್ತಿತ್ತು ಎಂಬ ಕಾರಣಕ್ಕೆ ಪೋಷಕರು ಮರುದಿನವೇ ಟ್ಯಾಂಕ್ ಸ್ವಚ್ಛ ಮಾಡಿಸಿದ್ದರು.

‘ಎಲ್ಲ ಸಂಚುಗಳೂ ವಿಫಲವಾಗಿದ್ದರಿಂದ ಯೂಟ್ಯೂಬ್‌ನ ಮೊರೆ ಹೋಗಿದ್ದೆ. ‘ಪೋಷಕರನ್ನು ಕೊಂದು, ನಾನೂ ಸಾಯಲು ಯಾವ ಮಾರ್ಗ ಅನುಸರಿಸುವುದು ಸೂಕ್ತ’ ಎಂದು ಹುಡುಕಿದಾಗ, ‘ಪಿಸ್ತೂಲ್’ ಎಂಬ ಉತ್ತರ ಸಿಕ್ಕಿತು. ಅಂತೆಯೇ ಬಿಹಾರದ ವ್ಯಕ್ತಿಯೊಬ್ಬನನ್ನು ಸಂಪರ್ಕಿಸಿ ಪಿಸ್ತೂಲ್ ತರಿಸಿಕೊಂಡೆ. ಪೋಷಕರನ್ನು ಕೊಲ್ಲಲು ವಾರದಿಂದ ಪ್ರತಿದಿನ ಮನೆ ಹತ್ತಿರ ಹೋಗುತ್ತಿದ್ದರೂ, ಅವರನ್ನು ಮುಗಿಸಲು ಆಗಿರಲಿಲ್ಲ’ ಎಂದು ಶರತ್ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ಯು–ಟರ್ನ್ ಹೊಡೆದು ಸಿಕ್ಕಿಬಿದ್ದ

‘ಪಶ್ಚಿಮ ವಿಭಾಗದಲ್ಲಿ ಸರಗಳವು ಹಾಗೂ ದರೋಡೆ ಪ್ರಕರಣಗಳು ಹೆಚ್ಚಾಗಿದ್ದರಿಂದ ರಾತ್ರಿ ವೇಳೆ ವಾಹನ ತಪಾಸಣೆ ಮಾಡುವಂತೆ ಡಿಸಿಪಿ ಎಲ್ಲ ಠಾಣೆಗಳ ಸಿಬ್ಬಂದಿಗೂ ಸೂಚಿಸಿದ್ದರು. ಅಂತೆಯೇ ಜುಲೈ 5ರ ರಾತ್ರಿ ಬಸವೇಶ್ವರನಗರ ಠಾಣೆ ಸಿಬ್ಬಂದಿ ಕುರುಬರಹಳ್ಳಿ ವೃತ್ತದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿಕೊಂಡು ತಪಾಸಣೆ ಮಾಡುತ್ತಿದ್ದರು. ವೇಗವಾಗಿ ಬೈಕ್‌ನಲ್ಲಿ ಬಂದ ಶರತ್, ಪೊಲೀಸರನ್ನು ನೋಡುತ್ತಿದ್ದಂತೆಯೇ ಯು–ಟರ್ನ್ ಮಾಡಿಕೊಂಡು ವಾಪಸ್ ಹೊರಟ. ಇದರಿಂದ ಅನುಮಾನಗೊಂಡ ಸಿಬ್ಬಂದಿ, ಬೈಕ್‌ಗಳಲ್ಲಿ ಹಿಂಬಾಲಿಸಿ ಹಿಡಿದಾಗ ಆತನ ಬಳಿ ಪಿಸ್ತೂಲ್ ಸಿಕ್ಕಿತು. ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತನ್ನ ಸಂಚನ್ನು ವಿವರಿಸಿದ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪಿಸ್ತೂಲ್ ಕೊಟ್ಟವನಿಗೆ ಶೋಧ

‘ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ವಿಜಯನಗರ, ಸುಬ್ರಹ್ಮಣ್ಯನಗರ, ಯಶವಂತಪುರ ಹಾಗೂ ಮಹಾಲಕ್ಷ್ಮಿಲೇಔಟ್ ಠಾಣೆಗಳ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ₹ 8.37 ಲಕ್ಷ ಮೌಲ್ಯದ ಹತ್ತು ಬೈಕ್‌ಗಳನ್ನು ಜಪ್ತಿ ಮಾಡಿದ್ದೇವೆ. ಪಿಸ್ತೂಲ್ ಕೊಟ್ಟವನ ಸುಳಿವು ಸಿಕ್ಕಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದೇವೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣನವರ್ ತಿಳಿಸಿದರು.

ಮುಖ್ಯಾಂಶಗಳು
* ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ

* ಸಾಯುವ ದಾರಿಯನ್ನು ಯೂಟ್ಯೂಬ್‌ನಲ್ಲಿ ಹುಡುಕಿದ್ದ

* ವಾಹನ ಕಳ್ಳನೂ ಆಗಿರುವ ಆರೋಪಿ

* ಬಂಧಿತನಿಂದ ಹತ್ತು ಬೈಕ್ ಜಪ್ತಿ

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 5

  Sad
 • 5

  Frustrated
 • 9

  Angry

Comments:

0 comments

Write the first review for this !