ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾಜ ವಿ. ಪಾಟೀಲ ಅವರಿಗೆ ‘ಪವಾಡ ಶ್ರೀ’

Published 10 ಮೇ 2024, 23:13 IST
Last Updated 10 ಮೇ 2024, 23:13 IST
ಅಕ್ಷರ ಗಾತ್ರ

ನೆಲಮಂಗಲ: ‘ಶರಣ ಸಾಹಿತ್ಯ ಸಂಸ್ಕೃತಿಯ ಬಗ್ಗೆ ನಿರರ್ಗಳವಾಗಿ ಮಾತನಾಡುವುದರ ಬದಲು ನಮ್ಮ ನಡೆ ನುಡಿಯಲ್ಲಿ ಕಿಂಚಿತ್ತಾದರು ಆದರ್ಶಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ.ವಿ.ಪಾಟೀಲ ಕರೆ ನೀಡಿದರು.

ಪಟ್ಟಣದ ಪವಾಡ ಬಸವಣ್ಣದೇವರಮಠ ಆಯೋಜಿಸಿದ್ದ ಬಸವ ಜಯಂತಿ ಉತ್ಸವದಲ್ಲಿ ‘ಪವಾಡ ಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಪ್ರಶಸ್ತಿಗಳು ಮುಡಿಗೇರದೆ ಹೃದಯದ ಆಳಕ್ಕಿಳಿದು ವಿನಯವಂತಿಕೆಯ ಸೇವಾ ಭಾವನೆಯನ್ನು ಹೆಚ್ಚಿಸಿ ಆತ್ಮವಿಮರ್ಶೆಯ ಹಬ್ಬವಂತಾಗಬೇಕು ಎಂದರು.

ಪ್ರಶಸ್ತಿ ಪ್ರದಾನ ಮಾಡಿದ ಗೊ.ರು.ಚನ್ನಬಸಪ್ಪ ಅವರು, ‘ಶ್ರೇಷ್ಠರನ್ನು ಗೌರವಿಸುವುದು ಶ್ರೇಷ್ಠತೆಯ ಸಂಕೇತ. ನಾನು ಒಳ್ಳೆಯವಾಗುವ ಪ್ರಯತ್ನ ಬಸವ ಜಯಂತಿಯಿಂದಲೇ ಆರಂಭವಾಗಲಿ. ಆತ್ಮನಿರೀಕ್ಷೆಯೊಂದಿಗೆ ಬದಲಾವಣೆ ವೈಯಕ್ತಿಕ ನೆಲೆಯಲ್ಲಿ ಆಗಬೇಕು’ ಎಂದರು.

ಬಸವಣ್ಣದೇವರ ಮಠದ ಸಿದ್ದಲಿಂಗ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಸೋಮಶೇಖರ್‌, ಶಾಸಕ ಎನ್‌.ಶ್ರೀನಿವಾಸಯ್ಯ ಇದ್ದರು.

820 ವಚನಗಳನ್ನು ಹಾಡಿ ಪ್ರಥಮ ಸ್ಥಾನ ಪಡೆದ ದೇವಿಕಾ ಏಕಾಂತಪ್ಪ (ಚಿತ್ರದುರ್ಗ), 560 ವಚನಗಳನ್ನು ಹಾಡಿ ದ್ವಿತೀಯ ಬಹುಮಾನ ಪಡೆದ ಶಿವರಾಜ ಪಾಟೀಲ(ಬಾಲ್ಕಿ), 550 ವಚನಗಳನ್ನು ಹಾಡಿ ಮೂರನೇ ಬಹುಮಾನ ಪಡೆದ ನಾಗಲಿಂಗಮ್ಮ ಅಂಗಡಿ (ಬೆಳಗಾವಿ) ಅವರಿಗೆ ಸ್ಮರಣಿಗೆ ನೀಡಿ ಗೌರವಿಸಲಾಯಿತು.

ಗದ್ದಿಗೆ ಮಠದ ಮಹಾಂತ ಶ್ರೀಗಳು, ಕೊಡಗು ಕಲ್ಮಠದ ಮಹಾಂತ ಶ್ರೀಗಳು ಸಾನಿಧ್ಯ ವಹಿಸಿದ್ದರು. ಲೇಖಕ ಬಾಲಚಂದ್ರ ಅವರ ‘ಜೀವನ ದರ್ಶನʼ ಮತ್ತು ‘ಯುವಜನತೆಗೆ ಸ್ಪೂರ್ತಿʼ ಕೃತಿಗಳನ್ನು ತೋಟಗಾರಿಕೆ ಜಂಟಿ ನಿರ್ದೇಶಕ ಎಂ.ಜಗದೀಶ್‌ ಬಿಡುಗಡೆ ಮಾಡಿದರು. ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ, ಕನ್ನಡ ಚಳವಳಿ ಮುಖಂಡ ಫಾಲನೇತ್ರ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರದೀಪ್‌, ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಾಗರಾಜು ವೇದಿಕೆಯಲ್ಲಿದ್ದರು.

ಬಸವಜಯಂತಿ ಮುನ್ನ ನಡೆದ ವಚನ ಸ್ಪರ್ಧೆಯಲ್ಲಿ 107 ಮಂದಿ ಪಾಲ್ಗೊಂಡು 55 ಸಾವಿರ ವಚನಗಳನ್ನು ವಾಚಿಸಿದರು. 500ಕ್ಕೂ ಹೆಚ್ಚು ವಚನ ವಾಚಿಸಿದ ಸರ್ವರಿಗೂ ಸೂಕ್ತ ಗೌರವದೊಂದಿಗೆ ಪುರಸ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT