ಸೋಮವಾರ, ಆಗಸ್ಟ್ 8, 2022
24 °C

ಕಬ್ಬನ್‌ ಪಾರ್ಕ್‌ನಲ್ಲಿ ಸಾಕುನಾಯಿ ಪ್ರವೇಶ ನಿಷೇಧಿಸಲು ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಬ್ಬನ್‌ ಪಾರ್ಕ್‌ನಲ್ಲಿ ಸಾಕುನಾಯಿಗಳ ಪ್ರವೇಶ ನಿಷೇಧಿಸುವ ಬಗ್ಗೆ ಪ್ರಸ್ತಾವ ಸಲ್ಲಿಸಲಾಗಿದೆ.

ನಾಯಿಗಳು ಪದೇ ಪದೇ ತೊಂದರೆ ನೀಡುತ್ತಿರುವ ಬಗ್ಗೆ ವಾಯುವಿಹಾರಿಗಳಿಂದ ದೂರುಗಳು ಸಲ್ಲಿಕೆಯಾಗಿರುವುದರಿಂದ ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಗೆ ಈ ಪ್ರಸ್ತಾವ ಸಲ್ಲಿಸಲಾಗಿದೆ.

ಉದ್ಯಾನಗಳು ಮತ್ತು ಸಾರ್ವಜನಿಕ ಸ್ಥಳಗಳ ನಿಯಮಾವಳಿಗಳ ಅನ್ವಯ ನಿಷೇಧ ಹೇರುವ ಕುರಿತು ಉನ್ನತ ಮಟ್ಟದ ಸಮಿತಿಯು ಮುಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಉನ್ನತ ಮಟ್ಟದ ಸಮಿತಿಯ ಹಿಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದರೂ ನಿರ್ಧಾರ ಕೈಗೊಂಡಿರಲಿಲ್ಲ.

’ಸಾಕುನಾಯಿಗಳಿಗೆ ಕಡ್ಡಾಯವಾಗಿ ಸರಪಳಿ ಹಾಕಬೇಕು ಮತ್ತು ಅವುಗಳ ತ್ಯಾಜ್ಯವನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು. ಉದ್ಯಾನದ ಹುಲ್ಲು ಹಾಸಿನ ಮೇಲೆ ಸಾಕುನಾಯಿಗಳ ಓಡಾಟ ನಿರ್ಬಂಧಿಸಲಾಗಿದೆ’ ಎನ್ನುವ ಸೂಚನಾ ಫಲಕಗಳನ್ನು ಉದ್ಯಾನದಲ್ಲಿ ಅಳವಡಿಸಲಾಗಿದೆ.

‘ನಿಯಮಗಳನ್ನು ಯಾರೂ ಪಾಲಿಸುತ್ತಿಲ್ಲ. ನಾಯಿಗಳಿಂದ ತೊಂದರೆ ಅನುಭವಿಸಿದ್ದೇವೆ. ಹೀಗಾಗಿ, ಲಾಲ್‌ ಬಾಗ್‌ ರೀತಿಯಲ್ಲಿ ಇಲ್ಲಿಯೂ ಸಾಕು ನಾಯಿಗಳಿಗೆ ನಿಷೇಧ ವಿಧಿಸಬೇಕು‘ ಎಂದು ವಾಯುವಿಹಾರಿಗಳು ಒತ್ತಾಯಿಸಿದ್ದಾರೆ.

‘ನಿಯಮಾವಳಿಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗಿದೆ. ಆದರೆ, ಕೆಲವರು ಮಾತ್ರ ಪಾಲಿಸುತ್ತಾರೆ.  ಸ್ವಚ್ಛತೆ ಕಾಪಾಡುತ್ತಿಲ್ಲ. ನಾಯಿಗಳಿಗೆ ಬೆಲ್ಟ್‌ ಹಾಕುತ್ತಿಲ್ಲ ಮತ್ತು ಎಲ್ಲೆಂದರಲ್ಲಿ ಗಲೀಜು ಮಾಡಿ ಪರಿಸರವನ್ನು ಹಾಳು ಮಾಡಲಾಗುತ್ತಿದೆ. ನಾಯಿಗಳಿಂದ ತೊಂದರೆಗೊಳಗಾದ 70ಕ್ಕೂ ಹೆಚ್ಚು ಮಂದಿ ದೂರು ನೀಡಿದ್ದಾರೆ. ಹೀಗಾಗಿಯೇ ಉದ್ಯಾನದಲ್ಲಿ ನಾಯಿಗಳ ಪ್ರವೇಶವನ್ನು ನಿಷೇಧಿಸುವ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆಯ (ಕಬ್ಬನ್‌ ಉದ್ಯಾನ) ಉಪನಿರ್ದೇಶಕ ಎಚ್‌.ಟಿ. ಬಾಲಕೃಷ್ಣ ತಿಳಿಸಿದ್ದಾರೆ.

ನಿಷೇಧದ ಪ್ರಸ್ತಾವಕ್ಕೆ ಪ್ರಾಣಿಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ದಯವಿಟ್ಟು ನಾಯಿಗಳಿಗೆ ನಿಷೇಧ ಹೇರಬೇಡಿ’ ಎಂದು ಪ್ರಾಣಿಪ್ರಿಯರು ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು