ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಗೆ ಪಡೆದ ಆಮ್ಲಜನಕಕ್ಕೆ ಪ್ರತಿಯಾಗಿ ಸಸಿ ನಾಟಿ

‘ಸಿಟಿಜನ್ಸ್‌ ಫಾರ್‌ ಕೆ.ಆರ್‌.ಪುರ’ ಬಳಗದ ಪರಿಸರ ಕಾಳಜಿ * ಆಕ್ಸಿಜನ್‌ ಸಂಕಟಕ್ಕೆ ಹಸಿರು ಪರಿಹಾರ
Last Updated 1 ಮೇ 2021, 20:57 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದಾಗ ಆಮ್ಲಜನಕ ಹೊಂದಿಸಲು ಸೋಂಕಿತರ ಬಂಧುಗಳು ಎದುರಿಸಿದ ಬವಣೆಗಳನ್ನು ನೋಡಿ ‘ಸಿಟಿಜನ್ಸ್‌ ಫಾರ್‌ ಕೆ.ಆರ್‌.ಪುರ’ ತಂಡ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆದವರು ಬಳಸಿದ ಆಮ್ಲಜನಕಕ್ಕೆ ಪ್ರತಿಯಾಗಿ ಅವರ ಹೆಸರಿನಲ್ಲಿ ಗಿಡನೆಟ್ಟು ಪೋಷಿಸುತ್ತಿದೆ.

‘ಜನರು ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುವಾಗ ಅವರಿಗೆ ನಿತ್ಯ ಸರಾಸರಿ 20 ಸಾವಿರ ಲೀಟರ್‌ಗಳಷ್ಟು ಆಮ್ಲಜನಕ ನೀಡಲಾಗುತ್ತದೆ. ಒಬ್ಬ ರೋಗಿ ಒಂದು ವಾರ ಐಸಿಯುನಲ್ಲಿದ್ದರೆ ಹೆಚ್ಚೂ ಕಡಿಮೆ 1.40 ಲಕ್ಷ ಲೀಟರ್‌ಗಳಷ್ಟು ಆಮ್ಲಜನಕ ಬಳಸುತ್ತಾರೆ. ಚಿಕಿತ್ಸೆ ಬಳಿಕ ಗುಣಮುಖರಾದವರಿಗೆ ಆಮ್ಲಜನಕದ ಮಹತ್ವ ಚೆನ್ನಾಗಿ ಅರ್ಥವಾಗಿರುತ್ತದೆ. ನಗರದಲ್ಲಿ ಗಿಡ ಮರಗಳ ಸಂಖ್ಯೆ ವರ್ಷ ವರ್ಷ ಗಣನೀಯವಾಗಿ ಕಡಿಮೆಯಾಗುತ್ತಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆದು ವಾಸಿಯಾದವರ ಹೆಸರಿನಲ್ಲಿ ಗಿಡ ನೆಟ್ಟು ಬೆಳೆಸಿದರೆ ಪರಿಸರಕ್ಕೆ ಒಳಿತಾಗುತ್ತದೆ. ಈ ಉದ್ದೇಶದಿಂದ ‘ಸಿಟಿಜನ್ಸ್‌ ಫಾರ್‌ ಕೆ.ಆರ್‌.ಪುರ’ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ಬಳಗದ ಬಾಲಾಜಿ ರಘೋತ್ತಮ್‌ ಬಾಲಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಿಕಿತ್ಸೆ ಬಳಿಕ ವಾಸಿಯಾದವರ ಹೆಸರಿನಲ್ಲಿ ನಾಲ್ಕು ದಿನಗಳಲ್ಲಿ 150ಕ್ಕೂ ಅಧಿಕ ಸಸಿಗಳನ್ನು ನೆಟ್ಟಿದ್ದೇವೆ. ಬಸವನಪುರ ಕೆರೆಯ ಆಸುಪಾಸು, ಟಿ.ಸಿ.ಪಾಳ್ಯ– ಮೇಡಹಳ್ಳಿ– ಕೆ.ಆರ್.ಪುರ ರಸ್ತೆಯ ಇಕ್ಕೆಲಗಳಲ್ಲಿ ಖಾಲಿ ಇರುವ ಜಾಗಗಳಲ್ಲಿ ಗಿಡಗಳನ್ನು ನೆಡುತ್ತಿದ್ದೇವೆ. ನಮ್ಮ ಪ್ರಯತ್ನಕ್ಕೆ ಬಿಬಿಎಂಪಿಯ ಅರಣ್ಯ ವಿಭಾಗದ ಅಧಿಕಾರಿಗಳೂ ಗಿಡಗಳನ್ನು ಒದಗಿಸುವ ಮೂಲಕ ಸಹಕಾರ ನೀಡಿದ್ದಾರೆ. ಗಿಡಗಳನ್ನು ನೆಡುವುದು ಮಾತ್ರವಲ್ಲ ಅದಕ್ಕೆ ನೀರು ಹಾಕಿ ಪೋಷಿಸುತ್ತೇವೆ. ನಮ್ಮ ತಂಡದ 25ಕ್ಕೂ ಹೆಚ್ಚು ಸ್ವಯಂಸೇವಕರು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ಎಲ್ಲ ಆಸ್ಪತ್ರೆಗಳ ಮುಂದ ಆಕ್ಸಿಜನ್‌ ಸಿಲಿಂಡರ್‌ ಹೊತ್ತು ನಿಂತ ವಾಹನವನ್ನು ನೋಡಿದ ಬಳಿಕವಾದರೂ ಜನ ಎಚ್ಚೆತ್ತುಕೊಳ್ಳಬೇಕು. ಕೊರೊನಾದಿಂದ ಮೃತಪಟ್ಟವರ ಸ್ಮರಣಾರ್ಥ ಅವರ ಬಂಧುಗಳು ಹಾಗೂ ಈ ಸೋಂಕಿನಿಂದ ಗುಣಮುಖರಾದವರು ಗಿಡ ನೆಟ್ಟು ಬೆಳೆಸಬೇಕು. ತನ್ಮೂಲಕ ಪರಿಸರದ ಮೇಲೆ ಮನುಷ್ಯನಿಂದ ಆಗಿರುವ ಹಾನಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು’ ಎಂದು ಕೋರಿದರು.

‘ಸಿಟಿಜನ್ಸ್‌ ಫಾರ್‌ ಕೆ.ಆರ್.ಪುರ ಬಳಗದ ಪ್ರಯತ್ನ ಇತರರಿಗೂ ಮಾದರಿ. ಅವರು ಕೇಳಿದ ತಕ್ಷಣ ಗಿಡಗಳನ್ನು ಪೂರೈಸಿದ್ದೇವೆ. ನಗರದ ಪರಿಸರದಲ್ಲಿ ನೆಟ್ಟು ಬೆಳೆಸಲು ಸೂಕ್ತವಾದ 10 ಸಾವಿರ ಸಸಿಗಳು ನಮ್ಮಲ್ಲಿವೆ. ಗಿಡ ನೆಡಲು ಜನ ಮುಂದಾದರೆ ಸಸಿಗಳನ್ನು ಪೂರೈಸಲು ಸಿದ್ಧ’ ಎಂದು ಮಹದೇವಪುರ ವಲಯದ ಪ್ರಭಾರ ವಲಯ ಅರಣ್ಯ ಅಧಿಕಾರಿ ಎಸ್‌.ತಾರಾನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

***

ಜನರು ಈಗಲಾದರೂ ಆಮ್ಲಜನಕದ ಮಹತ್ವ ತಿಳಿದುಕೊಳ್ಳಬೇಕು. ಐಸಿಯುನಲ್ಲಿ ಚಿಕಿತ್ಸೆ ಪಡೆದು ಕೊರೊನಾ ಸೋಂಕಿನಿಂದ ಗುಣಮುಖರಾದವರು ಗಿಡ ನೆಟ್ಟು ಬೆಳೆಸುವ ಮೂಲಕ ಪರಿಸರದ ಋಣ ತೀರಿಸಬೇಕು.
-ಬಾಲಾಜಿ ರಘೋತ್ತಮ್‌ ಬಾಲಿ, ಸಿಟಿಜನ್ಸ್‌ ಫಾರ್‌ ಕೆ.ಆರ್‌.ಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT