ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಣನಿಗೆ ಪೋಲಿಯೆಂದರೆ ನೋವಾಗುತ್ತದೆ: ಕವಿ ಎಚ್‌.ಎಸ್. ವೆಂಕಟೇಶಮೂರ್ತಿ ಮನದಾಳ

Published 9 ಸೆಪ್ಟೆಂಬರ್ 2023, 21:07 IST
Last Updated 9 ಸೆಪ್ಟೆಂಬರ್ 2023, 21:07 IST
ಅಕ್ಷರ ಗಾತ್ರ

ಬೆಂಗಳೂರು: ‘ಕವಿ ಬಿ.ಆರ್. ಲಕ್ಷ್ಮಣರಾವ್ ಅವರ ಕವಿತೆಗಳಲ್ಲಿ ಪ್ರಣಯ, ವಾತ್ಸಲ್ಸ ಹಾಗೂ ಪ್ರೀತಿಯಲ್ಲಿಯೂ ಗಾಂಭೀರ್ಯತೆ ಇದೆ. ಆದ್ದರಿಂದ ಅವರನ್ನು ಕನ್ನಡದ ಪೋಲಿ ಕವಿ ಅಂತ ಕರೆದರೆ ನೋವಾಗುತ್ತದೆ’ ಎಂದು ಕವಿ ಎಚ್.ಎಸ್. ವೆಂಕಟೇಶಮೂರ್ತಿ ತಿಳಿಸಿದರು. 

ತೇಜು ಪಬ್ಲಿಕೇಷನ್ಸ್ ಹಾಗೂ ಸಿ.ವಿ.ಜಿ. ಪ್ರಕಾಶನ ಜಂಟಿಯಾಗಿ ನಗರದಲ್ಲಿ ಶನಿವಾರ ಆಯೋಜಿಸಿದ ‘ಬಿ.ಆರ್.ಎಲ್–77’ ಕಾರ್ಯಕ್ರಮದಲ್ಲಿ ಅವರ ‘ಬಿನ್ನಹಕೆ ಬಾಯಿಲ್ಲವಯ್ಯ’ (ಈವರೆಗಿನ ಲೇಖನಗಳ ಸಂಗ್ರಹ) ಹಾಗೂ ‘ಬೆಳದಿಂಗಳ ಬಾಲೆ’ (ನಗೆಗವಿತೆಗಳು) ಕೃತಿಯನ್ನು ಬಿಡುಗಡೆ ಮಾಡಿ, ಮಾತನಾಡಿದರು.  

‘ಲಕ್ಷ್ಮಣರಾವ್ ಅವರು ತಾಯಿ–ಹೆಂಡತಿಯ ಬಗ್ಗೆ ಯಾವಾಗಲೂ ಲಘುವಾಗಿ ಬರೆದಿಲ್ಲ. ಹೆಣ್ಣನ್ನು ಗಹನವಾದ ಗೌರವದಿಂದ ನೋಡುವ ಕವಿಗಳಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ. ಅವರು ಏನೇ ಬರೆದರೂ ಅನಂತ ಅರ್ಥಛಾಯೆ ಹುದುಗಿಸಬಹುದಾದ ಶಕ್ತಿ ಹೊಂದಿದ್ದಾರೆ. ಆದ್ದರಿಂದಲೇ ಅವರು ಆಸಕ್ತಿದಾಯಕ ಕವಿ. ತಾಯಿ ಬಗ್ಗೆ ಕರುಳು ಕಿತ್ತು ಬರುವ ರೀತಿಯ ಪದ್ಯವನ್ನು ಅವರು ಬರೆದಿದ್ದಾರೆ. ಅವರ ಕಾವ್ಯದಲ್ಲಿ ಹೆಣ್ಣಿನ ಅನಂತ ಮುಖಗಳನ್ನು ಅತ್ಯಂತ ಪ್ರೀತಿ ಮತ್ತು ಗೌರವದಿಂದ ತೋರಿಸುವ ಅಭಿಲಾಷೆ ಹೊಂದಿದ್ದಾರೆ. ಕನ್ನಡದ ಗಂಭೀರ ಕವಿ ಆಗಿರುವ ಅವರು, ಕೆ.ಎಸ್. ನರಸಿಂಹಸ್ವಾಮಿ ಅವರ ಉತ್ತರಾಧಿಕಾರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  

‘ಕೆಲವರಿಗೆ ವಯಸ್ಸನ್ನು ಹೆಚ್ಚಿಸಿಕೊಳ್ಳುವ, ಕುಗ್ಗಿಸಿಕೊಳ್ಳುವ ಹುಚ್ಚು ಇರುತ್ತದೆ. ನನಗೆ 80 ವರ್ಷ ಆಗದಿದ್ದರೂ 80 ವರ್ಷ ಎನ್ನುತ್ತೇನೆ. ಲಕ್ಷ್ಮಣರಾವ್ ಅವರಿಗೆ 78 ವರ್ಷವಾಗಿದ್ದರೂ 77 ವರ್ಷ ಅಂತ ಹೇಳಿಕೊಳ್ಳುತ್ತಾರೆ. ಅವರು ಯಾವಾಗಲೂ ಯೌವ್ವನ ಶಾಲಿಯಾಗಿ ಇರಬೇಕು ಅಂತ ಬಯಸುತ್ತಾರೆ. ಅದೇ ರೀತಿ ಇದ್ದಾರೆ. ಅವರಲ್ಲಿ ಅನೇಕ ಪ್ರೇಮ ಕವಿತೆಗಳಿದ್ದು, ಅವೆಲ್ಲವೂ ವಿಪ್ರಲಂಭ ಶೃಂಗಾರದ ಕವಿತೆಗಳು. ಸಂಭೋಗ ಶೃಂಗಾರ ಅವರಲ್ಲಿ ಇಲ್ಲವೇ ಇಲ್ಲ’ ಎಂದು ಹೇಳಿದರು. 

ಜಯನಗರ ನ್ಯಾಷನಲ್ ಕಾಲೇಜಿನ ಅಧ್ಯಕ್ಷ ಪಿ.ಎಲ್. ವೆಂಕಟರಾಮರೆಡ್ಡಿ, ‘ಲಕ್ಷ್ಮಣರಾವ್ ಅವರು ಇನ್ನಷ್ಟು ಪುಸ್ತಕಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಲಿ’ ಎಂದು ಆಶಯ ವ್ಯಕ್ತಪಡಿಸಿದರು. 

ಲಕ್ಷ್ಮಣರಾವ್ ಅವರು ತಮ್ಮ ಸ್ನೇಹಿತರ ಒಡನಾಟವನ್ನು ಸ್ಮರಿಸಿಕೊಂಡು, ಧನ್ಯವಾದ ತಿಳಿಸಿದರು. ‘ಬಿನ್ನಹಕೆ ಬಾಯಿಲ್ಲವಯ್ಯ’ ಕೃತಿಯ ಬಗ್ಗೆ ಕಲಾವಿದ ಶ್ರೀನಿವಾಸ ಪ್ರಭು ಹಾಗೂ ‘ಬೆಳದಿಂಗಳ ಬಾಲೆ’ ಕೃತಿಯ ಬಗ್ಗೆ ಕವಿ ಎಚ್. ಡುಂಡಿರಾಜ್ ಮಾತನಾಡಿದರು. ವರ್ಷಾ ಸುರೇಶ್, ಚಿನ್ಮಯಿ ಚಂದ್ರಶೇಖರ್ ಹಾಗೂ ವಿಶ್ವಾಸ್ ವಶಿಷ್ಠ ಅವರು ಲಕ್ಷ್ಮಣರಾವ್ ಅವರು ರಚಿಸಿದ ಭಾವಗೀತೆಗಳನ್ನು ಹಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT