ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೊಲೀಸ್ ನೇಮಕಾತಿ: ಶೇ 33ರಷ್ಟು ಮಹಿಳಾ ಮೀಸಲಾತಿ’

ಆಡಳಿತ ಸುಧಾರಣಾ ಆಯೋಗದ ಶಿಫಾರಸು
Last Updated 5 ಏಪ್ರಿಲ್ 2022, 19:39 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್ ಇಲಾಖೆ ಸುಧಾರಣೆ ಕ್ರಮಗಳ ಬಗ್ಗೆ ರಾಜ್ಯ ಆಡಳಿತ ಸುಧಾರಣಾ ಆಯೋಗ ವರದಿಯೊಂದನ್ನು ಸಿದ್ದಪಡಿಸಿದ್ದು, ಅದನ್ನು ಗೃಹ ಇಲಾಖೆಗೆ ನೀಡಿದೆ.

ಆಯೋಗದ ಅಧ್ಯಕ್ಷರೂ ಆದ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಮಂಗಳವಾರ ಭೇಟಿ ಮಾಡಿ ವರದಿ ಹಸ್ತಾಂತರಿಸಿದರು. ವರದಿಯಲ್ಲಿರುವ ಶಿಫಾರಸುಗಳ ಬಗ್ಗೆ ಚರ್ಚಿಸಿದರು.

‘ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಪ್ರಮಾಣ ಶೇ 8.3ರಷ್ಟಿದೆ. ಕಾನ್‌ಸ್ಟೆಬಲ್‌ನಿಂದ ಸಬ್‌ ಇನ್‌ಸ್ಪೆಕ್ಟರ್‌ವರೆಗಿನ (ಪಿಎಸ್‌ಐ) ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಬೇಕು’ ಎಂಬ ಶಿಫಾರಸು ವರದಿಯಲ್ಲಿದೆ.

‘ಪೊಲೀಸ್ ಠಾಣೆಗಳ ಮೂಲಕ 32 ನಾಗರಿಕ ಸೇವೆಗಳನ್ನು ಒದಗಿಸಲಾಗುತ್ತಿದೆ. ಪ್ರತಿಯೊಂದು ಠಾಣೆಯಲ್ಲಿ ನಾಗರಿಕ ಸೇವೆಗಳ ಸಹಾಯ ಕೇಂದ್ರ ಸ್ಥಾಪಿಸಬೇಕು. ಮುಂಜಾಗ್ರತಾ ಕ್ರಮವಾಗಿ ಶಾಂತಿ ಕಾಪಾಡಲು ಸಿಆರ್‌ಪಿಸಿ 107–110ರ ಅಡಿ ಕ್ರಮ ಜರುಗಿಸುವ ಅಧಿಕಾರ ತಹಶೀಲ್ದಾರ್ ಹಾಗೂ ತಾಲ್ಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ ಅವರಿಗಿದೆ. ಇದೇ ಅಧಿಕಾರವನ್ನು ಜಿಲ್ಲಾ ಎಸ್ಪಿಗಳಿಗೂ ನೀಡಬೇಕು. ಪೊಲೀಸ್ ಕಾಯ್ದೆಯಡಿ ಸೂಚಿಸಲಾಗಿರುವ ದಂಡದ ಮೊತ್ತವನ್ನು ಪರಿಷ್ಕರಿಸಬೇಕು’ ಎಂಬ ಅಂಶವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಡಾರ್ಕ್‌ನೆಟ್, ಬಿಟ್‌ಕಾಯಿನ್‌ ಹಾಗೂ ಇತರೆ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಇವುಗಳನ್ನು ಭೇದಿಸಲು ವಿಶೇಷ ಜ್ಞಾನದ ಅವಶ್ಯಕತೆ ಇದೆ. ಆದರೆ, ಅಗತ್ಯ ಅರ್ಹತೆ ಹಾಗೂ ತರಬೇತಿ ಇಲ್ಲದ ಅಪರಾಧ ಹಾಗೂ ಸಂಚಾರ ಪೊಲೀಸರನ್ನೇ ಸೈಬರ್ ಠಾಣೆಗೆ ನಿಯೋಜಿಸಲಾಗುತ್ತಿದೆ. ಠಾಣೆಗೆ ಒಬ್ಬರು ಅಥವಾ ಇಬ್ಬರನ್ನು ಎಂಸಿಎ, ಬಿಸಿಎ, ಡಿಪ್ಲೊಮಾ ಪದವೀಧರರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಬೇಕು. ಪ್ರತಿ ಕಂದಾಯ ಜಿಲ್ಲೆಯಲ್ಲಿ ಮಿನಿ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪಿಸಬೇಕು. ಲಾಕಪ್‌ ಕೈದಿಗಳಿಗೆ ದಿನಕ್ಕೆ ಎರಡು ಊಟಗಳನ್ನು ನೀಡಲಾಗುತ್ತಿದೆ. ದಿನಕ್ಕೆ ಮೂರು ಊಟ ನಿಗದಿಪಡಿಸಿ, ಅದರ ಮೊತ್ತವನ್ನು ಹೆಚ್ಚಿಸಬೇಕು. ಕಾರ್ಯ ನಿಯೋಜನೆ ವೇಳೆ ಪುರುಷ ಹಾಗೂ ಮಹಿಳಾ ಸಿಬ್ಬಂದಿ ನಡುವಿನ ಅಸಮಾನತೆಯನ್ನು ಕಡಿಮೆ ಮಾಡಿ, ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂಬ ಶಿಫಾರಸುಗಳು ಸಹ ವರದಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT