ಗುರುವಾರ , ಮಾರ್ಚ್ 4, 2021
26 °C
ಪಿಎಸ್‌ಐ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದ ಆರೋಪಿಗಳು

ಗಾಂಜಾ ಮಾರಾಟಗಾರರಿಗೆ ಗುಂಡೇಟು !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಮಾದಕ ವಸ್ತು ಮಾರಾಟ ತಡೆಗೆ ಕಾರ್ಯಾಚರಣೆ ಚುರುಕುಗೊಳಿಸಿರುವ ರಾಜಧಾನಿ ಪೊಲೀಸರು, ಇದೇ ಮೊದಲ ಬಾರಿಗೆ ಡ್ರಗ್ ಪೆಡ್ಲರ್‌ಗಳಿಬ್ಬರ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ಹೊಸಕೋಟೆಯ ಸಯ್ಯದ್ ಅಲಿಯಾಸ್ ಫಾರೂಕ್ ಹಾಗೂ ಸಾದಿಕ್ ಶರೀಫ್‌ ಬಂಧಿತರು. ಕಾಲಿಗೆ ಗುಂಡು ತಗುಲಿ ಗಾಯಗೊಂಡಿರುವ ಅವರಿಬ್ಬರನ್ನು ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. 

‘ಆಂಧ್ರಪ್ರದೇಶದಿಂದ ಗಾಂಜಾ ತರುತ್ತಿದ್ದ ಆರೋಪಿಗಳು, ಅವುಗಳನ್ನು ಲೇಸ್‌ ಹಾಗೂ ಕುರ್‌ಕುರೆ ಪೊಟ್ಟಣಗಳಲ್ಲಿ ತುಂಬುತ್ತಿದ್ದರು. ಬೆಂಗಳೂರಿನ ಹಲವೆಡೆ ಏಜೆಂಟರನ್ನು ನೇಮಿಸಿಕೊಂಡು ಮಾರಾಟ ಮಾಡಿಸುತ್ತಿದ್ದರು’ ಎಂದು ವೈಟ್‌ಫೀಲ್ಡ್‌ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದರು.

‘ಆರೋಪಿಗಳು ಗಾಂಜಾ ಸಮೇತವಾಗಿ ಮಂಗಳವಾರ ಸಂಜೆ 6.30 ಗಂಟೆ ಸುಮಾರಿಗೆ ಎಚ್‌ಎಎಲ್‌ ಬಳಿಯ ಬೋರ್‌ವೆಲ್ ಜಂಕ್ಷನ್‌ ಮೂಲಕ ಪಲ್ಸರ್‌ ಬೈಕ್‌ನಲ್ಲಿ ಹೊರಟಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಇನ್‌ಸ್ಪೆಕ್ಟರ್ ಸಾದಿಕ್ ಪಾಷಾ, ಪಿಎಸ್‌ಐ ಗುರುಪ್ರಸಾದ್ ಹಾಗೂ ಕಾನ್‌ಸ್ಟೆಬಲ್ ರವಿಶಂಕರ್‌ ಸ್ಥಳಕ್ಕೆ ಹೋಗಿದ್ದರು’.

‘ಬೈಕ್‌ ಅಡ್ಡಗಟ್ಟಿದ್ದ ಪಿಎಸ್‌ಐ, ಆರೋಪಿಗಳನ್ನು ಹಿಡಿದುಕೊಳ್ಳಲು ಮುಂದಾಗಿದ್ದರು. ಆರೋಪಿಗಳು, ತಮ್ಮ ಬಳಿಯ ಚಾಕುವಿನಿಂದ ಪಿಎಸ್‌ಐ ಹೊಟ್ಟೆಗೆ ಇರಿದಿದ್ದರು. ರಕ್ಷಣೆಗೆ ಹೋದ ಕಾನ್‌ಸ್ಟೆಬಲ್‌ ಕೈಗೆ ಮಚ್ಚಿನಿಂದ ಹೊಡೆದಿದ್ದರು. ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್‌, ಆರೋಪಿಗಳ ಮೇಲೆ ಗುಂಡು ಹಾರಿಸಿದರು. ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಪಿಎಸ್ಐ ಹಾಗೂ ಕಾನ್‌ಸ್ಟೆಬಲ್‌, ಸಕ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಅವರು ಹೇಳಿದರು. 

8 ಏಜೆಂಟರ ಬಂಧನ: ಬಂಧಿತ ಆರೋಪಿಗಳು ನೀಡಿದ್ದ ಹೇಳಿಕೆ ಆಧರಿಸಿ ನಗರದಲ್ಲಿದ್ದ 8 ಏಜೆಂಟರನ್ನು ಪೊಲೀಸರು ಬಂಧಿಸಿದ್ದಾರೆ.

ಮಾರತ್ತಹಳ್ಳಿಯ ಮೊಹಿದ್ದುರ್ ಶೇಖ್, ಮಹಮ್ಮದ್ ಶುಕುರ್, ಮಹಮ್ಮದ್ ಅಸ್ಲಾಂ, ಮಹಮ್ಮದ್ ಶುಹಾಕ್, ಹಫೀಜ್ ಉಲ್, ಕೆ.ಆರ್‌.ಪುರದ ಮಹಮ್ಮದ್ ಬಿಲಾಲ್, ಗಾರೇಪಾಳ್ಯದ ಹಫೀಜ್ ಉಲ್, ಪಣತ್ತೂರಿನ ಹಫೀಜ್ ಉಲ್ ಶೇಖ್ ಬಂಧಿತರು. ಅವರಿಂದಲೂ 3 ಕೆ.ಜಿ ಗಾಂಜಾವನ್ನು ಜಪ್ತಿ ಮಾಡಲಾಗಿದೆ.

‘ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಾಗರಾಜ್‌, ಅಕ್ರಮವಾಗಿ ಗಾಂಜಾ ಸಸಿ ಬೆಳೆಯುತ್ತಿದ್ದವರ ಜತೆ ಒಡನಾಟವಿಟ್ಟುಕೊಂಡಿದ್ದ. ಅವರಿಂದಲೇ ಗಾಂಜಾ ಖರೀದಿಸಿ ಶಹನಾಜ್ ಎಂಬಾತನ ಮೂಲಕ ಸಯ್ಯದ್ ಹಾಗೂ ಸಾದಿಕ್ ಶರೀಫ್‌ಗೆ ಮಾರುತ್ತಿದ್ದ. ನಾಗರಾಜ್ ಹಾಗೂ ಶಹನಾಜ್ ಸದ್ಯ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಗೂಂಡಾ ಕಾಯ್ದೆ

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿ ಎನ್‌.ನವೀನ್‌ ಕುಮಾರ್‌ (29) ಎಂಬಾತನನ್ನು ಗೂಂಡಾ ಕಾಯ್ದೆಯಡಿ ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

‘ಕೊಳ್ಳೆಗಾಲ ತಾಲ್ಲೂಕಿನ ಪುಷ್ಪಾಪುರ ಗ್ರಾಮದ ಆರೋಪಿ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದವು. 45 ಕೆ.ಜಿ ಗಾಂಜಾವನ್ನು ಆತನಿಂದ ಜಪ್ತಿ ಮಾಡಲಾಗಿತ್ತು. ಜಾಮೀನು ಮೇಲೆ ಹೊರಬಂದಿದ್ದ ಆತ, ಗಾಂಜಾ ಮಾರಾಟ ಮುಂದುವರಿಸಿದ್ದ. ತನ್ನ ವಿರುದ್ಧದ ಪ್ರಕರಣದ ಸಾಕ್ಷಿದಾರರಿಗೆ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ಆತನ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು’ ಎಂದು ಆಗ್ನೇಯ ಡಿಸಿಪಿ ಬೋರಲಿಂಗಯ್ಯ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು