ಗುರುವಾರ , ಆಗಸ್ಟ್ 5, 2021
26 °C
ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯ ಕೋವಿಡ್ ಪುನರ್ವಸತಿ ಕೇಂದ್ರದಲ್ಲಿ ಪ್ರಕರಣಗಳು ಪತ್ತೆ

ಅವಧಿಗೆ ಮುನ್ನವೇ ಮನೆಗೆ: ಕೋವಿಡ್ ಸೋಂಕು ಉಲ್ಬಣ

ವರುಣ್‌ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ಪೀಡಿತರು ಚಿಕಿತ್ಸೆ ಅವಧಿ ಮುಗಿಯುವ ಮುನ್ನವೇ ಆಸ್ಪತ್ರೆಯಿಂದ ಮನೆಗೆ ತೆರಳುತ್ತಿರುವ ಪರಿಣಾಮ ಕೆಲವರ ದೇಹದಲ್ಲಿ ಸೋಂಕು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ವಾರದ ಬಳಿಕ ಅದು ಉಲ್ಬಣಿಸುತ್ತಿದೆ ಎನ್ನುವುದು ದೃಢಪಟ್ಟಿದೆ.

ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯ ವೈದ್ಯರು ಈ ರೀತಿಯ ಪ್ರಕರಣಗಳನ್ನು ಗುರುತಿಸಿ, ವಿಶ್ಲೇಷಿಸಿದ್ದಾರೆ. ಅಲ್ಲಿನ ಕೋವಿಡ್ ಪುನರ್ವಸತಿ ಕೇಂದ್ರದಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡವರಿಗೆ ಕಾಣಿಸಿಕೊಳ್ಳುತ್ತಿರುವ ಸಮಸ್ಯೆಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ರಾಜ್ಯದಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಏಕೈಕ ಸರ್ಕಾರಿ ಪುನರ್ವಸತಿ ಕೇಂದ್ರ ಇದಾಗಿದೆ. ಕೋವಿಡ್ ಎರಡನೇ ಅಲೆಯ ಬಳಿಕ ಈ ಕೇಂದ್ರಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಕಳೆದ ಒಂದೂವರೆ ತಿಂಗಳಿಂದ ಪ್ರತಿನಿತ್ಯ ಸರಾಸರಿ 4 ಮಂದಿ ಚಿಕಿತ್ಸೆಗೆ ಕೇಂದ್ರವನ್ನು ಸಂಪರ್ಕಿಸಿದ್ದಾರೆ.

ಕಳೆದ ವರ್ಷ ಪ್ರಾರಂಭವಾದ ಈ ಕೇಂದ್ರದಲ್ಲಿ ಈ ವರ್ಷ ಮೇ ಅಂತ್ಯಕ್ಕೆ 200 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದರು. ಕೋವಿಡ್ ವಾಸಿಯಾದ ಕೆಲ ದಿನಗಳ ಬಳಿಕ ಉಸಿರಾಟದ ಸಮಸ್ಯೆ, ಮೈ–ಕೈ ನೋವು, ಕೆಮ್ಮು ಸೇರಿದಂತೆ ವಿವಿಧ ಸಮಸ್ಯೆಗಳು ಅವರಲ್ಲಿ ಕಾಣಿಸಿಕೊಂಡಿದ್ದವು.

ಒಂದೂವರೆ ತಿಂಗಳಲ್ಲಿ 250 ಮಂದಿ ಕೇಂದ್ರವನ್ನು ಸಂಪರ್ಕಿಸಿ, ತಪಾಸಣೆ ಗೆ ಒಳಪಟ್ಟಿದ್ದಾರೆ. ಇವರಲ್ಲಿ ಬಹುತೇಕರು ಸಂಕೀರ್ಣ ಸಮಸ್ಯೆ ಎದುರಿಸಿದ್ದಾರೆ. ಈ ರೀತಿ ಕೇಂದ್ರಕ್ಕೆ ಬರುವವರಿಗೆ ಕೋವಿಡ್ ಪರೀಕ್ಷೆಗಳನ್ನೂ ನಡೆಸಲಾಗುತ್ತಿದ್ದು, 11 ಮಂದಿಯಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿರುವುದು ಖಚಿತಪಟ್ಟಿದೆ. ಕೋವಿಡ್ ಚಿಕಿತ್ಸೆ ಪಡೆದು, ಆಸ್ಪತ್ರೆಯಿಂದ ಮನೆಗೆ ತೆರಳಿದ ಹತ್ತು ದಿನಗಳೊಳಗೆ ಇವರಿಗೆ ಸಮಸ್ಯೆಗಳು ಕಾಣಿಸಿಕೊಂಡಿದ್ದವು.

2ನೇ ಅಲೆ ಬಳಿಕ ಅಧಿಕ: ‘ಕೋವಿಡ್ ಎರಡನೇ ಅಲೆಯು ಈಗ ನಿಯಂತ್ರಣಕ್ಕೆ ಬಂದಿದೆ. ಗುಣಮುಖರಾಗಿ ಮನೆಗೆ ತೆರಳಿದವರಿಗೆ ಆಯಾಸ ಸೇರಿದಂತೆ ಕೆಲವೊಂದು ಸಮಸ್ಯೆಗಳು ಕಾಡಲಾರಂಭಿಸಿವೆ. ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾದವರಲ್ಲಿ ಕೆಲವರು ಚಿಕಿತ್ಸೆಯ ಅವಧಿ ಪೂರ್ಣಗೊಳ್ಳುವುದಕ್ಕೆ ಮುನ್ನವೇ ಮನೆಗೆ ತೆರಳುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಅಂದರೆ, ಕೆಲವರು ಕನಿಷ್ಠ 7 ದಿನಗಳೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿಲ್ಲ. ಆಸ್ಪತ್ರೆಯಿಂದ ಕಳುಹಿಸುವಾಗ ಕೆಲವೆಡೆ ಕೋವಿಡ್ ಪರೀಕ್ಷೆಯನ್ನೂ ನಡೆಸುತ್ತಿಲ್ಲ. ಪೂರ್ಣ ಪ್ರಮಾಣದಲ್ಲಿ ಸೋಂಕು ವಾಸಿಯಾಗದ ಕಾರಣ ವಾರದಲ್ಲಿ ಸಮಸ್ಯೆಗಳು ಉಲ್ಬಣಿಸುತ್ತಿದೆ. ಪರೀಕ್ಷಿಸಿದಾಗ ಅವರಲ್ಲಿ ಸೋಂಕು ಇರುವುದು ದೃಢಪಡುತ್ತಿದೆ. ಕೆಲವರಿಗೆ ಎರಡು ತಿಂಗಳ ಬಳಿಕ ಕೋವಿಡೋತ್ತರ ಸಮಸ್ಯೆಗಳು ಗೋಚರಿಸುತ್ತಿವೆ’ ಎಂದು ಆಸ್ಪತ್ರೆಯ ವೈದ್ಯರು ವಿಶ್ಲೇಷಿಸಿದ್ದಾರೆ.

‘ಶ್ವಾಸಕೋಶ ತಜ್ಞರ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಕೆಲ ಖಾಸಗಿ ಆಸ್ಪತ್ರೆಗಳು ಸೋಂಕಿತರನ್ನು ಬೇಗ ಮನೆಗೆ ಕಳುಹಿಸಿವೆ. ಇದರಿಂದ ಕೆಲವರಲ್ಲಿ ಕಾಯಿಲೆ ಪೂರ್ಣ ಪ್ರಮಾಣದಲ್ಲಿ ವಾಸಿಯಾಗದೆಯೇ ಸಮಸ್ಯೆ ಮತ್ತೆ ಗೋಚರಿಸುತ್ತಿದೆ. ಗುಣಮುಖರಲ್ಲಿ ಪ್ರಮುಖವಾಗಿ ಸೆಪ್ಸಿಸ್ ಸಮಸ್ಯೆ (ತೀವ್ರವಾದ ನಂಜು) ಕಾಣಿಸಿಕೊಳ್ಳುತ್ತಿದೆ. ಇದು ಅಂಗಾಂಗಗಳ ವೈಫಲ್ಯ ಹಾಗೂ ಮರಣಕ್ಕೂ ಕಾರಣವಾಗಬಹುದು’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ. ನಾಗರಾಜ್ ತಿಳಿಸಿದರು.

ಶೇ 2ರಷ್ಟು ಮಂದಿ ಗಂಭೀರ ಅಸ್ವಸ್ಥ

ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕ ಸಮಸ್ಯೆ ಕಾಣಿಸಿಕೊಂಡು, ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡುತ್ತಿರುವವರಲ್ಲಿ ಶೇ 2ರಷ್ಟು ಮಂದಿ ಗಂಭೀರವಾಗಿ ಅಸ್ವಸ್ಥಗೊಂಡವರಾಗಿದ್ದಾರೆ. 73 ಮಂದಿಯನ್ನು ಒಳರೋಗಿಗಳಾಗಿ ದಾಖಲಿಸಿಕೊಂಡು, ಚಿಕಿತ್ಸೆ ಒದಗಿಸಲಾಗಿದೆ. ಇವರಲ್ಲಿ ಕೆಲವರು ಮನೆ ಆರೈಕೆಗೆ ಒಳಗಾದವರಾಗಿದ್ದಾರೆ. ಕೇಂದ್ರದಲ್ಲಿ ದಾಖಲಾದವರಲ್ಲಿ 15 ಮಂದಿ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ.

‘ಕೋವಿಡ್ ಮೊದಲ ಅಲೆಯಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಮಸ್ಯೆ ಎದುರಿಸಿದ್ದರು. ಎರಡನೇ ಅಲೆಯಲ್ಲಿ ಸೋಂಕಿನ ತೀವ್ರತೆಗೆ ಮಧ್ಯಮ ವಯಸ್ಕರು ಹೆಚ್ಚಾಗಿ ಅಸ್ವಸ್ಥರಾಗಿದ್ದಾರೆ. ಚೇತರಿಸಿಕೊಂಡ ಕೆಲ ದಿನಗಳ ಬಳಿಕ ಉಸಿರಾಟದ ಸಮಸ್ಯೆ, ಶ್ವಾಸಕೋಶದ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮನೆ ಆರೈಕೆ ವೇಳೆ ಸಹ ಕೆಲವರು ನಿರ್ಲಕ್ಷ್ಯ ಮಾಡಿ, ಸೋಂಕು ವಾಸಿಯಾಗಿರುವುದನ್ನು ಖಚಿತಪಡಿಸಿಕೊಳ್ಳದೆಯೇ ಸಮಸ್ಯೆ ತಂದುಕೊಳ್ಳುತ್ತಿದ್ದಾರೆ’ ಎಂದು ಡಾ.ಸಿ. ನಾಗರಾಜ್ ವಿವರಿಸಿದರು.

***

2ನೇ ಅಲೆಯಲ್ಲಿ ಚೇತರಿಸಿಕೊಂಡ ಹೆಚ್ಚಿನವರಿಗೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಅನಿಯಂತ್ರಿತ ಸ್ಟೀರಾಯ್ಡ್ ಬಳಕೆ ಹಾಗೂ ಅವಧಿ ಪೂರ್ವ ಆಸ್ಪತ್ರೆಯಿಂದ ಮನೆಗೆ ತೆರಳಿರುವುದು ಪ್ರಮುಖ ಕಾರಣ.

– ಡಾ.ಸಿ. ನಾಗರಾಜ್, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ

ಇಲ್ಲಿ ಯಾರೂ ಶಾಶ್ವತವಲ್ಲ ಎಂಬ ಪಾಠವನ್ನು ಕೋವಿಡ್‌ ಕಲಿಸಿದೆ. ಇರುವಷ್ಟು ದಿನ ಕಷ್ಟದಲ್ಲಿಇರುವವರಿಗೆ ಕೈಲಾದಷ್ಟು ಸಹಾಯ ಮಾಡಬೇಕೆಂಬುದು ನಮ್ಮ ಧ್ಯೇಯ.

–ಚಂದ್ರಶೇಖರ್‌ ವೀರಪ್ಪ, ಸಂಡೆ ವಾಕರ್ಸ್‌ ಗುಂಪಿನ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು