ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ಕೆ.ಆರ್. ರಸ್ತೆಯಲ್ಲಿ ವಾಹನ ಸವಾರರ ಪಡಿಪಾಟಲು l ದುರಸ್ತಿ ಭಾಗ್ಯ ಮರೀಚಿಕೆ

Last Updated 28 ನವೆಂಬರ್ 2019, 7:45 IST
ಅಕ್ಷರ ಗಾತ್ರ

ಬೆಂಗಳೂರು: ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಕೃಷ್ಣ ರಾಜೇಂದ್ರ (ಕೆ.ಆರ್.ರಸ್ತೆ) ರಸ್ತೆಯಲ್ಲಿ ಸಾಲು ಸಾಲು ಗುಂಡಿಗಳಿವೆ. ಚಿಕ್ಕಪೇಟೆ ಕ್ಷೇತ್ರದ ಶಾಸಕ ಉದಯ ಗರುಡಾಚಾರ್ ಕಚೇರಿ ಮುಂಭಾಗದಲ್ಲೇ ಡಾಂಬರು ಕಿತ್ತು ಹೋಗಿದ್ದರೂ ದುರಸ್ತಿ ಭಾಗ್ಯ ಮರೀಚಿಕೆಯಾಗಿದೆ.

ಇಲ್ಲಿ ಗುಂಡಿಮಯ ರಸ್ತೆಗಳಿಂದಾಗಿ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿ ವಾಹನಗಳು ನಿಧಾನಗತಿಯಲ್ಲಿ ಚಲಿಸುವುದರಿಂದ ವಾಣಿವಿಲಾಸ ರಸ್ತೆಯ ಮೇಲ್ಸೇತುವೆ ಬಳಿಯೂ ಬೆಳಿಗ್ಗೆ ಹಾಗೂ ಸಂಜೆಯ ಅವಧಿಯಲ್ಲಿ ವಾಹನದಟ್ಟಣೆ ಹೆಚ್ಚುತ್ತಿದೆ.

‘ಶಾಸಕರ ಕಚೇರಿ ಮುಂದೆಯೇ ರಸ್ತೆ ಹದಗೆಟ್ಟು ಹಲವು ದಿನಗಳಾಗಿವೆ. ಈವರೆಗೂ ಗುಂಡಿಗಳನ್ನು ಮುಚ್ಚಿಲ್ಲ. ಶಾಸಕರಿಗೆ ಇದು ಕಾಣಿಸುತ್ತಿಲ್ಲವೇ’ ಎಂದು ಪ್ರಶ್ನಿಸುತ್ತಾರೆ ಸ್ಥಳೀಯರು.

ಲಾಲ್‌ಬಾಗ್‌ ಪಶ್ಚಿಮದ್ವಾರದ ಕಡೆಯಿಂದ ವಾಣಿವಿಲಾಸ ರಸ್ತೆ ಮೂಲಕನೆಟ್ಟಕಲ್ಲಪ್ಪ ವೃತ್ತದ ಕಡೆಗೆ ಸಾಗುವ ವಾಹನಗಳು ಸರ್ವಿಸ್‌ ರಸ್ತೆಯ ಮೂಲಕ ನ್ಯಾಷನಲ್ ಕಾಲೇಜು ಜಂಕ್ಷನ್‌ನಲ್ಲಿ ಕೆ.ಆರ್. ರಸ್ತೆಗೆ ಸಂಪರ್ಕ ಸಾಧಿಸಬೇಕು. ಆದರೆ, ಸರ್ವಿಸ್ ರಸ್ತೆಯಲ್ಲಂತೂ ಗುಂಡಿಗಳ ನಡುವೆ ರಸ್ತೆಯನ್ನು ಹುಡುಕಬೇಕಾದ ಸ್ಥಿತಿ ಇದೆ.

ಇಲ್ಲಿ ಬೀದಿದೀಪವೂ ಇಲ್ಲ. ಮಳೆ ಬಂದಾಗ ಈ ರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಚಲಾಯಿಸುವುದು ಬಲುಕಷ್ಟ.

ಸಂಚಾರ ನಿಯಮ ಉಲ್ಲಂಘನೆ:ಕೆ.ಆರ್. ರಸ್ತೆ ಮತ್ತು ವಾಣಿವಿಲಾಸ ರಸ್ತೆ ಸೇರುವ ಜಂಕ್ಷನ್‌ನಲ್ಲಿ ಸಂಚಾರ ಪೊಲೀಸರು ಇರುವುದಿಲ್ಲ. ಹಾಗಾಗಿ, ಇಲ್ಲಿನ ಸಿಗ್ನಲ್‌ನಲ್ಲಿ ಕೆಂಪುದೀಪ ಬೆಳಗಿದಾಗಲೂ ವಾಹನ ಸವಾರರು ಮುಂದೆ ಸಾಗುತ್ತಾರೆ. ಕವಿ ಲಕ್ಷ್ಮೀಶ ರಸ್ತೆ ಕಡೆಗೆ ಹೋಗುವವರು ಸಿಗ್ನಲ್ ಇರುವಾಗಲೂ ನ್ಯಾಷನಲ್‌ ಕಾಲೇಜು ಜಂಕ್ಷನ್‌ ದಾಟಿ, ಬಲಕ್ಕೆ ತಿರುವು ಪಡೆಯುತ್ತಾರೆ. ಇದರಿಂದಾಗಿ ಇಲ್ಲಿ ಅಪಘಾತದ ಸಂಭವಿಸುವ ಭೀತಿ ಉಂಟಾಗಿದೆ. ಅದೇ ರೀತಿ, ನ್ಯಾಷನಲ್ ಕಾಲೇಜು ಮೆಟ್ರೊ ನಿಲ್ದಾಣದ ಕಡೆಯಿಂದ ಬರುವವರು ಕೂಡಾ ಸರ್ವಿಸ್‌ ರಸ್ತೆಯಲ್ಲಿ ಕೆಂಪು ದೀಪ ಬೆಳಗಿದ ಬಳಿಕವೂ ಮುಂದಕ್ಕೆ ಸಾಗುತ್ತಾರೆ.

ಕವಿ ಲಕ್ಷ್ಮೀಶ ರಸ್ತೆಯಲ್ಲಿ ಜೈನ್ ಕಾಲೇಜು, ಬಿಎಂಎಸ್ ಶಿಕ್ಷಣ ಸಂಸ್ಥೆ ಹಾಗೂ ಅಂಕುರ ಶಿಕ್ಷಣ ಸಂಸ್ಥೆಗಳಿವೆ. ಈ ರಸ್ತೆಯಲ್ಲಿ ವಿದ್ಯಾರ್ಥಿಗಳ ಓಡಾಟ ಹೆಚ್ಚು ಇರುತ್ತದೆ. ಸಂಚಾರ ಸಿಗ್ನಲ್ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡದ ಕಾರಣ ಇಲ್ಲಿ ವಾಹನಗಳು ವೇಗವಾಗಿ ಸಾಗುತ್ತವೆ. ಇದು ವಿದ್ಯಾರ್ಥಿಗಳ ಆತಂಕಕ್ಕೂ ಕಾರಣವಾಗಿದೆ.

‘ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಈ ಜಂಕ್ಷನ್‌ಗೆ ಸಂಚಾರ ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಬೇಕು. ಇಲ್ಲಿನ ರಸ್ತೆಗಳು ಹಾಳಾಗಿವೆ. ರಸ್ತೆ ಗುಂಡಿಗಳಿಂದಾಗಿ ಇಲ್ಲಿ ಅಪಘಾತಗಳು ಸಂಭವಿಸುವ ಅಪಾಯವಿದೆ. ಆದಷ್ಟು ಬೇಗ ದುರಸ್ತಿಪಡಿಸಬೇಕು’ ಎಂದು ಜೈನ್ ಕಾಲೇಜಿನ ವಿದ್ಯಾರ್ಥಿ ರೋಹಿತ್ ಒತ್ತಾಯಿಸಿದರು.

‘ವಿದ್ಯಾರ್ಥಿಗಳು ಕೂಡಾ ಸಂಚಾರ ನಿಯಮ ಉಲ್ಲಂಘಿಸಿ, ವೇಗವಾಗಿ ವಾಹನ ಚಲಾಯಿಸುತ್ತಾರೆ’ ಎಂದು ದೂರುತ್ತಾರೆ ಸ್ಥಳೀಯರು.

ಕೆಳ ಸೇತುವೆಯಲ್ಲಿ ಕಸದ ರಾಶಿ

ಕೆ.ಆರ್. ರಸ್ತೆಯ ಟ್ಯಾಗೋರ್ ವೃತ್ತದ ಕೆಳಸೇತುವೆ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಈ ಕೇಳಸೇತುವೆಯುದ್ದಕ್ಕೂ ಎಲ್ಲೆಂದರಲ್ಲಿ ಕಸದ ರಾಶಿಗಳು ಕಾಣಸಿಗುತ್ತವೆ. ವಾಹನ ಸವಾರರು ಕಸವನ್ನು ಸೇತುವೆಯ ಬಳಿಯೇ ಎಸೆದು ಹೋಗುತ್ತಿದ್ದಾರೆ. ಇದರಿಂದಾಗಿ ಮಳೆ ನೀರು ಕಾಲುವೆ ಮುಚ್ಚಿದ್ದು, ಕೆಳ ಸೇತುವೆಯಲ್ಲಿ ನೀರು ನಿಲ್ಲುತ್ತಿದೆ. ಮಳೆ ಬಂದಾಗ ರಸ್ತೆ ಹೊಳೆಯ ಸ್ವರೂಪ ಪಡೆದುಕೊಳ್ಳುತ್ತದೆ. ವಾಹನ ಸವಾರರು ಕೊಳಚೆ ನೀರಿನಲ್ಲೇ ಸಾಗಬೇಕಾಗಿದೆ.

‘ರಸ್ತೆ ದುರಸ್ತಿಗೆ ಶೀಘ್ರ ಕ್ರಮ’

‘ಹಾಳಾಗಿರುವ ರಸ್ತೆ ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಅನುದಾನ ಮಂಜೂರಾಗಿದೆ. 2–3 ದಿನಗಳಲ್ಲಿ ಟೆಂಡರ್ ಕರೆದು, ಕಾಮಗಾರಿ ನಡೆಸಲಾಗುವುದು’ ಎಂದು ಶಾಸಕ ಉದಯ್ ಗರುಡಾಚಾರ್ ತಿಳಿಸಿದರು.

‘ಚೆನ್ನಾಗಿದ್ದ ರಸ್ತೆಯನ್ನು ನೀರಿನ ಸಂಪರ್ಕ, ಒಳಚರಂಡಿ, ಒಎಫ್‌ಸಿ ಕೇಬಲ್ ಅಳವಡಿಕೆ ಸೇರಿದಂತೆ ವಿವಿಧ ಕಾರಣಗಳಿಗೆ ಅಗೆದು ಹಾಗೇ ಬಿಡುತ್ತಿರುವ ಪರಿಣಾಮ ಈ ಸಮಸ್ಯೆ ಉಂಟಾಗಿದೆ’ ಎಂದರು.

‘ನ್ಯಾಷನಲ್‌ ಕಾಲೇಜು ಜಂಕ್ಷನ್‌ ಬಳಿ ಸಂಚಾರ ನಿಯಮ ಉಲ್ಲಂಘನೆ ಆಗುತ್ತಿರುವುದು ಗಮನಕ್ಕೆ ಬಂದಿರಲಿಲ್ಲ. ಕೂಡಲೇ ಸಂಚಾರ ಪೊಲೀಸರನ್ನು ನಿಯೋಜಿಸುವಂತೆ ಸೂಚಿಸುತ್ತೇನೆ’ ಎಂದರು.

'ರಸ್ತೆಗಳು ಕಿತ್ತು ಹೋಗಿ ಹಲವು ದಿನಗಳಾಗಿವೆ. ಆದರೆ, ಯಾರೂ ಈ ಬಗ್ಗೆ ಗಮನಿಸುತ್ತಿಲ್ಲ. ಇದೇ ರಸ್ತೆಯಲ್ಲಿ ಓಡಾಡುವ ಜನಪ್ರತಿನಿಧಿಗಳೂ ಈ ಸಮಸ್ಯೆಯತ್ತ ಕಣ್ಣು ಹಾಯಿಸಿಲ್ಲ.

–ಗೋಪಾಲ, ಬಸವನಗುಡಿ

'ಶಾಸಕರ ಕಚೇರಿ ಮುಂದೆಯೇ ರಸ್ತೆಗಳು ಕೆಟ್ಟು ಹೋದರೂ ದುರಸ್ತಿ ಮಾಡಿಲ್ಲ. ಇಲ್ಲಿನ ಕೆಲವು ರಸ್ತೆಗಳ ಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಮಳೆ ಬಂದಾಗ ಇಲ್ಲಿ ಸಾಗಲು ಸಾಧ್ಯವಿಲ್ಲ.

-ಸಂದರ್ಶ, ಶಂಕರಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT