ಭಾನುವಾರ, ಸೆಪ್ಟೆಂಬರ್ 26, 2021
21 °C
ವಕೀಲ ಪ್ರಶಾಂತ್‌ ಭೂಷಣ್‌ ಹೇಳಿಕೆ

ರಫೇಲ್‌ ಖರೀದಿ ಅತಿ ದೊಡ್ಡ ಹಗರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ರಫೇಲ್‌ ಯುದ್ಧ ವಿಮಾನಗಳ ಖರೀದಿ ದೊಡ್ಡ ಮೋಸ, ಇದು ದೇಶದ ‘ರಕ್ಷಣಾ ಹಗರಣಗಳ ಮಹಾ ತಾಯಿ’ ಎಂದು ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ವ್ಯಾಖ್ಯಾನಿಸಿದರು.

ಈ ವ್ಯವಹಾರದಿಂದ ಅನಿಲ್‌ ಅಂಬಾನಿಗೆ ₹ 21 ಸಾವಿರ ಕೋಟಿ ಕಮಿಷನ್‌ ಸಿಕ್ಕಿದೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.

ಫ್ರಾನ್ಸ್‌ನ ಡಸ್ಸಾಲ್ಟ್‌ ಕಂಪನಿ ಜತೆ ಆದ ಮೊದಲ ಒಪ್ಪಂದದಲ್ಲಿ(ಯುಪಿಎ ಅವಧಿಯಲ್ಲಿ) 126 ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಸ್ತಾವ ಇತ್ತು. ಆರಂಭದಲ್ಲಿ ಕೆಲವು ವಿಮಾನಗಳನ್ನು ನೇರವಾಗಿ ಖರೀದಿಸಿ, ಉಳಿದ ವಿಮಾನಗಳನ್ನು ಎಚ್‌ಎಎಲ್‌ನಲ್ಲಿ ಜೋಡಿಸುವ ಉದ್ದೇಶವಿತ್ತು.

ಆದರೆ, 2015 ರಲ್ಲಿ ಮೋದಿ ಫ್ರಾನ್ಸ್‌ಗೆ ಹೋಗಿ ಮಾತುಕತೆ ನಡೆದ ಬಳಿಕ, 126 ವಿಮಾನಗಳ ಬದಲಿಗೆ ಪೂರ್ಣ ಪ್ರಮಾಣದ 36 ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಳ್ಳಲಾಯಿತು. ಈ ವ್ಯವಹಾರದಲ್ಲಿ ಮೇಕ್‌ ಇನ್‌ ಇಂಡಿಯಾದ ಪ್ರಸ್ತಾಪವೇ ಇರಲಿಲ್ಲ ಎಂದು ಹೇಳಿದರು.

ಈ ಒಪ್ಪಂದ ಬಗ್ಗೆ ಅಂದಿನ ರಕ್ಷಣಾ ಸಚಿವ ಮನೋಹರ ಪರ್ರೀಕರ್‌ ಅವರನ್ನೂ ಕತ್ತಲಿನಲ್ಲಿ ಇಡಲಾಗಿತ್ತು. ಅಷ್ಟೇ ಅಲ್ಲ, ಎಚ್‌ಎಎಲ್‌ ಅನ್ನು ಈ ಒಪ್ಪಂದದ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಬದಲಿಗೆ ರಿಲಯನ್ಸ್‌ ಕಂಪನಿಗೆ ಮಣೆ ಹಾಕಲಾಗಿತ್ತು ಎಂದು ಪ್ರಶಾಂತ್ ಭೂಷಣ್ ತಿಳಿಸಿದರು.

ಭಾರತ ಮತ್ತು ಫ್ರಾನ್ಸ್‌ ಸರ್ಕಾರಗಳ ನಡುವೆ ಔಪಚಾರಿಕ ಒಪ್ಪಂದ ಆದ ಬಳಿಕ, ರಿಲಯನ್ಸ್‌ ಶೇ 51 ಮತ್ತು ಡಸಾಲ್ಟ್‌ ಶೇ 49 ಈಕ್ವಿಟಿಯ ಜಂಟಿ ಒಪ್ಪಂದವೂ ಆಯಿತು. ಒಟ್ಟು ₹30 ಸಾವಿರ ಕೋಟಿ ವ್ಯವಹಾರದಲ್ಲಿ ₹ 21  ಸಾವಿರ ಕೋಟಿ ಆದೇಶ ರಿಲಯನ್ಸ್‌ಗೆ ಸಿಕ್ಕಿತು. ರಿಲಯನ್ಸ್‌ಗೆ ಇದಕ್ಕೂ ಮೊದಲು ಯುದ್ಧ ವಿಮಾನದ ಮಾತು ಹಾಗಿರಲಿ, ಸಾಮಾನ್ಯ ವಿಮಾನ ತಯಾರಿಕೆಯ ಅನುಭವವೂ ಇರಲಿಲ್ಲ ಎಂದು ಹೇಳಿದರು.

ಈಗ ಅನಿಲ್‌ ಅಂಬಾನಿ, ಅಂತಹ ಯಾವುದೇ ಒಪ್ಪಂದ ಆಗಿಲ್ಲ ಎನ್ನುತ್ತಿದ್ದಾರೆ. ಹಾಗಿದ್ದರೆ, ಡೆಸ್ಸಾಲ್ಟ್‌ ಕಂಪನಿ ಜತೆ ಹೇಳಿಕೆ ನೀಡಿದ್ದು ಯಾವ ಕಾರಣಕ್ಕೆ ಎಂದೂ ಅವರು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು