ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಸಂಚಾರಕ್ಕೆ ‘ವ್ಹೀಲಿ’ ಅಪಾಯ- ಹೊರವರ್ತುಲ ರಸ್ತೆ, ನೈಸ್‌ ರಸ್ತೆಯಲ್ಲಿ ಹೆಚ್ಚು

ದಂಡ ವಿಧಿಸಿದರೂ ಪಾಠ ಕಲಿಯದ ಯುವಕರು
Last Updated 22 ಏಪ್ರಿಲ್ 2022, 19:19 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿಚಕ್ರ ವಾಹನಗಳನ್ನು ಅಪಾಯಕಾರಿ ರೀತಿಯಲ್ಲಿ ಚಲಾಯಿಸಿ ‘ವ್ಹೀಲಿ' ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ದಂಡ ವಿಧಿಸಿ ಪ್ರಕರಣ ದಾಖಲಿಸಿದರೂ ತಪ್ಪಿತಸ್ಥ ಸವಾರರು ಬುದ್ಧಿ ಕಲಿಯುತ್ತಿಲ್ಲ. ಪ್ರಮುಖ ರಸ್ತೆಗಳಲ್ಲೇ ರಾಜಾರೋಷವಾಗಿ ‘ವ್ಹೀಲಿ’ ಮಾಡುತ್ತಿರುವ ಕೆಲವರು, ಜನಸಾಮಾನ್ಯರಿಗೆ ಅಪಾಯವನ್ನುಂಟು ಮಾಡುತ್ತಿದ್ದಾರೆ ಎಂಬ ದೂರುಗಳಿವೆ.

ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು, ಹೊರವರ್ತುಲ ರಸ್ತೆ, ನೈಸ್ ರಸ್ತೆ ಹಾಗೂ ಇತರೆ ರಸ್ತೆಗಳಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಇಂಥ ರಸ್ತೆಯಲ್ಲೇ ಕೆಲವರು ಅಪಾಯಕಾರಿ ವ್ಹೀಲಿ ಮಾಡುತ್ತಿದ್ದು, ಇದರಿಂದ ಅಪಘಾತಗಳೂ ಸಂಭವಿಸುತ್ತಿವೆ.

18 ವರ್ಷ ತುಂಬದ ಕೆಲ ಬಾಲಕರು ಹಾಗೂ ಕಾಲೇಜಿನ ಕೆಲ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವ್ಹೀಲಿ ಮಾಡುತ್ತಿದ್ದು, ಅಂಥವರನ್ನು ಪತ್ತೆ ಮಾಡಿ ಸಂಚಾರ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ವಾಹನಗಳನ್ನು ಜಪ್ತಿ ಮಾಡಿ, ಅದರ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ಜೈಲಿಗೂ ಕಳುಹಿಸುತ್ತಿದ್ದಾರೆ. ಇಷ್ಟಾದರೂ ‘ವ್ಹೀಲಿ’ ಪ್ರಕರಣಗಳು ಹೆಚ್ಚುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ಪ್ರತಿ ಶನಿವಾರ, ಭಾನುವಾರ ಹಾಗೂ ರಜಾ ದಿನಗಳದ್ದು ರಸ್ತೆಗೆ ಇಳಿದು ವ್ಹೀಲಿ ಮಾಡುವುದನ್ನೇ ಕೆಲವರು ಹವ್ಯಾಸವಾಗಿ ಮಾಡಿಕೊಂಡಿದ್ದಾರೆ. ಬಾಲಕರು ಹಾಗೂ ಯುವಕರ ಗುಂಪು, ಜಿದ್ದಿಗೆ ಬಿದ್ದವರಂತೆ ನಾ ಮುಂದು ತಾ ಮುಂದು ಎಂದು ಪೈಪೋಟಿಗೆ ಬಿದ್ದು ವ್ಹೀಲಿ ಮಾಡುತ್ತಿದೆ.

ನಗರದ ಸಂಚಾರ ಸಮಸ್ಯೆಗಳನ್ನು ಆಲಿಸಲು ಕಮಿಷನರ್ ಕಮಲ್ ಪಂತ್, ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಹಾಗೂ ಆಯಾ ವಿಭಾಗದ ಡಿಸಿಪಿಗಳು ಪ್ರತಿ ಎರಡನೇ ಶನಿವಾರ ‘ಸಂಚಾರ ಸಂಪರ್ಕ ದಿವಸ’ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಪ್ರತಿ ಕಾರ್ಯಕ್ರಮದಲ್ಲೂ ‘ವ್ಹೀಲಿ’ ಬಗ್ಗೆ ಪ್ರಸ್ತಾಪಿಸುತ್ತಿರುವ ಜನ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.

‘ಹೊರವರ್ತುಲ ರಸ್ತೆಯ ನಾಗವಾರ ಬಳಿ ಪ್ರತಿ ಭಾನುವಾರ ಯುವಕರು ಗುಂಪು ಕಟ್ಟಿಕೊಂಡು ಬರುತ್ತಾರೆ. ದ್ವಿಚಕ್ರ ವಾಹನವನ್ನು ಒಂದೇ ಚಕ್ರದಲ್ಲಿ ಅಪಾಯಕಾರಿಯಾಗಿ ಚಲಾಯಿಸುತ್ತಾರೆ. ಕೆಲವೊಮ್ಮೆ ಪಾದಚಾರಿಗಳು ಹಾಗೂ ಸಾರ್ವಜನಿಕರ ವಾಹನಗಳಿಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ್ದಾರೆ’ ಎಂದು ಹೆಣ್ಣೂರು ನಿವಾಸಿ ರಾಜಶೇಖರ್ ಹೇಳಿದರು.

‘ಮಾಹಿತಿ ನೀಡಿದಾಗಲೆಲ್ಲ ಪೊಲೀಸರು ರಸ್ತೆಗೆ ಬಂದು ಕಾಯುತ್ತಾರೆ. ಅವರು ಹೊರಟು ಹೋದ ನಂತರ, ಪುನಃ ಯುವಕರು ಸ್ಥಳಕ್ಕೆ ಬಂದು ವ್ಹೀಲಿ ಮುಂದುವರಿಸುತ್ತಾರೆ’ ಎಂದೂ ತಿಳಿಸಿದರು.

ಗೋರಿಪಾಳ್ಯದಲ್ಲಿ ಮಹಿಳೆ ಗಾಯ: ಗೋರಿಪಾಳ್ಯದಲ್ಲಿ ಇತ್ತೀಚೆಗೆ ವ್ಹೀಲಿ ಮಾಡಿದ್ದ ಯುವಕರಿಬ್ಬರು, ತಮ್ಮ ದ್ವಿಚಕ್ರ ವಾಹನವನ್ನು ಮಹಿಳೆಗೆ ಗುದ್ದಿಸಿದ್ದರು. ಗಾಯಗೊಂಡಿರುವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

‘ಪಾದರಾಯನಪುರ, ಗೋರಿಪಾಳ್ಯ, ಜಗಜೀವನ್‌ರಾಮ್ ನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಯುವಕರು ವ್ಹೀಲಿ ಮಾಡುತ್ತಿದ್ದಾರೆ. ಪೊಲೀಸರು ಎಷ್ಟೇ ಕಾರ್ಯಾಚರಣೆ ನಡೆಸಿದರೂ ಕೃತ್ಯಕ್ಕೆ ಕಡಿವಾಣ ಬಿದ್ದಿಲ್ಲ’ ಎಂದು ಗೋರಿಪಾಳ್ಯದ ಟೀ ಅಂಗಡಿ ವ್ಯಾಪಾರಿ ಅಮ್ಜದ್‌ ಹೇಳಿದರು.

ಕದ್ದ ವಾಹನಗಳ ಬಳಕೆ
‘ಅಪರಾಧ ಹಿನ್ನೆಲೆಯುಳ್ಳ ಕೆಲವರು ದ್ವಿಚಕ್ರ ವಾಹನಗಳನ್ನು ಕದ್ದು ವ್ಹೀಲಿ ಮಾಡುತ್ತಿದ್ದಾರೆ. ನಂತರ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ. ಕೆಲವರು, ವ್ಹೀಲಿ ಮಾಡಲೆಂದೇ ವಾಹನಗಳನ್ನು ಕದಿಯುತ್ತಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT