ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವಕ್ಕಾಗಿ 2ನೇ ಸ್ವಾತಂತ್ರ್ಯ ಸಮರಕ್ಕೆ ಸನ್ನದ್ಧರಾಗಿ: ಎ.ಕೆ.ಸುಬ್ಬಯ್ಯ

Last Updated 1 ಸೆಪ್ಟೆಂಬರ್ 2018, 15:05 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋರೆಗಾಂವ್‌ ಪ್ರಕರಣಕ್ಕೆ ತಳಕುಹಾಕಿ ಬಂಧಿಸಲಾದ ಮಾನವ ಹಕ್ಕುಗಳ ಪರ ಹೋರಾಟಗಾರರನ್ನು ಕೂಡಲೇ ಬಂಧನದಿಂದ ಮುಕ್ತಗೊಳಿಸಬೇಕು’ ಎಂದು ಸಮಾನಮನಸ್ಕರ ಒಕ್ಕೂಟ ಒತ್ತಾಯಿಸಿದೆ.

ಶುಕ್ರವಾರ ನಗರದಲ್ಲಿ ಸಭೆ ಸೇರಿದ್ದ ಒಕ್ಕೂಟದ ಸದಸ್ಯರು,‘ದಲಿತರ, ಆದಿವಾಸಿಗಳ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಕವಿಗಳು, ಸಾಹಿತಿಗಳು, ವಕೀಲರು ಹಾಗೂ ಮಾನವ ಹಕ್ಕುಗಳ ಹೋರಾಟಗಾರರನ್ನು ಮಹಾರಾಷ್ಟ್ರ ಪೊಲೀಸರು ಕಾನೂನಿಗೆ ವಿರುದ್ಧವಾಗಿ ಬಂಧಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇದು ಅಭಿವ್ಯಕ್ತಿ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ. ಪ್ರಜಾಪ್ರಭುತ್ವದಲ್ಲಿ ಸಂವಿಧಾನ ನೀಡಿದ ಹಕ್ಕುಗಳನ್ನು ಕಡೆಗಣಿಸಿ ನಿರಂಕುಶ ಪ್ರಭುತ್ವದತ್ತ ಸಾಗುತ್ತಿರುವ ಫ್ಯಾಸಿಸ್ಟ್ ಧೋರಣೆಗಳನ್ನು ನಾವು ಒಪ್ಪುವುದಿಲ್ಲ. ಮಹಾರಾಷ್ಟ್ರ ಸರ್ಕಾರದ ಈ ಅಕ್ರಮ ನಡೆಗೆ ನಮ್ಮ ವಿರೋಧವಿದೆ. ಪ್ರಭುತ್ವವೊಂದು ತನ್ನ ವೈಫಲ್ಯಗಳನ್ನು‌ ಮುಚ್ಚಿ ಹಾಕಲು ಪ್ರಜೆಗಳ ವಿರುದ್ಧ ವ್ಯವಸ್ಥಿತವಾಗಿ ಸಂಚು‌ರೂಪಿಸುತ್ತಿರುವುದನ್ನು ನಾವು ಖಂಡಿಸುತ್ತೇವೆ’ ಎಂದು ಹೇಳಿದರು.

‘ಹಿಂದೂ ಫ್ಯಾಸಿಸ್ಟ್‌ ಶಕ್ತಿಯಿಂದಾಗಿ ಪ್ರಜಾಪ್ರಭುತ್ವ, ಸಂವಿಧಾನದ ನಿರ್ನಾಮವಾಗುತ್ತಿದೆ. ನರೇಂದ್ರ ಮೋದಿ, ಅಮಿತ್‌ ಶಾ ಇವರ ಕೈ, ಬಾಯಿ ಸನ್ನೆಗಳೇ ಕಾನೂನುಗಳಾಗುತ್ತಿವೆ’ ಎಂದು ಸಭೆಯಲ್ಲಿ ಮಾತನಾಡಿದ ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಹರಿಹಾಯ್ದರು.

‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಘ ಪರಿವಾರ ಅಧಿಕಾರಕ್ಕೆ ಬಂದರೆ, ವೈಚಾರಿಕತೆ ಚೇತರಿಸಿಕೊಳ್ಳುವುದು ಕಷ್ಟಸಾಧ್ಯ. ಚುನಾವಣೆ ಹೊತ್ತಿಗೆ ಪ್ರತಿರೋಧದ ಧ್ವನಿಗಳನ್ನು ಅಡಗಿಸುವ ಹುನ್ನಾರ ನಡೆಯುತ್ತಿದೆ. ಹಾಗಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ ಎರಡನೇ ಸ್ವಾತಂತ್ರ್ಯ ಸಮರಕ್ಕೆ ಸನ್ನದ್ಧರಾಗಬೇಕಿದೆ’ ಎಂದರು.

‘ಕೋಮುವಾದಿಗಳೆಲ್ಲ ಸೇರಿ ಸರ್ವಾಧಿಕಾರ ನಡೆಸುತ್ತೇವೆ ಎಂದುಕೊಂಡರೆ, ಅದು ಮೂರ್ಖತನ. ಸದ್ಯ ದೇಶದಲ್ಲಿ ಸಂವಿಧಾನವನ್ನು ಎತ್ತಿ ಹಿಡಿ
ಯುವ ಕಾರ್ಯವಾಗಬೇಕಿದೆ’ ಎಂದುಪ್ರೊ.ಜಿ.ರಾಮಕೃಷ್ಣ ಹೇಳಿದರು.

‘ಪ್ರಜಾತಂತ್ರದ ಮೌಲ್ಯಗಳನ್ನು ಕಸಿಯುವ ಪ್ರಯತ್ನ ಯಶಸ್ವಿಯಾಗದು’ ಎಂದು ಚಿಂತಕ ಇಂದೂಧರ ಹೊನ್ನಾಪುರ ಅಭಿಪ್ರಾಯಪಟ್ಟರು.

ಪ್ರೊ.ಕೆ.ಇ.ರಾಧಾಕೃಷ್ಣ, ‘ಮೋದಿ ಅಟ್ಟಹಾಸದ ಆಡಳಿತ ನಡೆಸುತ್ತಿದ್ದಾರೆ. ಉತ್ಕೃಷ್ಟತೆ ಎಂಬ ಹೆಸರಿನಲ್ಲಿ ವೈಚಾರಿಕ ಮನಸ್ಸುಗಳನ್ನು ಧ್ವಂಸ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಸುಂದರ್, ದಿನೇಶ್‌ ಅಮೀನ್‌ ಮಟ್ಟು, ಡಾ.ವಿಜಯಮ್ಮ, ಅನಂತ್ ನಾಯಕ್, ಕೆ.ಎಸ್.ವಿಮಲಾ, ಕೆ.ಎಲ್.ಅಶೋಕ್, ಪಿ.ವಿ.ಮೋಹನ್, ಕೆ.ಎನ್.ಉಮೇಶ್, ಕೆ.ಎಸ್.ಲಕ್ಷ್ಮಿ, ಜ್ಯೋತಿ ಅನಂತ ಸುಬ್ಬರಾವ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT