ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾಕರ್‌ಗೆ ಗೋ ಬ್ಯಾಕ್ ಬಿಸಿ: ಟೈರ್‌ ಸುಟ್ಟು ಪ್ರತಿಭಟನೆ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ; ಶಾಸಕ ವಿಶ್ವನಾಥ್ ಬೆಂಬಲಿಗರ ಆಕ್ರೋಶ
Published 25 ಮಾರ್ಚ್ 2024, 22:29 IST
Last Updated 25 ಮಾರ್ಚ್ 2024, 22:29 IST
ಅಕ್ಷರ ಗಾತ್ರ

ಯಲಹಂಕ: ಡಾ. ಕೆ. ಸುಧಾಕರ್‌ ಅವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ನೀಡಿರುವ ಕ್ರಮವನ್ನು ವಿರೋಧಿಸಿ ‘ಗೋ ಬ್ಯಾಕ್‌ ಸುಧಾಕರ್‘ ಅಭಿಯಾನ ಆರಂಭಿಸಿರುವ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಬೆಂಬಲಿಗರು, ಕೆಂಪೇಗೌಡ ವೃತ್ತದಲ್ಲಿ ರಸ್ತೆ ಸಂಚಾರ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.

ಕೆಂಪೇಗೌಡ ಪ್ರತಿಮೆಯ ಬಳಿ ಜಮಾಯಿಸಿದ್ದ ಕಾರ್ಯಕರ್ತರು, ಸುಧಾಕರ್‌ ವಿರುದ್ಧ ಘೋಷಣೆ ಕೂಗಿದರು. ಟೈರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ‘ಕೋವಿಡ್ ಸಂದರ್ಭದಲ್ಲಿ ಸಾಮಗ್ರಿಗಳ ಖರೀದಿಯಲ್ಲಿ ಸುಧಾಕರ್ ಭ್ರಷ್ಟಾಚಾರ ಮಾಡಿದ್ದಾರೆ’ ಎಂದು ಆರೋಪಿಸಿ ರೋಗಿಗಳ ಶವ ಸಂಸ್ಕಾರದ ಅಣುಕು ಪ್ರದರ್ಶಿಸಿದರು.

ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಸತೀಶ್‌ ಕಡತನಮಲೆ, ‘ಮುಖಂಡರು ಹಾಗೂ ಕಾರ್ಯಕರ್ತರ ಕಷ್ಟ ಕೇಳದ ಮತ್ತು ಮತದಾರರಿಗೆ ಕಿಂಚಿತ್ತೂ ಸ್ಪಂದಿಸದ ಸುಧಾಕರ್‌ಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಟಿಕೆಟ್‌ ನೀಡಿರುವುದು ಸರಿಯಲ್ಲ.  ಜನಸಾಮಾನ್ಯರ ಬಳಿಗೆ ತೆರಳಿ ಮತ ಕೇಳಲು ಮುಜುಗರ ಉಂಟಾಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಇಂತಹ ವ್ಯಕ್ತಿಗೆ ಟಿಕೆಟ್‌ ನೀಡಿರುವುದರಿಂದ ಕಾರ್ಯಕರ್ತರು ಹಾಗೂ ಮುಖಂಡರು ತೀವ್ರ ಅಸಮಾಧಾನಗೊಂಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ದಿಬ್ಬೂರು ಜಯಣ್ಣ ಮಾತನಾಡಿ, ‘ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸುಧಾಕರ್‌ ಕೊಡುಗೆ ಏನು ಇಲ್ಲ. ಕೋವಿಡ್ ಸಂದರ್ಭದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿ ಬಿಜೆಪಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದರು. ಇದರ ಪರಿಣಾಮ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೀನಾಯ ಸೋಲಾಯಿತು’ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ಅದ್ದೆ ವಿಶ್ವನಾಥಪುರ ಮಂಜುನಾಥರೆಡ್ಡಿ ಮಾತನಾಡಿ, ‘ಯುವ ಮುಖಂಡ ಅಲೋಕ್‌ ವಿಶ್ವನಾಥ್‌ ಅವರಿಗೆ ಟಿಕೆಟ್‌ ಸಿಗುವುದಾಗಿ ಕ್ಷೇತ್ರದ ಜನರು ವಿಶ್ವಾಸವಿಟ್ಟಿದ್ದರು. ಈಗ ಸುಧಾಕರ್‌ ಅವರಿಗೆ ಟಿಕೆಟ್‌ ನೀಡಿರುವುದರಿಂದ ಜನರಿಗೆ ನಿರಾಸೆಯಾಗಿದೆ. ಜನರ ಕೂಗು ಬಿಜೆಪಿ ಹೈಕಮಾಂಡ್‌ಗೆ ತಲುಪುವವರೆಗೂ ‘ಗೋ ಬ್ಯಾಕ್‌ ಸುಧಾಕರ್‌’ ಅಭಿಯಾನ ನಡೆಸುತ್ತೇವೆ’ ಎಂದರು.

ಬಿಜೆಪಿ ಮುಖಂಡರಾದ ಎಸ್‌.ಎನ್‌. ರಾಜಣ್ಣ, ಎಂ. ಸತೀಶ್‌, ಸಿ. ವೆಂಕಟೇಶ್‌, ಎಸ್‌.ಜಿ. ನರಸಿಂಹಮೂರ್ತಿ, ಎಸ್‌.ಜಿ. ಪ್ರಶಾಂತ್‌ ರೆಡ್ಡಿ, ಡಾ. ಶಶಿಕುಮಾರ್‌, ಎ.ಸಿ. ಮುನಿಕೃಷ್ಣಪ್ಪ, ಕೆಂಪೇಗೌಡ, ಟಿ. ಮುನಿರೆಡ್ಡಿ, ಎಚ್‌.ಸಿ. ರಾಜೇಶ್‌, ಪಿ.ಕೆ. ರಾಜಣ್ಣ, ಶಿವಕೋಟೆ ಅಶೋಕ್‌, ಸಾದೇನಹಳ್ಳಿ ಪ್ರಕಾಶ್‌ಗೌಡ ಪ್ರತಿಭಟನೆಯಲ್ಲಿದ್ದರು.

ಸಂಚಾರ ದಟ್ಟಣೆ: ಪ್ರತಿಭಟನೆಯಿಂದಾಗಿ  ಕೆಂಪೇಗೌಡ ವೃತ್ತ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಕಿ.ಮೀ.ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT