ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಭೇಟಿ: ರಸ್ತೆ ಡಾಂಬರಿಗೆ ಅನಗತ್ಯ ವೆಚ್ಚ

ಗುಬ್ಬಿ ತೋಟದಪ್ಪ ರಸ್ತೆ ಗುಂಡಿ ಮಾಯ; ಕಾಂಕ್ರೀಟ್‌ ರಸ್ತೆಗೆ ಮುನ್ನ ಡಾಂಬರು
Last Updated 9 ನವೆಂಬರ್ 2022, 16:21 IST
ಅಕ್ಷರ ಗಾತ್ರ

ಬೆಂಗಳೂರು: ವರ್ಷಗಳಿಂದ ಸವಾರರ ಸಂಕಷ್ಟಕ್ಕೆ ಕಾರಣವಾಗಿದ್ದ ರಸ್ತೆ ಗುಂಡಿಗಳು ಬೆಳಗಾಗುವಲ್ಲಿ ಮಾಯವಾಗಿವೆ. ವೈಟ್‌ಟಾಪಿಂಗ್‌ ಮಾಡಬೇಕು ಎಂದು ಗುಂಡಿ ಮುಚ್ಚಲೂ ಹಿಂದೇಟು ಹಾಕುತ್ತಿದ್ದ ಎಂಜಿನಿಯರ್‌ಗಳು ಆ ರಸ್ತೆಯನ್ನು ಕೆರೆದು ನೈಸ್‌ ಮಾಡಿದ್ದಾರೆ. ಇದಕ್ಕೆಲ್ಲ ಕಾರಣ ಪ್ರಧಾನಿ ನರೇಂದ್ರ ಮೋದಿ ಭೇಟಿ.

ನಗರದ ರೈಲು ನಿಲ್ದಾಣದ ಮುಂಭಾಗದ ಗುಬ್ಬಿ ತೋಟದಪ್ಪ ರಸ್ತೆ ವರ್ಷಗಳಿಂದ ಗುಂಡಿಮಯವಾಗಿದೆ. ‘ಕಾಂಕ್ರೀಟ್ ರಸ್ತೆ (ವೈಟ್‌ ಟಾಪಿಂಗ್‌) ಆಗುತ್ತದೆ, ಹೀಗಾಗಿ ದುರಸ್ತಿ ಮಾಡೊಲ್ಲ’ ಎಂದು ಸವಾರರಿಗೆ ಅತ್ಯಂತ ಕಷ್ಟವಾಗುತ್ತಿದ್ದ ಸ್ಥಿತಿಯಲ್ಲೂ ಬಿಬಿಎಂಪಿ ಎಂಜಿನಿಯರ್‌ಗಳು ಹೇಳುತ್ತಿದ್ದರು. ಆದರೆ, ಇದೀಗ ರಸ್ತೆಯನ್ನು ಮಟ್ಟಮಾಡಿದ್ದಾರೆ. ಜೆಸಿಬಿಯಲ್ಲಿ ಕೆರೆದು ಗುಂಡಿಗಳಿಲ್ಲದಂತೆ ಮಾಡಿದ್ದಾರೆ.

₹7.8 ಕೋಟಿ ವೆಚ್ಚದಲ್ಲಿ ವೈಟ್‌ಟಾಪಿಂಗ್‌ ಮಾಡಲು ಈ ರಸ್ತೆಗೆ ಟೆಂಡರ್‌ ಆಗಿದೆ. ಆದರೆ, ಈಗ ಅನಗತ್ಯವಾಗಿ ಡಾಂಬರು ಅಥವಾ ಬೇಸ್‌ ಹಾಕುತ್ತಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

‘ವೈಟ್‌ ಟಾಪಿಂಗ್‌ಗೇ ಮಾಡುತ್ತೇವೆ’ ಎಂದು ಮುಖ್ಯ ಆಯುಕ್ತ, ಪ್ರಧಾನ ಎಂಜಿನಿಯರ್‌ ಹಾಗೂ ಸ್ಥಳೀಯ ಎಂಜಿನಿಯರ್‌ಗಳು ಹೇಳುತ್ತಿದ್ದಾರೆ. ಆದರೆ, ಒಂದು ಪದರ ಡಾಂಬರು ಹಾಕಿ ಅದನ್ನು ಸನ್ನದ್ಧುಗೊಳಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಪಕ್ಕದ ರಸ್ತೆಯಲ್ಲಿ ಹೋಗುವುದರಿಂದ ಈ ರಸ್ತೆ ಚೆನ್ನಾಗಿ ಕಾಣಲೆಂದು ಎಂಜಿನಿಯರ್‌ಗಳು ‘ಒತ್ತಡದಿಂದ’ ಇಂತಹ ಕೆಲಸ ಮಾಡುತ್ತಿದ್ದಾರೆ ಎಂಬ ದೂರಿದೆ.

‘ಕಾಂಕ್ರೀಟ್‌ ರಸ್ತೆ ಮಾಡಲೇ ಈ ರೀತಿ ಸ್ಕ್ರ್ಯಾಚ್‌ ಮಾಡಿದ್ದಾರೆ ಎಂದಿಟ್ಟುಕೊಳ್ಳೋಣ. ಈ ಕೆಲಸವನ್ನು ಮೊದಲೇ ಮಾಡಿದ್ದರೆ ಗುಂಡಿಗಳಿಲ್ಲದೆ, ಬೀಳದೆ ನಾವೆಲ್ಲ ಸಂಚಾರ ಮಾಡುತ್ತಿದ್ದೆವಲ್ಲ. ಈ ಬುದ್ಧಿ ಮೊದಲು ಏಕೆ ಬಂದಿರಲಿಲ್ಲ’ ಎಂದು ಸವಾರ ರಾಮಚಂದ್ರ ಪ್ರಶ್ನಿಸಿದರು.

‘ಪ್ರಧಾನಿ ಬರುತ್ತಾರೆ ಎಂದು ಕಾಂಕ್ರೀಟ್‌ ಮಾಡುವ ರಸ್ತೆಗೆ ಡಾಂಬರು ಹಾಕಿ ಅನಗತ್ಯವಾಗಿ ವೆಚ್ಚ ಮಾಡಲಾಗುತ್ತಿದೆ. ಕಾಂಕ್ರೀಟ್‌ ರಸ್ತೆಗೆ ಸಿದ್ಧತೆ ಮಾಡಿಕೊಳ್ಳುವುದೇ ಆಗಿದ್ದರೆ ಈ ಕೆಲಸಕ್ಕೆ ಮುನ್ನ ಯುಟಿಲಿಟಿ ಡಕ್ಟ್‌ಗಳನ್ನು ಏಕೆ ಮಾಡಿಲ್ಲ. ಈಗ ಹಾಕುವ 10 ಎಂಎಂ ಅಥವಾ ಯಾವುದೇ ಬಿಟಮಿನ್‌ ಎಲ್ಲವೂ ವೇಸ್ಟ್‌ ಅಗುವುದಿಲ್ಲವೆ?’ ಎಂದು ಸ್ಥಳೀಯ ಮಳಿಗೆ ಮಾಲೀಕ ಅಬ್ದುಲ್‌ ಕೇಳಿದರು.

ಈ ನಡುವೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಓಕಳಿಪುರಂ ಕಡೆಗೆ ಹಾಗೂ ರೈಲು ನಿಲ್ದಾಣದ ಕಡೆಯ ರಸ್ತೆಗಳೆಲ್ಲ ಡಾಂಬರು ಕಂಡು ನಳನಳಿಸುತ್ತಿವೆ. ಮಣ್ಣಿನ ಬೆಟ್ಟಗಳು, ಅವಶೇಷಗಳು ಕಾಣದಂತೆ ಅದಕ್ಕೆ ಅಡ್ಡವಾಗಿ ತಗಡು ಬಡಿಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಾಗುವ ರಸ್ತೆಗಳು ಅತ್ಯಂತ ವಿಜೃಂಭಣೆಯಿಂದ ಸಿಂಗಾರಗೊಂಡಿದ್ದರೆ, ಅದರ ಪಕ್ಕದ ರಸ್ತೆಗಳಲ್ಲಿ ಗುಂಡಿಗಳು ಬಿಬಿಎಂಪಿ ವೈಫಲ್ಯವನ್ನು ಎತ್ತಿತೋರುತ್ತಿವೆ.

ಮಾಗಡಿ ರಸ್ತೆ, ಬಿನ್ನಿಮಿಲ್‌ ರಸ್ತೆ, ಸಿರಸಿ ವೃತ್ತದ ಸುತ್ತಮುತ್ತಲಿನ ರಸ್ತೆಗಳಲ್ಲಿ ಗುಂಡಿಗಳು ಸಾಕಷ್ಟಿವೆ. ಇವುಗಳು ಮಾತ್ರ ಬಿಬಿಎಂಪಿ ಎಂಜಿನಿಯರ್‌ಗಳ ಕಣ್ಣಿಗೆ ಬಿದ್ದಿಲ್ಲ. ಪ್ರಧಾನಿ ಸಂಚರಿಸುವ ರಸ್ತೆಗಳನ್ನು ಮಾತ್ರ ದುರಸ್ತಿ ಮಾಡುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ರಸ್ತೆಯಲ್ಲಿ ಬರೊಲ್ಲ...

‘ಗುಬ್ಬಿ ತೋಟದಪ್ಪ ರಸ್ತೆಯನ್ನು ವೈಟ್‌ ಟಾಪಿಂಗ್‌ ಮಾಡುತ್ತಿದ್ದೇವೆ. ಅದಕ್ಕೆ ಸಿದ್ಧತೆಯಾಗಿ ನಾವು ಬೇಸ್‌ ರೆಡಿ ಮಾಡಿಕೊಳ್ಳುತ್ತಿದ್ದೇವೆ. ಯುಟಿಲಿಟಿ ಡಕ್ಟ್‌ಗಳನ್ನು ಮಾಡಲು ಮತ್ತೆ ಎಲ್ಲವನ್ನು ಅಗೆದು ಮಾಡುತ್ತೇವೆ. ಪ್ರಧಾನಿ ಈ ರಸ್ತೆಯಲ್ಲಿ ಬರೊಲ್ಲ’ ಎಂದು ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT