ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಧ್ಯಾಪಕರ ವರ್ಗಾವಣೆ: ದಲಿತ ಸಂಘಟನೆಗಳ ಪ್ರತಿಭಟನೆ

Published 6 ಫೆಬ್ರುವರಿ 2024, 18:28 IST
Last Updated 6 ಫೆಬ್ರುವರಿ 2024, 18:28 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಧ್ಯಾಪಕರಿಗೆ ನೀಡಿದ್ದ ಹಿಂಬಡ್ತಿ ಆದೇಶ ವಾಪಸ್‌ ಪಡೆಯುವಂತೆ ಆಗ್ರಹಿಸಿ, ದಲಿತ ಸಂಘಟನೆಗಳ ಮುಖಂಡರು ಮಂಗಳವಾರ ನ್ಯಾಷನಲ್‌ ಕಾಲೇಜು ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಬೆನ್ನಲ್ಲೇ ಸಭೆ ನಡೆಸಿದ ಆಡಳಿತ ಮಂಡಳಿ, ಹಿಂಬಡ್ತಿ ಆದೇಶ ವಾಪಸ್‌ ಪಡೆಯಿತು. ನಂತರ ಹೋರಾಟಗಾರರು ಪ್ರತಿಭಟನೆ ಕೈಬಿಟ್ಟರು.

ಇದಕ್ಕೂ ಮುನ್ನ ಕಾಲೇಜು ಪ್ರವೇಶದ್ವಾರದ ಎದುರು ಜಮಾಯಿಸಿದ ಪ್ರತಿಭಟನಕಾರರು, ಕಾಲೇಜು ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಆಗ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

‘ಜಾತಿ ಕಾರಣ ನೀಡಿ ಪ್ರಾಧ್ಯಾಪಕ ರವಿಕುಮಾರ್ ಬಾಗಿ ಅವರನ್ನು ಬಸವನಗುಡಿಯ ನ್ಯಾಷನಲ್‌ ಪದವಿ ಕಾಲೇಜಿನಿಂದ ಜಯನಗರ ನ್ಯಾಷನಲ್ ಪಿಯುಸಿ ಕಾಲೇಜಿಗೆ ಹಿಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ’ ಎಂದು ಸಂಘಟನೆಗಳು ಆರೋಪಿಸಿದವು.

‘ರವಿಕುಮಾರ್‌ಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಮಾರ್ಗದರ್ಶಕರಾಗಲು ಸೇವಾ ದೃಢೀಕರಣ ಪತ್ರವನ್ನೂ ನೀಡುತ್ತಿಲ್ಲ’ ಎಂದು ಪ್ರತಿಭಟನಕಾರರು ದೂರಿದರು.

ನಂತರ, ಕಾಲೇಜು ಆಡಳಿತ ಮಂಡಳಿ ಜೊತೆಗೆ ನಡೆದ ಸಭೆಯಲ್ಲಿ ಹಿಂಬಡ್ತಿ ಆದೇಶ ವಾಪಸ್‌ ಪಡೆಯುವುದು ಹಾಗೂ ಪದವಿ ಕಾಲೇಜಿನಲ್ಲಿಯೇ ಬೋಧನೆ ಮುಂದುವರಿಸಲು ಒಪ್ಪಿದ್ದರಿಂದ ಪ್ರತಿಭಟನೆ ವಾಪಸ್ ಪಡೆಯಲಾಯಿತು ಎಂದು ಪ್ರತಿಭಟನಕಾರರು ತಿಳಿಸಿದರು.

ಪ್ರತಿಭಟನೆಯಲ್ಲಿ ಲೇಖಕರಾದ ಬಂಜಗೆರೆ ಜಯಪ್ರಕಾಶ, ಅಗ್ರಹಾರ ಕೃಷ್ಣಮೂರ್ತಿ, ಸಿ.ಎಸ್.ದ್ವಾರಕಾನಾಥ್‌, ರಾಜಶೇಖರ್‌ ಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

‘ವರ್ಗಾವಣೆ ಒಂದು ಪ್ರಕ್ರಿಯೆ‘ ‘

ಈ ವಿಚಾರವಾಗಿ ಆಡಳಿತ ಮಂಡಳಿಯೊಂದಿಗೆ ಸಭೆ ನಡೆದಿದೆ. ಯಾವುದೇ ಸಂಸ್ಥೆ ಸುಗಮವಾಗಿ ನಡೆಯಬೇಕಿದ್ದರೆ ವರ್ಗಾವಣೆ ಮಾಡುವುದು ಒಂದು ಪ್ರಕ್ರಿಯೆ. ಅದರಂತೆ ಆಡಳಿತ ಮಂಡಳಿ ವರ್ಗಾವಣೆ ಮಾಡಿತ್ತು’ ಎಂದು ನ್ಯಾಷನಲ್‌ ಕಾಲೇಜಿನ ಪ್ರಾಂಶುಪಾಲೆ ವೈ.ಸಿ.ಕಮಲಾ ತಿಳಿಸಿದ್ದಾರೆ. ‘ನ್ಯಾಷನಲ್‌ ಕಾಲೇಜಿಗಿಂತ ಪ್ರಗತಿಪರವಾದ ಕಾಲೇಜು ಬೇರೊಂದು ಇದೆಯೇ? ಜಯನಗರ ಗೌರಿಬಿದನೂರು ಬಾಗೇಪಲ್ಲಿ ಬಸವನಗುಡಿ ನ್ಯಾಷನಲ್‌ ಕಾಲೇಜಿನ ಕನ್ನಡ ವಿಭಾಗದಲ್ಲಿ ಹೆಚ್ಚಿನವರು ಹಿಂದುಳಿದ ವರ್ಗದ ಪ್ರಾಧ್ಯಾಪಕರೇ ಇದ್ದಾರೆ. ಜಾತಿ ವಿಚಾರಕ್ಕೆ ಮಾಡಿರುವ ಆರೋಪ ಸುಳ್ಳು’ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT