ಬುಧವಾರ, ನವೆಂಬರ್ 20, 2019
20 °C

ಪಿಎಸ್‌ಐ ಮಾಡಲು ₹3.50 ಲಕ್ಷ ಪಡೆದು ಬ್ಲ್ಯಾಕ್‌ಮೇಲ್‌!

Published:
Updated:

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್ಐ) ಕೆಲಸ ಕೊಡಿಸುವುದಾಗಿ ಹೇಳಿ ಯುವತಿಯಿಂದ ₹ 3.50 ಲಕ್ಷ ಪಡೆದಿದ್ದ ದೇವಿಪ್ರಸಾದ್ ಸಾಹು ಎಂಬಾತ, ಹಣ ವಾಪಸು ಕೇಳಿದ್ದಕ್ಕೆ ಯುವತಿ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಬಗ್ಗೆ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

‘ವಂಚನೆ ಹಾಗೂ ಬ್ಲ್ಯಾಕ್‌ಮೇಲ್ ಸಂಬಂಧ ಯುವತಿಯೇ ದೂರು ನೀಡಿದ್ದಾರೆ. ಆರೋಪಿ ದೇವಿಪ್ರಸಾದ್ ಸೇರಿದಂತೆ ಎಂಟು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಸದ್ಯ ಅವರೆಲ್ಲ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಸ್ಥಳೀಯ ನಿವಾಸಿಯಾದ ಯುವತಿ 2016ರಲ್ಲಿ ಪಿಎಸ್ಐ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದರು. ಖಾಸಗಿ ಕಂಪನಿ ಉದ್ಯೋಗಿ ಆಗಿದ್ದ ದೇವಿಪ್ರಸಾದ್ ಸಾಹು, ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಪಿಎಸ್‌ಐ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ₹ 3.50 ಲಕ್ಷ ಪಡೆದಿದ್ದ. ಯುವತಿ ಬಳಿಯ ಚಿನ್ನಾಭರಣ ಹಾಗೂ ಲ್ಯಾಪ್‌ಟಾಪ್ ಸಹ ಪಡೆದುಕೊಂಡಿದ್ದ. ಈ ಬಗ್ಗೆ ಯುವತಿ ದೂರಿನಲ್ಲಿ ಹೇಳಿದ್ದಾರೆ’

‘ನಿತ್ಯವೂ ಯುವತಿ ಜೊತೆ ಮಾತನಾಡುತ್ತಿದ್ದ ಆರೋಪಿ, ಪ್ರೀತಿ ಮಾಡುವಂತೆ ಕಿರುಕುಳ ನೀಡಲಾರಂಭಿಸಿದ್ದ. ಅದಕ್ಕೆ ಒಪ್ಪದಿದ್ದಾಗ ಬೆದರಿಕೆ ಹಾಕಲಾರಂಭಿಸಿದ್ದ. ಇತ್ತ ಬೇರೆ ಮದುವೆ ಆಗಿದ್ದ ಯುವತಿ, ಹಣ ವಾಪಸು ಕೊಡಿಸುವಂತೆ ಆರೋಪಿಯ ಪರಿಚಯಸ್ಥರಾದ ಮೋಹನ್ ಹಾಗೂ ಇತರರನ್ನು ಸಂಪರ್ಕಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಸಂಧಾನ ಮಾಡುವುದಾಗಿ ಯುವತಿಯನ್ನು ಸೆಪ್ಟೆಂಬರ್ 4ರಂದು ಮೆಜೆಸ್ಟಿಕ್‌ಗೆ ಕರೆಸಿದ್ದ ಆರೋಪಿಗಳು ಅನುಚಿತವಾಗಿ ವರ್ತಿಸಿದ್ದರು. ಯುವತಿಯ ಕೈ ಹಿಡಿದು ಎಳೆದಾಡಿ ಅವಮಾನಿಸಿದ್ದರು. ಅದಾದ ಬಳಿಕವೇ ಆರೋಪಿ ಯುವತಿಯ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದಿದ್ದ.’

‘ಯುವತಿ ಜೊತೆಗೆ ತಾನು ತೆಗೆದುಕೊಂಡಿದ್ದ ಫೋಟೊಗಳನ್ನು ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದ. ಅವುಗಳನ್ನೇ ಯುವತಿಯ ಪತಿಗೂ ಕಳುಹಿಸಿದ್ದ. ಫೋಟೊಗಳನ್ನು ತೆಗೆಯಬೇಕಾದರೆ ₹ 5 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದ. ಆ ಬಗ್ಗೆ ಯುವತಿ ದೊಡ್ಡಬಳ್ಳಾಪುರ ಠಾಣೆಗೆ ದೂರು ನೀಡಿದ್ದರು. ಅದಾದ ಬಳಿಕವೂ ಆರೋಪಿ ಫೇಸ್‌ಬುಕ್‌ನಲ್ಲಿ ಮತ್ತೊಂದು ಖಾತೆ ತೆರೆದು ಫೋಟೊ ಅಪ್‌ಲೋಡ್ ಮಾಡಿದ್ದ. ಪುನಃ ₹ 2.50 ಲಕ್ಷ ನೀಡುವಂತೆ ಬ್ಲ್ಯಾಕ್‌ಮೇಲ್‌ ಮಾಡಲು ಆರಂಭಿಸಿದ್ದ’ ಎಂದು ಪೊಲೀಸರು ಹೇಳಿದರು. 

ಪ್ರತಿಕ್ರಿಯಿಸಿ (+)