ಬುಧವಾರ, ಜೂನ್ 29, 2022
26 °C

ಪಿಎಸ್ಐ ಅಕ್ರಮ: ಬಂಧಿತರು ನ್ಯಾಯಾಂಗ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಕಚೇರಿಯ ವಿಭಾಗವೊಂದರ ಸೂಪರಿಂಟೆಂಡೆಂಟ್‌ ಮಂಜುನಾಥ್ ಸೇರಿದಂತೆ ಐವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಅಕ್ರಮದಲ್ಲಿ ಭಾಗಿಯಾದ ಆರೋಪದಡಿ ಮಂಜುನಾಥ್ ಹಾಗೂ ಪೊಲೀಸ್ ನೇಮಕಾತಿ ವಿಭಾಗದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹರ್ಷ್, ಹೆಡ್‌ ಕಾನ್‌ಸ್ಟೆಬಲ್‌ಗಳಾದ ಶ್ರೀನಿವಾಸ್, ಶ್ರೀಧರ್ ಹಾಗೂ ಮೀಸಲು ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಆರ್‌ಎಸ್‌ಐ) ಲೋಕೇಶಪ್ಪ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.

ಆರೋಪಿಗಳನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದರು. ಅದರ ಅವಧಿ ಮುಗಿದಿದ್ದರಿಂದ ಐವರನ್ನೂ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಿದರು. ಮತ್ತಷ್ಟು ಮಂದಿ ವಿಚಾರಣೆ: ‘ಬಂಧಿತ ಆರೋಪಿಗಳು, ಪ್ರಕರಣದ ಬಗ್ಗೆ ಹೇಳಿಕೆ ನೀಡಿದ್ದಾರೆ. ಮತ್ತಷ್ಟು ಮಂದಿ ಅಕ್ರಮದಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು, ಅವರೆಲ್ಲರನ್ನೂ ವಿಚಾರಣೆ ನಡೆಸಲಾಗುವುದು’ ಎಂದು ಸಿಐಡಿ ಮೂಲಗಳು ಹೇಳಿವೆ.

‘ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್, ಆರ್‌ಪಿಐ ಗುರುವ ಬಸವರಾಜ್ ಹಾಗೂ ಮಧು ಅವರ ವಿಚಾ
ರಣೆ ಮುಂದುವರಿದಿದೆ’ ಎಂದು ತಿಳಿಸಿವೆ.

ನಕಲಿ ಅಂಕಪಟ್ಟಿ: 7 ಅಭ್ಯರ್ಥಿಗಳ ವಿರುದ್ಧ ಎಫ್‌ಐಆರ್
ಬೆಂಗಳೂರು:
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ನೇಮಕಾತಿ ಪ್ರಕ್ರಿಯೆಯಲ್ಲಿ ನಕಲಿ ಅಂಕಪಟ್ಟಿ ನೀಡಿದ್ದ ಆರೋಪದಡಿ ಏಳು ಅಭ್ಯರ್ಥಿಗಳ ವಿರುದ್ಧ ಭಾರತಿನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಇಲಾಖೆಯ ಉಪನಿರ್ದೇಶಕ ಟಿ.ಎನ್. ಶಿವಶಂಕರ್ ದೂರು ನೀಡಿದ್ದಾರೆ. ಇದರನ್ವಯ 7 ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಾಖಲೆಗಳನ್ನು ಕಲೆಹಾಕಲಾಗುತ್ತಿದ್ದು, ಅಭ್ಯರ್ಥಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ಹೇಳಿದರು.

‘ಇಲಾಖೆಯಲ್ಲಿ ಖಾಲಿ ಇರುವ ಅಗ್ನಿಶಾಮಕ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ 2021ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿ, ದೇಹದಾರ್ಢ್ಯ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗಿತ್ತು. ನಂತರ, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿತ್ತು’ ಎಂದರು.

‘ಆಯ್ಕೆ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳಿಂದ ಶೈಕ್ಷಣಿಕ ಹಾಗೂ ಇತರೆ ದಾಖಲೆಗಳನ್ನು ಪರಿಶೀಲನೆಗಾಗಿ ಪಡೆದು, ಸಂಬಂಧಪಟ್ಟ ಪರೀಕ್ಷಾ ಮಂಡಳಿಗಳಿಗೆ ಕಳುಹಿಸಲಾಗಿತ್ತು. ಆ ಪೈಕಿ ಅಭ್ಯರ್ಥಿಗಳಾದ ಹೊಸಪೇಟೆಯ ಡಿ.ಎಚ್. ಸುಭಾಷ್, ಕಲಬುರಗಿಯ ವಿಥೋಲ್ ನಿಂಗಪ್ಪ, ಈರಣ್ಣ ರುದ್ರೂಡಗಿ, ಕೊಪ್ಪಳದ ಮೌಲಾಸಾಬ್ ಶಾಮೀದ್‌ಸಾಬ್, ಮಲ್ಲಪ್ಪ ಮಾರುತಿ, ಷರೀಫ್‌ ಸಾಬ್ ಯಮನೂರು ಹಾಗೂ ಯಾದಗಿರಿಯ ರಮೇಶ್ ಹಾಳನೊರೆ ಅವರ ಎಸ್ಸೆಸ್ಸೆಲ್ಸಿ ಅಂಕಪಟ್ಟಿಗಳು ನಕಲಿ ಎಂಬುದು ಗೊತ್ತಾಗಿದೆ. ಆರೋಪಿಗಳು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಹೆಸರಿನಲ್ಲಿ ಎಸ್ಸೆಸ್ಸೆಲ್ಸಿ ಅಂಕಪಟ್ಟಿಗಳನ್ನು ನೀಡಿದ್ದರು. ಆದರೆ, ಇವುಗಳು ನಕಲಿ ಎಂಬುದಾಗಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಹೇಳಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು