ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಬಳಿ ಪಬ್: ಆಕ್ಷೇಪ

Last Updated 12 ಅಕ್ಟೋಬರ್ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌ಎಸ್‌ಆರ್‌ ಲೇಔಟ್‌ನ ಸರ್ಕಾರಿ ಕಾಲೇಜು ಬಳಿ ಪಬ್‌ ತಲೆ ಎತ್ತಿದ್ದು, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಸರ್ಕಾರಿ ಪಿಯು ಕಾಲೇಜು ಮತ್ತು ಖಾಸಗಿ ಕಾಲೇಜಿನಿಂದ 200 ಮೀಟರ್‌ ದೂರದಲ್ಲಿ ‘ಹಾರ್ಟ್‌ ಬ್ರೇಕರ್‌’ ಎಂಬ ಪಬ್‌ ನಡೆಯುತ್ತಿದೆ. ಈ ಪಬ್‌ನ ಗೋಡೆಯನ್ನು ಸಂಪೂರ್ಣ ಗಾಜಿನಿಂದ ಮಾಡಿದ್ದು, ಇದರೊಳಗೆ ನಡೆಯುವ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ನೋಡುತ್ತಾ ನಿಂತಿರುತ್ತಾರೆ. ಕಾಲೇಜಿನ ಬಳಿಯಲ್ಲಿ ಪಬ್‌ ತೆರೆಯಲು ಬಿಬಿಎಂಪಿ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಹೇಗೆ ಅನುಮತಿ ನೀಡಿದ್ದಾರೆ’ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

‘ಈ ಕಟ್ಟಡವನ್ನು ಪಿಜಿ ಹಾಸ್ಟೆಲ್‌ ಉದ್ದೇಶಕ್ಕೆ ನೀಡಿರುವುದು ಬಿಬಿಎಂಪಿ ಮಂಜೂರು ಮಾಡಿರುವ ನಕ್ಷೆಯಲ್ಲಿದೆ. ಆರ್‌ಟಿಐ ಅಡಿ ಪಡೆದ ಮಾಹಿತಿಯೂ ಇದನ್ನು ಸಮರ್ಥಿಸಿದೆ. ಪಿಜಿಗೆ ಮೂರು ಮಹಡಿಗೆ ಮಾತ್ರವೇ ಅನುಮೋದನೆ ಪಡೆಯಲಾಗಿದೆಯಾದರೂ, ಪಾರ್ಕಿಂಗ್‌ಗೆ ಮೀಸಲಾಗಿದ್ದ ಬೇಸ್‌ಮೆಂಟ್‌ ಜಾಗವನ್ನೂ ಸೇರಿಸಿ ನಾಲ್ಕು ಅಂತಸ್ತುಗಳಲ್ಲಿ ಪಬ್‌ ನಡೆಸಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಆರ್‌ಟಿಐ ಕಾರ್ಯಕರ್ತರೊಬ್ಬರು ಹೇಳಿದರು.

ಬಿಬಿಎಂಪಿ ಆರೋಗ್ಯ ನಿರೀಕ್ಷಕ ವಿನೋದ್‌, ‘ಎಂಜಿನಿಯರಿಂಗ್‌ ವಿಭಾಗದಿಂದ ವಾಣಿಜ್ಯ ಉದ್ದೇಶಕ್ಕೆ ಎಂದು ನಕ್ಷೆ ಪಡೆದಿರುವುದರಿಂದ ಅನುಮತಿ ನೀಡಲಾಗಿದೆ’ ಎಂದರು.

‘ಬಿಬಿಎಂಪಿ ಆರೋಗ್ಯ ವಿಭಾಗದವರಿಗೆ ಸಂಬಂಧಿಸಿದ ವಿಚಾರವಿದು. ಪಬ್‌ ಯಾವ ಸ್ಥಳದಲ್ಲಿ ಇದೆ ಎಂಬುದನ್ನು ನೋಡಿದ ನಂತರ ಪ್ರತಿಕ್ರಿಯಿಸುತ್ತೇನೆ’ ಎಂದು ಸಹಾಯಕ ಎಂಜಿನಿಯರ್‌ ರವಿ ಹೇಳಿದರು.

‘ಪಬ್‌ಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಿ ಹೋಗುತ್ತಾರೆ. ವಾಹನ ನಿಲುಗಡೆಗೂ ಜಾಗ ಬಿಟ್ಟಿಲ್ಲ. ಇದರಿಂದ ಸಂಚಾರ ದಟ್ಟಣೆ ಆಗುತ್ತಿದೆ. ಪಬ್‌ ನಮ್ಮ ಮನೆಯ ಪಕ್ಕದಲ್ಲಿಯೇ ಇದ್ದು, ರಾತ್ರಿ 1 ಗಂಟೆಯವರೆಗೂ ಗಲಾಟೆ ನಡೆಯುತ್ತಿರುತ್ತದೆ.ಈ ಬಗ್ಗೆ ಬಿಬಿಎಂಪಿ, ಪೊಲೀಸ್ ಮತ್ತು ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ’ ಎನ್ನುತ್ತಾರೆ ಇಲ್ಲಿನ ನಿವಾಸಿ ಕೆ.ಎಂ.ಚಂದ್ರ.

‘ನಿಯಮಬಾಹಿರವಾಗಿ ನಕ್ಷೆ ಮಂಜೂರು ಮಾಡುವುದು. ವಾಸ ಸ್ಥಳದಲ್ಲಿ ವಾಣಿಜ್ಯ ಉದ್ದೇಶಕ್ಕೆ ಅನುಮತಿ ನೀಡುವುದು ಬೊಮ್ಮನಹಳ್ಳಿ ವಲಯದಲ್ಲಿ ಮಾಮೂಲಾಗಿದೆ. ಇಲ್ಲಿ ಅನಧಿಕೃತವಾಗಿ ನೂರಾರು ಪಿಜಿಗಳು ನಡೆಯುತ್ತಿವೆ’ ಎಂದು ಸ್ಥಳೀಯರಾದ ಕವಿತಾ ರೆಡ್ಡಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT