ಮಂಗಳವಾರ, ಮೇ 18, 2021
24 °C

ಮೇಡಂ, ಸಮಸ್ಯೆಗೆ ಕೊನೆ ಎಂದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೂತನ ಮೇಯರ್‌ ಗಂಗಾಂಬಿಕೆ ಅವರಿಗೆ ಅಹವಾಲು ಹೇಳಿಕೊಳ್ಳಲು ‘ಪ್ರಜಾವಾಣಿ’ ಕಲ್ಪಿಸಿರುವ ಅವಕಾಶಕ್ಕೆ ಸಾರ್ವಜನಿಕರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದಿರುವ ದೂರುಗಳಲ್ಲಿ ಕಸ ವಿಲೇವಾರಿ, ರಸ್ತೆಗೆ ಸಂಬಂಧಿಸಿದ ಸಮಸ್ಯೆಗಳೇ ಹೆಚ್ಚಾಗಿವೆ. ರಾಜಕಾಲುವೆಯ ಹೂಳು ಎತ್ತದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಬೀದಿನಾಯಿಗಳ ಹಾವಳಿ ತಪ್ಪಿಸುವಂತೆ ಮನವಿಗಳು ಬಂದಿವೆ. ಮೇಯರ್‌ಗೆ ಜನರು ಸಲ್ಲಿಸಿರುವ ಕೆಲವು ಅಹವಾಲುಗಳು ಇಲ್ಲಿವೆ.

ವ್ಯಾ‌ಪಾರಿಗಳ ಉಪಟಳ ತಪ್ಪಿಸಿ

ಮೈಸೂರು ವೃತ್ತ, ಕಾರ್ಪೊರೇಷನ್ ಉದ್ಯಾನ, ಕೋತಿ ಉದ್ಯಾನ ಎದುರಿನ ಬೀದಿ ಬದಿಯ ವ್ಯಾ‌ಪಾರಿಗಳಿಂದ ವಾಹನ ಸವಾರಿಗೆ ಭಾರಿ ತೊಂದರೆಯಾಗುತ್ತಿದೆ. ಮನೆಯ ಸುತ್ತಮುತ್ತ ವ್ಯಾಪಾರಿಗಳು ನಿಂತು, ಧೂಮಪಾನ ಮಾಡುತ್ತಾರೆ. ಇದರಿಂದ ಅಲ್ಲಿನ ನಿವಾಸಿಗಳಿಗೂ ಕಿರಿಕಿರಿ ಉಂಟಾಗುತ್ತಿದೆ. 

ಶ್ವೇತಾ, ಚಾಮರಾಜಪೇಟೆ

ಅಧಿಕ ದಂಡ ವಿಧಿಸಿ

ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಮಹತ್ವ ನೀಡಿ.  ಮಳೆ ನೀರು ಇಂಗುವಂತೆ ರಸ್ತೆಗಳು ನಿರ್ಮಾಣವಾಗಲಿ. ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡುವವರಿಗೆ ಹಾಗೂ ಅನಗತ್ಯ ಶಬ್ದ ಮಾಡುವವರಿಗೆ ಅಧಿಕ ದಂಡ ವಿಧಿಸಿ. ಶಬ್ದ ಮಾಲಿನ್ಯ ನಿಯಂತ್ರಿಸಿ. ನಗರದಲ್ಲಿ ಶಾಂತಿ ಕಾಪಾಡಲು ಕ್ರಮಕೈಗೊಳ್ಳಿ.

ಸಂತೋಷ್‌ ದೇಶಪಾಂಡೆ, ಸಿ.ವಿ.ರಾಮನ್‌ ನಗರ

ನಿರ್ಗತಿಕರ ಕೇಂದ್ರಗಳತ್ತ ಗಮನಹರಿಸಿ

ನಗರದಲ್ಲಿ ನಿರ್ಗತಿಕರ ಕೇಂದ್ರಗಳನ್ನು ಸ್ಥಾಪಿಸುವುದು ಹಾಗು ಅವುಗಳನ್ನು ಉತ್ತಮ ರೀತಿಯಲ್ಲಿ ನಡೆಸುವುದು ಪಾಲಿಕೆಯ ಜವಾಬ್ದಾರಿ. ವಯಸ್ಸಾದವರು, ಹೆಂಗಸರು ಪುಟ್ಟ ಕಂದಮ್ಮಗಳನ್ನು ಕಂಕುಳದಲ್ಲಿ ಇಟ್ಟುಕೊಂಡು ಭಿಕ್ಷೆ ಬೇಡುವುದನ್ನು ನೋಡಲಾರೆವು. ಇದಕ್ಕೊಂದು ಪರಿಹಾರ ಕಲ್ಪಿಸಿ.

ರಶ್ಮಿ, ಮಲ್ಲೇಶ್ವರ

ಪುನರ್ವಸತಿ ಕೇಂದ್ರ ಸ್ಥಾಪಿಸಿ

ನಗರದ ಬೀದಿ ನಾಯಿಗಳಿಗೆ ಪುನರ್ವಸತಿ ಕೇಂದ್ರ ಸ್ಥಾಪಿಸಿ, ಅವುಗಳ ಬಗ್ಗೆ ಗಮನಹರಿಸಿ. ಇದರಿಂದ ಚಿಕ್ಕಮಕ್ಕಳು ಹಾಗೂ ವೃದ್ಧರಿಗೆ ಹೆಚ್ಚು ಸಂರಕ್ಷಣೆ ಸಿಕ್ಕಂತಾಗುತ್ತದೆ. ಈ ಬಗ್ಗೆ ಕ್ರಮವಹಿಸಿ.

ಕ.ಚ.ಪಾಟೀಲ, ಹೆಗಡೆ ನಗರ

ಕಸದಿಂದ ಗೊಬ್ಬರ ತಯಾರಿಸಿ

ಕಸದ ಸಮಸ್ಯೆ ದಿನೇದಿನೇ ಪೆಡಂಭೂತವಾಗಿ ಕಾಡುತ್ತಿದೆ. ಹಾಗಾಗಿ ವಾರ್ಡ್ ಮಟ್ಟದಲ್ಲಿ ಕಸದಿಂದ ಗೊಬ್ಬರ ತಯಾರಿಸುವ ಕೇಂದ್ರಗಳನ್ನು ಸ್ಥಾಪಿಸಬೇಕು. ಇಲ್ಲಿನ ತಯಾರಾಗುವ ಗೊಬ್ಬರ ಮಾರಾಟ ಮಾಡಬಹುದು. ಇದರಿಂದ ಕಸದ ಸಮಸ್ಯೆಗೆ ಸುಲಭದ ದಾರಿ ಸಿಕ್ಕಂತಾಗುತ್ತದೆ

ಹೊಯ್ಸಳಾದಿತ್ಯ, ಭಾರತ್ ನಗರ

ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧಿಸಿ

ನಗರದೆಲ್ಲೆಡೆ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧ ಮಾಡಬೇಕು. ಹೆಚ್ಚು ಹೊಗೆ ಬಿಡುವ ವಾಹನಗಳ ಮೇಲೆ ನಿಷೇಧ ‌ಹೇ‌ರಬೇಕು. ಗಿಡ–ಮರಗಳ ಹನನ ತಡೆಯಿರಿ. ಕೈಗಾರಿಕೆ, ಸರ್ಕಾರಿ ಕಚೇರಿ, ಖಾಸಗಿ ಸಂಘ ಸಂಸ್ಥೆಗಳು, ಆಸ್ಪತ್ರೆ ಹಾಗು ಶಾಲಾ ಕಾಲೇಜುಗಳ ಆವರಣದಲ್ಲಿ ಗಿಡ–ಮರಗಳನ್ನು ಬೆಳೆವುದು ಕಡ್ಡಾಯಗೊಳಿಸಿ. ಸ್ವಚ್ಛ ಬೆಂಗಳೂರು ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳಿ

ಲಿಖಿತ್ ಗೌಡ, ವಿಜಯನಗರ.

ಕಸ ಸಂಗ್ರಹದ ಬಗ್ಗೆ ಗಮನಹರಿಸಿ

ನಗರದ ಪ್ರತಿಯೊಂದು ರಸ್ತೆಗೂ ದಿನ ನಿತ್ಯ ಕಸ ಸಂಗ್ರಹ ವಾಹನಗಳು ಹೋಗುವಂತೆ ಆಯಾ ವಾರ್ಡಿನ ಸದಸ್ಯರು ನೋಡಿಕೊಂಡರೆ ಶೇಕಡ 80 ರಷ್ಟು ಕಸದ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ, ನಗರದ ಹಲವೆಡೆ ವಾರಗಳಾದರೂ ಕಸ ಸಂಗ್ರಹಕ್ಕೆ ವಾಹನಗಳು ಬರುತ್ತಿಲ್ಲ. ಇದರಿಂದ ಸಾರ್ವಜನಿಕರೂ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ಗಮನಹರಿಸಿ. 

ವಾಸು, ಸುಂಕದಕಟ್ಟೆ

ಡಾಂಬರು ಕಾಣದ ರಸ್ತೆಗಳು

ಆವಲಹಳ್ಳಿ ದೊಡ್ಡಮ್ಮ ದೇವಸ್ಥಾನ ಮತ್ತು ಅಕ್ಕಪಕ್ಕದ ರಸ್ತೆಗಳು ಡಾಂಬರು, ಕಾಂಕ್ರೀಟ್ ಕಾಣದೆ ನಾಲ್ಕೈದು ವರ್ಷಗಳೇ ಕಳೆದಿವೆ. ರಸ್ತೆಗಳು ತುಂಬಾ ಕಿರಿದಾಗಿವೆ, ಅಲ್ಲಲ್ಲಿ ಅಗೆದು ಮಣ್ಣು ಮುಚ್ಚಲಾಗಿದೆ. ಇಲ್ಲಿ ವಾಹನಗಳು ಓಡಾಡುವುದಿರಲಿ, ಸಾರ್ವಜನಿಕರು ನಡೆದಾಡಲು ಕಷ್ಟವಾಗುತ್ತಿದೆ. ಈ ಸಮಸ್ಯೆಗೆ ಕೂಡಲೇ ಪರಿಹಾರ ನೀಡಿ.

ವಿ.ಹನುಮಂತ, ಆವಲಹಳ್ಳಿ

ವಾಹನ ನಿಲುಗಡೆಗೆ ಸ್ಥಳಾವಕಾಶ ನೀಡಿ

ಕಸ ವಿಲೇವಾರಿ ಮಾಡುವ ಲಾರಿ, ವಾಹನಗಳನ್ನು ನಗರದ ಮುಖ್ಯರಸ್ತೆಗಳ ಪಕ್ಕದಲ್ಲೇ ನಿಲ್ಲಿಸುವುದರಿಂದ, ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದಲ್ಲದೇ, ಟ್ರಾಫಿಕ್ ಸಮಸ್ಯೆಯೂ ಉಂಟಾಗುತ್ತಿದೆ. ಹಾಗಾಗಿ ಸರ್ಕಾರದ ಸೂಕ್ತ ಜಾಗವನ್ನು ನಿಗದಿಪಡಿಸಿಕೊಂಡು, ಅಲ್ಲಿಯೇ ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆ ಶೀಘ್ರವಾಗಿ ನಡೆಯಬೇಕು. ಇದರಿಂದ ಸಂಚಾರ ದಟ್ಟಣೆ ಸಮಸ್ಯೆ ಜೊತೆಗೆ ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು.

ಎಂ.ಶಿವಕುಮಾರ, ಬೆಂಗಳೂರು

ಬೀದಿನಾಯಿಗಳನ್ನು ನಿಯಂತ್ರಿಸಿ

ನಗರದ ಗಲ್ಲಿಗಲ್ಲಿಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಲೇ ಇದೆ. ಅವುಗಳ ನಿಯಂತ್ರಣಕ್ಕೆ ಸೂಕ್ತ ಯೋಜನೆ ರೂಪಿಸಬೇಕು. ರಸ್ತೆ ದುರಸ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಉದ್ಯಾನಗಳ ನಿರ್ವಹಣೆ, ಸ್ಕೈ ವಾಕ್‌ಗಳ ನಿರ್ಮಾಣ ಮಾಡಬೇಕು.

ಆರ್.ಕುಮಾರ್ , ಅತ್ತಿಗುಪ್ಪೆ

ಹಕ್ಕುಪತ್ರ ನೀಡಿ

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕೊಳೆಗೇರಿ ನಿವಾಸಿಗಳಿಗೆ ಹಕ್ಕು ಪತ್ರ ಸಿಕ್ಕಿಲ್ಲ. ಅವರಿಗೆ ಹಕ್ಕು ಪತ್ರಗಳನ್ನು ನೀಡಿ, ಸ್ವಂತ ಮನೆಯ ಕನಸನ್ನು ನನಸಾಗಿಸಲು ಪಾಲಿಕೆ ಕ್ರಮಕೈಗೊಳ್ಳಬೇಕು.

ಮಂಜುನಾಥ್, ವಿನ್ನಿ ಕಾಲೊನಿ

ಅರೆಕೆರೆಯನ್ನು ರಕ್ಷಿಸಿ

ಬನ್ನೇರುಘಟ್ಟ ರಸ್ತೆಯ ಹುಳಿಮಾವು ಗೇಟ್ ಪಕ್ಕದ ಅರೆಕೆರೆಗೆ ಸುತ್ತಮುತ್ತಲಿನ ವಸತಿ ಸಮುಚ್ಚಯಗಳ ಒಳಚರಂಡಿ ನೀರು ಸೇರುತ್ತಿದೆ. ಕೆರೆಯ ಎರಡೂ ಬದಿಯಲ್ಲಿ ನಿತ್ಯ ನಡೆಯುವ ಸಂತೆಯ ತ್ಯಾಜ್ಯವನ್ನೆಲ್ಲ ಬೀಸಾಡುತ್ತಿರುವುದರಿಂದ ಕಿಲೋಮೀಟರ್ ದೂರದವರೆಗೂ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಆದಷ್ಟು ಬೇಗ ಈ ಸಂರಕ್ಷಣೆ ಮಾಡಿ.

ವಿಶಾಲಾಕ್ಷಿ

ಕೊಂದುಕೊರತೆ ಆಲಿಸಲು ಸಭೆ ನಡೆಸಿ

ವಾರ್ಡ್ 110 ಸಂಪಂಗಿರಾಮನಗರ ಬಳಿಯ ಬಲಮುರಿ ಗಣೇಶ ದೇವಸ್ಥಾನದ ಹತ್ತಿರ ಕಾಲುವೆ ಕುಸಿದು ಸುಮಾರು 15 ವರ್ಷಗಳಾಗಿವೆ. ಇದುವರೆಗೂ ದುರಸ್ತಿ ಆಗಿಲ್ಲ. ಒಳಚರಂಡಿಗಳನ್ನು ಅಭಿವೃದ್ಧಿಪಡಿಸಿ. ರಾಜಕಾಲುವೆ ತೆರವು ವಿಚಾರದಲ್ಲಿ ಒಂದೇ ನ್ಯಾಯ ಅನುಸರಿಸಿ. ವಾರ್ಡ್‌ ಸದಸ್ಯರು ಜನರ ಕುಂದುಕೊರತೆಗಳಿಗೆ ಸಾರ್ವಜನಿಕ ಸಭೆಗಳನ್ನು ನಡೆಸಬೇಕು. ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆ ಕೊಡಬೇಕು.

ಎಲ್.ರಾಮಚಂದ್ರಯ್ಯ, ಸಂಪಂಗಿರಾಮನಗರ

ಜೀವ ಕಾಪಾಡಿ

ಬೆಳತೂರು ಕಾಲೊನಿಯ ಊರ್ದು ಶಾಲೆಯ ರಸ್ತೆಯಲ್ಲಿ ಎರಡು ಕಡೆ ಚರಂಡಿ ಮುಚ್ಚಿಕೊಂಡು ದುರ್ವಾಸನೆ ಹೊಡೆಯುತ್ತಿದೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ, ಕ್ರಮಕೈಗೊಂಡಿಲ್ಲ. ಈಗಾಗಲೇ ಈ ಬೀದಿಯಲ್ಲಿ ಸಾಂಕ್ರಾಮಿಕ ರೋಗ ಹರಡಿ, ಒಬ್ಬ ವೃದ್ಧ ಹಾಗೂ ಮಗು ಮೃತಪಟ್ಟಿದ್ದಾರೆ. ಕೂಡಲೆ ಈ ಬಗ್ಗೆ ಚರಂಡಿ ದುರಸ್ತಿಗೆ ಕ್ರಮಕೈಗೊಂಡು, ಇತರರ ಜೀವ ಕಾಪಾಡಿ.

ರಮೇಶ್, ಕಾಡುಗೋಡಿ.

ಹಣ ಕೇಳುವವರ ವಿರುದ್ಧ ಕ್ರಮಕೈಗೊಳ್ಳಿ

ತ್ಯಾಗರಾಜನಗರ ಎಸ್.ಎಲ್.ವಿ.ಶಾಲೆಯ ರಸ್ತೆಯಲ್ಲಿ ಕಸ ಸಂಗ್ರಹಿಸುವ ಪೌರ ಕಾರ್ಮಿಕ ಮಹಿಳೆ, ‘₹100 ಕೊಟ್ಟರೆ ಮಾತ್ರ ಮನೆ ಹತ್ತಿರ ಬಂದು ಕಸ ತೆಗೆದುಕೊಳ್ಳುವೆ. ಇಲ್ಲದಿದ್ದರೆ, ನಾನು ಇದ್ದಲ್ಲಿಗೆ ಬಂದು ಕಸ ಹಾಕಿ’ ಎನ್ನುತ್ತಾಳೆ. ಇಂತಹವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ

ಶೈಲಾವತಿದೇವಿ, ತ್ಯಾಗರಾಜನಗರ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು