ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಫಿಂಗ್ ಭಯ ಕಾಡಿತು: ವೈದ್ಯ ರಮಣ್‌

ಪೊಲೀಸ್ ಕಸ್ಟಡಿಗೆ ಹೇಮಂತ್ ಕಶ್ಯಪ್ * ‘ಸಮಯ’ ವಾಹಿನಿ ನೌಕರರಿಗೆ ಶೋಧ
Last Updated 20 ಮಾರ್ಚ್ 2019, 19:33 IST
ಅಕ್ಷರ ಗಾತ್ರ

ಬೆಂಗಳೂರು: ‘ಬೇರೆ ಯಾರದ್ದೋ ಅಶ್ಲೀಲ ವಿಡಿಯೊಗೆ ನನ್ನ ಮುಖ ಹೊಂದಿಸಿ (ಮಾರ್ಫಿಂಗ್) ವಾಹಿನಿಗಳಲ್ಲಿ ಪ್ರಸಾರ ಮಾಡಿಬಿಡಬಹುದು ಎಂಬ ಭಯದಲ್ಲಿ ಪತ್ರಕರ್ತ ಹೇಮಂತ್‌ ಕಶ್ಯಪ್‌ಗೆ ₹ 5 ಲಕ್ಷ ಕೊಟ್ಟಿದ್ದೆ...’

ಸದಾಶಿವನಗರ ಠಾಣೆಗೆ ದೂರು ಕೊಟ್ಟಿರುವ ವೈದ್ಯ ರಮಣ್ ರಾವ್ ಅವರ ಹೇಳಿಕೆ ಇದು. ಮಂಗಳವಾರ ಹೇಮಂತ್‌ನನ್ನು ಬಂಧಿಸಿದ್ದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.

‘ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ವೈದ್ಯರಿಗೆ ಸಹಾಯ ಮಾಡಲು ಹೋಗಿದ್ದೆ ಅಷ್ಟೆ. ಆದರೆ, ಅವರು ನನ್ನನ್ನೇ ಆರೋಪಿಯನ್ನಾಗಿ ಮಾಡಿದ್ದಾರೆ’ ಎಂದು ಹೇಮಂತ್ ಹೇಳಿಕೆ ಕೊಟ್ಟಿದ್ದಾನೆ. ಆದರೆ, ಆತ ಹಣ ಪಡೆದಿರುವುದಕ್ಕೆ ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಾವಳಿ ಹಾಗೂ ಇನ್ನೊಬ್ಬ ಆರೋಪಿ ಸಮಯ ವಾಹಿನಿಯ ಮಂಜುನಾಥ್ ಜತೆ ನಿರಂತರ ಸಂಪರ್ಕದಲ್ಲಿದ್ದ ಎಂಬುದಕ್ಕೆ ಸಿಡಿಆರ್‌ನ (ಕರೆ ವಿವರ) ಸಾಕ್ಷ್ಯಗಳಿವೆ ಎಂದು ಪೊಲೀಸರು ಹೇಳಿದ್ದಾರೆ.

ವೈದ್ಯರ ಹೇಳಿಕೆ: ‘ಮಾರ್ಚ್ 5ರಂದು ವಾಟ್ಸ್‌ಆ್ಯಪ್‌ನಲ್ಲಿ ಕರೆ ಮಾಡಿದ್ದ ಹೇಮಂತ್ ಎಂಬಾತ, ‘ನಾನು ಟಿವಿ–9 ವಾಹಿನಿಯ ಹಿರಿಯ ವರದಿಗಾರ. ನಿಮ್ಮ ಜತೆ ತುರ್ತಾಗಿ ಮಾತನಾಡಬೇಕು’ ಎಂದು ಹೇಳಿದ. ಹೀಗಾಗಿ, ಕ್ಲಿನಿಕ್‌ಗೆ ಬರುವಂತೆ ಹೇಳಿದ್ದೆ’ ಎಂದು ವೈದ್ಯರು ದೂರಿನಲ್ಲಿ ವಿವರಿಸಿದ್ದಾರೆ.

‘ಸಂಜೆ 4 ಗಂಟೆಗೆ ಬಂದ ಆತ, ‘ನಿಮಗೆ ಸಂಬಂಧಿಸಿದ ಸೆಕ್ಸ್ ವಿಡಿಯೊ ನನ್ನ ಬಳಿ ಇದೆ. ಅದನ್ನು ಪ್ರಸಾರ ಮಾಡಿದರೆ ಗೌರವಕ್ಕೆ ಧಕ್ಕೆ ಆಗುತ್ತದೆ. ನಮ್ಮ ವಾಹಿನಿಯ ಐವರು ವರದಿಗಾರರ ಬಳಿಯೂ ಆ ವಿಡಿಯೊ ಇದೆ. ತಲಾ ₹ 10 ಲಕ್ಷದಂತೆ ₹ 50 ಲಕ್ಷ ಕೊಟ್ಟರೆ ಎಲ್ಲರೂ ಸುಮ್ಮನಾಗುತ್ತೇವೆ’ ಎಂದು ಬೆದರಿಸಿದ್ದ. ನಾನು ಅಂತಹ ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ. ವಿನಾ ಕಾರಣ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿದ್ದೆ.’

‘ಎಲ್ಲ ವಾಹಿನಿಗಳಲ್ಲೂ ವಿಡಿಯೊ ಪ್ರಸಾರ ಮಾಡಿಸುವುದಾಗಿ ಹೊರಟು ಹೋಗಿದ್ದ ಹೇಮಂತ್, ಮತ್ತೆ 2–3 ಬಾರಿ ಕ್ಲಿನಿಕ್‌ಗೆ ಬಂದು ಹಣಕ್ಕಾಗಿ ಪೀಡಿಸಲು ಶುರು ಮಾಡಿದ. ಈತ ಕಂಪ್ಯೂಟರ್ ತಂತ್ರಜ್ಞಾನದ ಮೂಲಕ ತನಗೆ ಬೇಕಾದಂತೆ ವಿಡಿಯೊ ಸೃಷ್ಟಿಸಿ ಮರ್ಯಾದೆ ತೆಗೆದುಬಿಡುಬಹುದು ಎಂಬ ಭಯದಲ್ಲಿ ತಲಾ ₹ 1 ಲಕ್ಷದಂತೆ ಐವರು ವರದಿಗಾರರಿಗೆ ₹ 5 ಲಕ್ಷ ಕೊಟ್ಟು ಕಳುಹಿಸಿದ್ದೆ.’

‘ಮಾರ್ಚ್ 19ರ ಸಂಜೆ 4.30ಕ್ಕೆ ಸಮಯ ವಾಹಿನಿ ವರದಿಗಾರ ಮಂಜುನಾಥ್ ಕೂಡ, ಕ್ಯಾಮೆರಾಮನ್‌ ಜತೆ ಕ್ಲಿನಿಕ್‌ಗೆ ಬಂದು ಅದೇ ವಿಷಯವಾಗಿ ಬ್ಲ್ಯಾಕ್‌ಮೇಲ್ ಮಾಡಿದ. ಮಾಧ್ಯಮಗಳ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಹಣ ಮಾಡಲು ಈ ರೀತಿ ಅಡ್ಡದಾರಿ ತುಳಿಯಬೇಡಿ. ನಾನು ಯಾವುದೇ ಕಾರಣಕ್ಕೂ ಹಣ ಕೊಡುವುದಿಲ್ಲ ಎಂದು ಅವರಿಬ್ಬರಿಗೂ ಬುದ್ಧಿ ಹೇಳಿ ಕಳುಹಿಸಿದ್ದೆ.’

‘ಸಮಾನ ಉದ್ದೇಶದಿಂದ ಇವರೆಲ್ಲ ಗ್ಯಾಂಗ್ ಕಟ್ಟಿಕೊಂಡು ಸುಲಿಗೆ ಮಾಡಲು ಯತ್ನಿಸುತ್ತಿದ್ದಾರೆ ಎಂಬುದು ಅರಿವಾಯಿತು. ಹೀಗಾಗಿ, ಪೊಲೀಸರಿಗೆ ಹಿಡಿದುಕೊಡಲು ನಿರ್ಧರಿಸಿದೆ. ಕೂಡಲೇ ಹೇಮಂತ್‌ಗೆ ಕರೆ ಮಾಡಿ, ಸಮಯ ವಾಹಿನಿಯವರೂ ಹೆದರಿಸುತ್ತಿದ್ದಾರೆ. ನಿನಗೆ ಹಣ ಕೊಡುತ್ತೇನೆ. ಅವರಿಗೂ ಕೊಟ್ಟು ಸೆಟ್ಲ್‌ಮೆಂಟ್ ಮಾಡಿಬಿಡು ಎಂದು ಹೇಳಿದೆ. ಆತ ಹಣ ಪಡೆದುಕೊಳ್ಳಲು ಕ್ಲಿನಿಕ್‌ಗೆ ಬರುವುದಾಗಿ ಹೇಳುತ್ತಿದ್ದಂತೆಯೇ ಪೊಲೀಸರಿಗೆ ಕರೆ ಮಾಡಿದೆ.’

‘ಪೊಲೀಸರು ಮಫ್ತಿಯಲ್ಲಿ ಬಂದು ಕ್ಲಿನಿಕ್‌ನ ಕೊಠಡಿಯಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದರು. ಸಂಜೆ 6 ಗಂಟೆಗೆ ಹೇಮಂತ್ ಬರುತ್ತಿದ್ದಂತೆಯೇ ಆತನನ್ನು ಹಿಡಿದು ಕೊಂಡು ಠಾಣೆಗೆ ಕರೆದೊಯ್ದರು’ ಎಂದು ರಮಣ್‌ ರಾವ್ ದೂರಿನಲ್ಲಿ ವಿವರಿಸಿದ್ದಾರೆ.

ಹೇಮಂತ್‌ನ ಮೊಬೈಲನ್ನು ಸಿಐಡಿ ಸೈಬರ್ ಅಪರಾಧ ವಿಭಾಗಕ್ಕೆ ಕಳುಹಿಸಲಾಗಿದೆ.

‘ಎಟಿಎಂನಲ್ಲೂ ಡ್ರಾ ಮಾಡಿಸಿಕೊಂಡ’

‘ಮೊದಲು ಎರಡು ಕಂತುಗಳಲ್ಲಿ ₹ 4 ಲಕ್ಷ ಪಡೆದುಕೊಂಡು ಹೋಗಿದ್ದ ಹೇಮಂತ್, ಬಾಕಿ ₹ 1 ಲಕ್ಷ ಕೇಳಿಕೊಂಡು ಕ್ಲಿನಿಕ್ ಬಳಿ ಬಂದಿದ್ದ. ನನ್ನ ಬಳಿ ಸದ್ಯ ಯಾವುದೇ ಹಣವಿಲ್ಲ ಎಂದರೂ ಬಿಡದ ಆತ, ಎಟಿಎಂ ಘಟಕಕ್ಕೇ ಕರೆದೊಯ್ದು ಎರಡು ಕಾರ್ಡ್‌ಗಳಿಂದ ₹ 98 ಸಾವಿರ ಡ್ರಾ ಮಾಡಿಸಿಕೊಂಡಿದ್ದ’ ಎಂದು ವೈದ್ಯರು ಹೇಳಿಕೆ ಕೊಟ್ಟಿರುವುದಾಗಿ ಡಿಸಿಪಿ ಡಿ.ದೇವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೋಪಿಗಳು ಬ್ಲ್ಯಾಕ್‌ಮೇಲ್ ಮಾಡಲು ಬಳಸಿದ್ದ ವಿಡಿಯೊ ಯಾವುದೆಂದು ಇನ್ನೂ ಗೊತ್ತಾಗಿಲ್ಲ. ಅದರ ಬಗ್ಗೆಯೇ ತನಿಖೆ ನಡೆಯುತ್ತಿದೆ. ಮಂಜುನಾಥ್ ಹಾಗೂ ಕ್ಯಾಮೆರಾಮನ್ ಮೊಬೈಲ್ ಸ್ವಿಚ್ಡ್ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT