ಬ್ಲ್ಯಾಕ್‌ಮೇಲ್ ಮಾಡಿದ್ದ ಸಿಬ್ಬಂದಿ ವಜಾ: ಪಬ್ಲಿಕ್ ಟಿ.ವಿ. ರಂಗನಾಥ್ ಸ್ಪಷ್ಟನೆ

ಶುಕ್ರವಾರ, ಏಪ್ರಿಲ್ 26, 2019
28 °C

ಬ್ಲ್ಯಾಕ್‌ಮೇಲ್ ಮಾಡಿದ್ದ ಸಿಬ್ಬಂದಿ ವಜಾ: ಪಬ್ಲಿಕ್ ಟಿ.ವಿ. ರಂಗನಾಥ್ ಸ್ಪಷ್ಟನೆ

Published:
Updated:

ಬೆಂಗಳೂರು: ‘ನಮ್ಮಲ್ಲಿ ಸಿಬ್ಬಂದಿಯಾಗಿದ್ದ ಒಬ್ಬ ವ್ಯಕ್ತಿ ಇನ್ಯಾವುದೋ ಮಾಧ್ಯಮದ ಹೆಸರು ಹೇಳಿಕೊಂಡು ಯಾರನ್ನೋ ಹೋಗಿ ಬೆದರಿಸಿದ್ದಾರೆ. ಈ ಮಾಹಿತಿ ಬಂದ ಕೂಡಲೇ ಸಂಬಂಧಿಸಿದ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ’ ಎಂದು ‘ಪಬ್ಲಿಕ್ ಟೀವಿ‘ ಸುದ್ದಿವಾಹಿನಿಯ ಮುಖ್ಯಸ್ಥರಾದ ಎಚ್‌.ಆರ್.ರಂಗನಾಥ್ ಯುಟ್ಯೂಬ್‌ನ publictvnewskannada ಚಾನೆಲ್‌ಗೆ ಅಪ್‌ಲೋಡ್ ಆಗಿರುವ ವಿಡಿಯೊದಲ್ಲಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಬ್ಲ್ಯಾಕ್‌ಮೇಲ್ ಆರೋಪ, ‘ಪಬ್ಲಿಕ್‌ ಟೀವಿ’ ಇನ್‌ಪುಟ್ ಮುಖ್ಯಸ್ಥ ಹೇಮಂತ್ ಸೆರೆ

ರಂಗನಾಥ್ ಅವರ ಮಾತಿನ ಅಕ್ಷರ ರೂಪ ಇಲ್ಲಿದೆ...

‘ಮಾಧ್ಯಮಗಳು ಸಾರ್ವಜನಿಕರಿಗೆ ಜವಾಬ್ದಾರಿಯಿಂದ ಇರಬೇಕು. ಅದು ನಮ್ಮ ನಿಲುವು. ನಮ್ಮ ಹೆಸರು ಹೇಳಿಕೊಂಡು ಯಾರಾದರೂ ಕಿರುಕುಳ ಕೊಟ್ರೆ, ಬೆದರಿಸಿದರೆ ಸಮೀಪದ ಪೊಲೀಸ್ ಠಾಣೆಗೆ ದೂರು ಕೊಡಿ ಅಂತ ಹೇಳ್ತಾ ಇದ್ವಿ. ನಮ್ಮಲ್ಲಿ ಸಿಬ್ಬಂದಿಯಾಗಿದ್ದ ಒಬ್ಬ ವ್ಯಕ್ತಿಯ ಬಗ್ಗೆ ಅಂಥ ಒಂದು ಸಂಗತಿ ನಮ್ಮ ಗಮನಕ್ಕೆ ಬಂದಿದೆ. ಅದರ ಬಗ್ಗೆ ನಮ್ಮ ನಿಲುವು ಹೀಗಿದೆ...

‘ಇಂಥ ಕ್ರಿಮಿಗಳು ಎಲ್ಲಿಯೇ ಇದ್ದರೂ, ಯಾರೇ ಆಗಿದ್ದರೂ ಹೊಸಕಿ ಹಾಕಬೇಕು. ಇದರಲ್ಲಿ ರಾಜಿಯೂ ಇಲ್ಲ, ಯಾವ ರಕ್ಷಣೆಯ ಕೆಲಸಗಳೂ ನಡೆಯುವುದಿಲ್ಲ. ಈ ಮಾಹಿತಿ ಬಂದ ಕೂಡಲೇ ಸಂಬಂಧಿಸಿದ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಆಡಳಿತ ಮಂಡಳಿಯ ನಿರ್ಧಾರದಂತೆ ಈ ವಿಷಯ ಕುರಿತು ಆಮೂಲಾಗ್ರ ತನಿಖೆ ನಡೆಸಿ, ಕಾನೂನು ಪ್ರಕಾರ ಕ್ರಮ ಜರುಗಿಸಲು ಪೊಲೀಸ್ ಕಮಿಷನರ್‌ಗೆ ಪತ್ರ ಕಳಿಸಲಾಗಿದೆ. ಇಲ್ಲಿ (ಆರೋಪಿಯ) ರಕ್ಷಣೆಯ ಪ್ರಶ್ನೆ ಇಲ್ಲ, ಇರುವುದಿಲ್ಲ.

‘ಮಾಧ್ಯಮಗಳಲ್ಲಿ ಅಥವಾ ಸಾರ್ವಜನಿಕ ಬದುಕಿನಲ್ಲಿ ಇನ್ಯಾರಿಗೋ ಹೇಳುವವರು ನಾವು ಬಾಧ್ಯಸ್ಥರಾಗಿ ಇರಲೇ ಬೇಕು. ಒಬ್ಬರಿಗೆ ಒಂದು ನಿಲುವು ಇನ್ನೊಬ್ಬರಿಗೆ ಇನ್ನೊಂದು ನಿಲುವು ಸಾಧ್ಯವಿಲ್ಲ. ಎಲ್ಲೇ ತಪ್ಪಾಗಿದ್ದರೂ ತಪ್ಪೇ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು. ಈ ರೀತಿಯ ಪ್ರಕರಣಗಳು ಮುಂದೆಯೂ ನಡೆಯಲೂಬಹುದು. ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತೇವೆ.

‘ಇಂಥ ಕುಕೃತ್ಯ ಮಾಡುವವರನ್ನು ಪೊಲೀಸ್ ಠಾಣೆಗೆ ಎಳೆದೊಯ್ದವರು ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಐ ಎನ್‌ಕರೇಜ್ ಎವರೆಬಡಿ ಟು ಡು ಇಟ್ (ಎಲ್ಲರೂ ಹೀಗೆಯೇ ಮಾಡಬೇಕು ಎಂದು ನಾನು ಪ್ರೋತ್ಸಾಹಿಸುತ್ತೇನೆ). ಆಗಲೇ ಜವಾಬ್ದಾರಿ ಬರಲು ಸಾಧ್ಯ. ಇನ್ನು ಮುಂದೆಯೂ ನಮ್ಮ ಹೆಸರಿನಲ್ಲಿ, ನಮ್ಮ ಸಂಸ್ಥೆಯ ಹೆಸರಿನಲ್ಲಿ ಯಾರಾದರೂ ಇಂಥ ಪ್ರಯತ್ನ ಮಾಡಿದರೆ ಮುಖಮೂತಿ ನೋಡದೆ ಪೊಲೀಸ್ ಠಾಣೆಗೆ ದೂರು ಕೊಡಿ. ವಿ ವೆಲ್‌ಕಮ್ ಇಟ್, ವಿ ಎನ್‌ಕರೇಜ್ ಇಟ್ (ನಾವು ಇದನ್ನು ಸ್ವಾಗತಿಸುತ್ತೇವೆ ಮತ್ತು ಪ್ರೋತ್ಸಾಹಿಸುತ್ತೇವೆ).

‘ಸಂಸ್ಥೆಯ ಹೆಸರು ಎಳೆದಿರುವ ಪರಿಣಾಮ ಇದಿಷ್ಟೂ ಮಾಹಿತಿಯನ್ನು ನಿಮ್ಮ ಮುಂದೆ ಹಾಜರುಪಡಿಸಬೇಕಾದ್ದು ಅನಿವಾರ್ಯ ಅಂತ ಈ ಮಾತು ಆಡುತ್ತಿದ್ದೇನೆ. ಮುಂದೆಯೂ ನಾಳೆಯೂ (ಯಾರಾದರೂ) ಇಂಥ ಯಾವುದೇ ಕುಕೃತ್ಯದಲ್ಲಿ ಪಾಲುದಾರರಾಗುತ್ತಿದ್ದಾರೆ ಎಂದರೆ ನಮ್ಮ ಕಡೆಯಿಂದ ಇದೇ ಶಿಕ್ಷೆ. (ದೂರು ನೀಡಿದವರಿಗೆ) ಕಾನೂನಾತ್ಮಕ ನೆರವನ್ನು ಕೊಡುವ ಕೆಲಸವನ್ನು ಮಾಡಿಯೇ ತೀರುತ್ತೇವೆ. ಇದರಲ್ಲಿ ರಾಜಿಯೂ ಇಲ್ಲ, ರಕ್ಷಣೆಯೂ ಇಲ್ಲ.

‘ಮುಂದೆ ಇದರ ಮುಂದುವರಿದ ಮಾಹಿತಿ ಇದ್ದರೆ ಅದನ್ನೂ ತಿಳಿಸುತ್ತೇವೆ. ಎಲ್ಲವನ್ನೂ ತಿಳಿಸುವುದು ನಮ್ಮ ಕರ್ತವ್ಯ. ಕೆಲಸ ಅಲ್ಲ. ಇದಿಷ್ಟೂ ಮಾಹಿತಿ ತಮ್ಮ ಅವಗಾಹನೆಗಾಗಿ. ನನ್ನ ಮಾತುಗಳನ್ನು ನೀವು ಪರಿಗಣಿಸುತ್ತೀರಿ ಎಂದು ಭಾವಿಸುತ್ತೇನೆ’ ಎಂದು ರಂಗನಾಥ್ ಮಾತು ಮುಗಿಸಿದ್ದಾರೆ.


ಪಬ್ಲಿಕ್ ಟೀವಿ ಆಡಳಿತ ಮಂಡಳಿ ಬೆಂಗಳೂರು ಪೊಲೀಸರಿಗೆ ಬರೆದಿರುವ ಪತ್ರ

 

ಬರಹ ಇಷ್ಟವಾಯಿತೆ?

 • 57

  Happy
 • 3

  Amused
 • 0

  Sad
 • 4

  Frustrated
 • 5

  Angry

Comments:

0 comments

Write the first review for this !