ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ತಳಿ ಅಭಿವೃದ್ಧಿ, ಶೀಘ್ರದಲ್ಲೇ ಬಿಡುಗಡೆ: IIHR ಅಂಗಳದಲ್ಲಿ ‘ನೇರಳೆ ಬೆಂಡೆ’

Published 7 ಮಾರ್ಚ್ 2024, 4:25 IST
Last Updated 7 ಮಾರ್ಚ್ 2024, 4:25 IST
ಅಕ್ಷರ ಗಾತ್ರ

ಬೆಂಗಳೂರು: ನೇರಳೆ(ಪರ್ಪಲ್‌) ಬಣ್ಣದ, ಅಧಿಕ ಆಂಟಿಆಕ್ಸಿಡೆಂಟ್ ಅಂಶವಿರುವ, ಎಲ್ಲ ಕಾಲದಲ್ಲೂ ಬೆಳೆಯುವಂತಹ ಬೆಂಡೆ ತಳಿಯೊಂದನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ತರಕಾರಿ ವಿಭಾಗದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಈ ಹೊಸ ತಳಿಗೆ ಇನ್ನೂ ಹೆಸರಿಟ್ಟಿಲ್ಲ. ಸದ್ಯಕ್ಕೆ ‘ಐಸಿ2656648-3-2’ ಎಂಬ ಸಂಖ್ಯೆಯೇ ಈ ತಳಿಗಿಟ್ಟಿರುವ ಹೆಸರು. ಶೀಘ್ರದಲ್ಲೇ ತಳಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಳಿ ಅಭಿವೃದ್ಧಿಪಡಿಸಿರುವ ಐಐಎಚ್‌ಆರ್‌ನ ತರಕಾರಿ ಬೆಳೆಗಳ ವಿಭಾಗದ ಪ್ರಧಾನ ವಿಜ್ಞಾನಿ ಎಂ.‌ಪಿಚ್ಚೈ ಮುತ್ತು ತಿಳಿಸಿದ್ದಾರೆ. ಹೆಸರಘಟ್ಟದ ಐಐಎಚ್‌ಆರ್‌ ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಹೊಸ ಬೆಂಡೆಯ ತಳಿ ಅಭಿವೃದ್ಧಿ ಮತ್ತು ತಳಿಯ ಗುಣವಿಶೇಷಗಳ ಕುರಿತು ಅವರು ಮಾಹಿತಿ ಹಂಚಿಕೊಂಡರು.

ನೇರಳೆ ಬಣ್ಣದ ಈ ಬೆಂಡೆ ತಳಿಯನ್ನು ಸಾಮಾನ್ಯ ಬೆಂಡೆ ಬೆಳೆಯುವ ರೀತಿಯಲ್ಲೇ ಬೆಳೆಯಬಹುದು. ಆರಂಭದಲ್ಲಿ ನಾಟಿ ಮಾಡಿದ 40 ರಿಂದ 45 ದಿನಗಳಲ್ಲಿ ಕಾಯಿ ಕೊಯ್ಲಿಗೆ ಬರುತ್ತದೆ. ನಂತರದ ವರ್ಷಗಳಲ್ಲಿ 30 ರಿಂದ 35 ದಿನಗಳೊಳಗೆ ಕೊಯ್ಲಿಗೆ ಬರುತ್ತದೆ. ಮೊದ ಮೊದಲು ಒಂದು ಗಿಡದಲ್ಲಿ ನಾಲ್ಕರಿಂದ ಐದು ಕಾಯಿ ಬಿಡುತ್ತದೆ. ಕ್ರಮೇಣ ಕಾಯಿಗಳ ಸಂಖ್ಯೆ ಹೆಚ್ಚುತ್ತದೆ. ಎಕರೆಗೆ 15 ರಿಂದ 20 ಟನ್‌ ಇಳುವರಿ ನಿರೀಕ್ಷಿಸಬಹುದು.

ಈ ತಳಿ ‘ವೈರಸ್ ಸಹಿಷ್ಣು’ ಗುಣ ಹೊಂದಿದೆ. ಬೇರೆ ತಳಿಯ ಬೆಂಡೆಗೆ ತಗಲುವಂತಹ ರೋಗ, ಕೀಟ ಬಾಧೆ ಈ ತಳಿಗೂ ಬರುತ್ತದೆ. ವಾತಾವರಣದಲ್ಲಿ ಉಷ್ಣತೆ 35 ರಿಂದ 40 ಡಿಗ್ರಿ ಹೆಚ್ಚಾದಾಗ ರೋಗ ಬರಬಹುದು. ಕೀಟ ನಿಯಂತ್ರಣಕ್ಕೆ ಒಂದು ಔಷಧದ ಸ್ಪ್ರೇ ಕೊಡಬೇಕಾಗುತ್ತದೆ.

ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ವಿಜ್ಞಾನಿ ಪಿಚ್ಚೈ ಮುತ್ತು ಅವರು ಬೆಂಡೆ ಕುರಿತು ವೀಕ್ಷಕರಿಗೆ ಮಾಹಿತಿ ನೀಡಿದರು.

ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ವಿಜ್ಞಾನಿ ಪಿಚ್ಚೈ ಮುತ್ತು ಅವರು ಬೆಂಡೆ ಕುರಿತು ವೀಕ್ಷಕರಿಗೆ ಮಾಹಿತಿ ನೀಡಿದರು.

–ಪ್ರಜಾವಾಣಿ ಚಿತ್ರ

ಸಲಾಡ್ ಆಗಿ ಬಳಕೆ: ಈ ಬೆಂಡೆಯನ್ನು ಹಾಗೆಯೇ ತಿನ್ನಬಹುದು. ಸಲಾಡ್‌ ಆಗಿ ಬಳಸಬಹುದು. ಫ್ರೈ ಮಾಡಿಯೂ ತಿನ್ನಬಹುದು. ಸಾಂಬಾರ್, ಪಲ್ಯದಂತಹ ಖಾದ್ಯಗಳನ್ನೂ ತಯಾರಿಸಬಹುದು. ‘ವ್ಯಾಕ್ಯೂಮ್ ಫ್ರೈ, ಡಿಹೈಡ್ರೇಟ್‌ ಬೆಂಡಿಯಂತಹ ಸಂಸ್ಕರಿತ ಉತ್ಪನ್ನವಾಗಿ ಮಾಡುವುದಕ್ಕೆ ಇದು ಉತ್ತಮವಾದ ತಳಿ‘ ಎನ್ನುವುದು ಅವರ ಅಭಿಪ್ರಾಯ.

ಪೋಷಕಾಂಶಗಳ ಆಗರ: ಬಣ್ಣ, ರುಚಿ ಜೊತೆಗೆ, ದೇಹಕ್ಕೆ ರೋಗನಿರೋಧಕ ಶಕ್ತಿ ನೀಡುವುದರಲ್ಲೂ ಈ ಬೆಂಡೆ ಮುಂದು. ಇದರಲ್ಲಿ ಆಂಥೊಸಯಾನಿನ್ ಎಂಬ ಅಂಶ ಅಧಿಕವಾಗಿದೆ. 100 ಗ್ರಾಂ ತಾಜಾ ಬೆಂಡೆಯಲ್ಲಿ ಶೇ 8.89ರಷ್ಟು ಆಂಥೊಸೈನಿನ್ ಅಂಶವಿದೆ. ಇದು ಪಾಲಿಫೀನಲ್(ಪ್ಲೇವಿನಾಯ್ಡ್) ಎಂಬ ಆಂಟಿ ಆಕ್ಸಿಡೆಂಟ್ ಹೊಂದಿದೆ. ಇದು ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಧುಮೇಹ ಮತ್ತು ಕ್ಯಾನ್ಸರ್‌ ಸಂಬಂಧಿತ ರೋಗಗಳ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ಎಂಟು ವರ್ಷಗಳ ಪ್ರಯೋಗ: ಎಂಟರಿಂದ ಹತ್ತು ವರ್ಷಗಳು ನೇರಳೆ ಬೆಂಡೆ ತಳಿ ಅಭಿವೃದ್ಧಿ ಕೆಲಸ ನಡೆದಿದೆ. ಐಐಎಚ್‌ಆರ್‌ ಸಂಗ್ರಹದಲ್ಲಿರುವ ಜರ್ಮ್‌ಪ್ಲಾಸಂನಿಂದ ಎಂಟರಿಂದ ಒಂಬತ್ತು ತಳಿಗಳನ್ನು ಆಯ್ಕೆ ಮಾಡಿ (ಸೆಲಕ್ಷನ್‌) ಈ ತಳಿ ಅಭಿವೃದ್ಧಿಪಡಿಸಲಾಗಿದೆ ಎಂದು ಪಿಚ್ಚೈ ಮುತ್ತು ಮಾಹಿತಿ ನೀಡಿದರು. ಈ ಬೆಂಡೆ ತಳಿ ಅಭಿವೃದ್ಧಿ ಕಾರ್ಯದಲ್ಲಿ ತಾಂತ್ರಿಕ ಸಹಾಯಕಿ ವಿಮಲ ಡಿ. ಅವರು ನೆರವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT