ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಬಿಎಂಪಿ ಕಾಯ್ದೆ 2020: ವಲಯ ಮಟ್ಟದಲ್ಲಿ ಸಂವಾದ’

ಹೊಸ ಆಡಳಿತ ವ್ಯವಸ್ಥೆ ಬಲಪಡಿಸುವ ಸಲಹೆಗಳಿಗೆ ಮುಕ್ತ ಅವಕಾಶ
Last Updated 21 ಡಿಸೆಂಬರ್ 2020, 20:40 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ಕಾಯ್ದೆ 2020’ ನಗರದ ಆಡಳಿತ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವಲ್ಲಿ ನಿಜಕ್ಕೂ ಸಮರ್ಥವಾಗಿದೆಯೇ, ಪಾಲಿಕೆಯಲ್ಲಿ ಬೇರುಬಿಟ್ಟ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಇದು ನೆರವಾಗಲಿದೆಯೇ, ಇದರಲ್ಲಿರುವ ಲೋಪಗಳೇನು?

ಇಂತಹ ಹತ್ತು ಹಲವು ವಿಚಾರಗಳ ಬಗ್ಗೆ ಬೊಮ್ಮನಹಳ್ಳಿ ಶಾಸಕ ಸತೀಶ ರೆಡ್ಡಿ ಹಾಗೂ ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌ ಅಭಿಪ್ರಾಯ ಹಂಚಿಕೊಂಡರು. ‘ಪ್ರಜಾವಾಣಿ’ ವತಿಯಿಂದ ಸೋಮವಾರ ಈ ಕುರಿತು ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ಈ ಕಾಯ್ದೆ ರೂಪಿಸುವಾಗ ಜನರ ಅಭಿಪ್ರಾಯ ಪಡೆದಿಲ್ಲ. ನಗರ ಯೋಜನಾ ತಜ್ಞರ ಜೊತೆಗೂ ಚರ್ಚಿಸಿಲ್ಲ. ಈ ಹಿಂದೆ ರಚಿಸಿದ್ದ ಬಿ.ಎಸ್‌.ಪಾಟೀಲ ಸಮಿತಿ ವರದಿ ಹಾಗೂ ಅಬೈಡ್‌ ಸಂಸ್ಥೆಯ ವರದಿಯಲ್ಲಿರುವ ಅಂಶಗಳನ್ನೂ ಪರಿಗಣಿಸಿಲ್ಲ. ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಆಡಳಿತ ವ್ಯವಸ್ಥೆ ತರುವ ಆಶಯ ಈಡೇರಿಲ್ಲ. ಇನ್ನಾದರೂ ಜನರ ಹಾಗೂ ತಜ್ಞರ ಜೊತೆ ಜನರ ಜೊತೆ ಚರ್ಚಿಸಿ ಕಾಯ್ದೆ ಇನ್ನಷ್ಟು ಬಲಪಡಿಸಬೇಕು‘ ಎಂದು ರಿಜ್ವಾನ್‌ ಸಲಹೆ ನೀಡಿದರು.

‘ಹೊಸ ಕಾಯ್ದೆ ರೂಪುಗೊಳ್ಳುವಾಗ ಸಂವಾದಗಳು ನಡೆಯಲೇಬೇಕು. ಬಿಬಿಬಿಂಪಿ ಮಸೂದೆ ಬಗ್ಗೆ ಅಧ್ಯಯನ ನಡೆಸಲು ಎಸ್.ರಘು ನೇತೃತ್ವದಲ್ಲಿ ರಚಿಸಿರುವ ವಿಧಾನ ಮಂಡಲದ ಜಂಟಿ ಪರಿಶೀಲನಾ ಸಮಿತಿ ಈಗಲೂ ಅಸ್ತಿತ್ವದಲ್ಲಿದೆ. ಕಾಯ್ದೆಯ ಬಗ್ಗೆ ಸಾರ್ವಜನಿಕ ಸಂವಾದ ಏರ್ಪಡಿಸಲು ಸರ್ಕಾರ ಬದ್ಧವಾಗಿದೆ. ಸಮಿತಿ ಇನ್ನೂ ಮೂರು ನಾಲ್ಕು ಸಭೆಗಳನ್ನು ನಡೆಸಿ ಸೂಕ್ತ ಮಾರ್ಪಾಡುಗಳನ್ನು ಮಾಡಲು ಅವಕಾಶ ಇದೆ. ವಲಯ ಮಟ್ಟದಲ್ಲಿ ಈ ಮಸೂದೆ ಬಗ್ಗೆ ಸಂವಾದ ಏರ್ಪಡಿಸಲಿದ್ದೇವೆ’ ಎಂದು ಸತೀಶ ರೆಡ್ಡಿ ತಿಳಿಸಿದರು.

‘ಬಿಬಿಎಂಪಿ ವಿಭಜನೆಗೆ ಸಹಮತವಿಲ್ಲ’
ಕೆಂಪೇಗೌಡರು ಕಟ್ಟಿನ ನಗರವನ್ನು ಒಡೆಯುವುದಕ್ಕೆ ಬಿಜೆಪಿಯ ಸಹಮತವಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಇದೇ ವಿಚಾರ ಮುಂದಿಟ್ಟು ಚುನಾವಣೆ ಎದುರಿಸಿದರು. ಫಲಿತಾಂಶ ಏನಾಯಿತು ನಿಮಗೇ ಗೊತ್ತಿದೆ. ಜನರಿಗೆ ಇದು ಇಷ್ಟವಿಲ್ಲ. ವಲಯಮಟ್ಟದ ಸಮಿತಿ ರಚಿಸಿ ಅವುಗಳಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಸತೀಶ ರೆಡ್ಡಿ ತಿಳಿಸಿದರು.

‘ಇಡೀ ನಗರಕ್ಕೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಬೆಂಗಳೂರು ಮೆಟ್ರೋಪಾಲಿಟನ್‌ ಕೌನ್ಸಿಲ್‌ ರಚಿಸಬೇಕು. ಬಿಬಿಎಂಪಿಯನ್ನು ಪೂರ್ವ, ಕೇಂದ್ರ ಹಾಗೂ ಪಶ್ಚಿಮ ಎಂದು ವಿಭಜಿಸಿ ಪ್ರತ್ಯೇಕ ಪಾಲಿಕೆ ರಚಿಸಬೇಕು. ಮೇಯರ್‌ ಭೇಟಿಗೆ ಸಮಯ ಪಡೆಯಲು ನನ್ನಂತಹ ಶಾಸಕರಿಗೂ ಸಾಧ್ಯವಾಗದ ಸ್ಥಿತಿ ಇದೆ. ಇದನ್ನು ತಪ್ಪಿಸಬೇಕು’ ಎಂದು ರಿಜ್ವಾನ್‌ ಒತ್ತಾಯಿಸಿದರು.

‘ಆಸ್ತಿಗಳ ಮರು ಸರ್ವೆಗೆ ಕ್ರಮ’
‘ಸ್ವಯಂಘೋಷಿತ ಆಸ್ತಿತೆರಿಗೆ ಪದ್ಧತಿಯಲ್ಲಿ ಆಸ್ತಿ ಮಾಲೀಕರೇ ಅವುಗಳ ವಿಸ್ತೀರ್ಣವನ್ನು ಘೋಷಿಸಿಕೊಂಡಿದ್ದಾರೆ. ಕೆಲವರು ತಪ್ಪು ಲೆಕ್ಕ ನೀಡಿದ್ದಾರೆ. ಈಗ ಪಾಲಿಕೆಯೇ ಆಸ್ತಿಗಳ ಮರುಸರ್ವೆ ನಡೆಸಲಿದೆ. ಆಸ್ತಿಗಳ ಖಚಿತ ಅಳತೆ ಸಿಕ್ಕರೆ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಾಗಲಿದೆ’ ಎಂದು ಸತೀಶ ರೆಡ್ಡಿ ತಿಳಿಸಿದರು.

‘ಪ್ರಜಾವಾಣಿ’ಯ ಫೇಸ್‌ಬುಕ್‌ ಪುಟದ ಮೂಲಕ ನೇರಪ್ರಸಾರಗೊಂಡ ಈ ಸಂವಾದದ ಪ್ರಮುಖ ಅಂಶಗಳು ಇಲ್ಲಿವೆ.

* ನಗರದ ಆಡಳಿತ ವ್ಯವಸ್ಥೆಗೆ ಹೊಸ ದಿಸೆ ತೋರುವ ಉದ್ದೇಶ ಈ ಕಾಯ್ದೆ ಮೂಲಕ ಈಡೇರಿದೆ ಅನಿಸುತ್ತದೆಯೇ?
ಸತೀಶ ರೆಡ್ಡಿ: ಖಂಡಿತಾ. ವಲಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಅಧಿಕಾರ ವಿಕೇಂದ್ರೀಕರಣ ಮಾಡುವುದೂ ಸೇರಿದಂತೆ ಅನೇಕ ಹೊಸ ವಿಚಾರಗಳು ಕಾಯ್ದೆಯಲ್ಲಿವೆ. ನಗರದ ಆಡಳಿತದಲ್ಲಿ ಮಹತ್ತರ ಬದಲಾವಣೆ ತರಲಿದೆ.
ರಿಜ್ವಾನ್‌: ಈ ಮಸೂದೆ ಸಮಾಧಾನ ತಂದಿಲ್ಲ. ಕೆಎಂಸಿ ಕಾಯ್ದೆಯ ಅಂಶಗಳನ್ನೇ ಹೊಸ ಕಾಯ್ದೆ ಎಂಬಂತೆ ತೋರಿಸಲಾಗಿದೆ. 1 ಕೋಟಿಗಿಂತ ಹೆಚ್ಚು ಜನಸಂಖ್ಯೆ ಇರುವ ಬೇರೆ ಯಾವುದೇ ನಗರದಲ್ಲೂ ಒಂದೇ ಪಾಲಿಕೆ ಇಲ್ಲ. ಸಣ್ಣ ಸಣ್ಣ ಪಾಲಿಕೆಗಳನ್ನು ಮಾಡಿದ್ದಾರೆ. ಬಿಬಿಎಂಪಿಯ ಸಂರಚನೆ ಬೆಂಗಳೂರು ನಗರದ ಅಭಿವೃದ್ಧಿಗೆ ಪೂರಕವಲ್ಲ. ಬಿಬಿಎಂಪಿ ವ್ಯವಸ್ಥೆಯೇ ಕಂಟಕ. ನಗರದ ಅಭಿವೃದ್ಧಿಯ ದೂರದೃಷ್ಟಿಯನ್ನೇ ಇದು ಹೊಂದಿಲ್ಲ.

* ಬಿಬಿಎಂಪಿ ಚುನಾವಣೆ ಮುಂದೂಡಲೆಂದೇ ಮಸೂದೆ ತರಲಾಗಿದೆ ಎಂಬ ಆರೋಪವಿದೆಯಲ್ಲ?
ಸತೀಶ ರೆಡ್ಡಿ: ಸರ್ಕಾರಕ್ಕೆ ಈ ಉದ್ದೇಶ ಖಂಡಿತಾ ಇಲ್ಲ. ಬಿಬಿಎಂಪಿ ಆಡಳಿತವನ್ನು ಈಗ ಸಮಗ್ರವಾಗಿ ಬದಲಾವಣೆ ಮಾಡದಿದ್ದರೆ ಅಭಿವೃದ್ಧಿಯ ವೇಗ ಐದು ವರ್ಷ ಕುಂಠಿತಗೊಳ್ಳಲಿದೆ. ಹಾಗಾಗಿ ಬಿಬಿಎಂಪಿ ಕಾಯ್ದೆ ಜಾರಿಗೆ ಸರ್ಕಾರ ಮುಂದಾಗಿದೆ.

* ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಬಿಬಿಎಂಪಿ ವ್ಯಾಪ್ತಿ ವಿಸ್ತರಣೆ ತಾಂತ್ರಿಕ ಸಮಸ್ಯೆ ಸೃಷ್ಟಿಸುವುದಿಲ್ಲವೇ?
ಸತೀಶ ರಡ್ಡಿ: ನಗರದ ಹೊರವಲಯದ ಅನೇಕ ಪ್ರದೇಶಗಳು ಅತ್ತ ಬಿಬಿಎಂಪಿಗೂ ಸೇರಿಲ್ಲ, ಇತ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇಲ್ಲ. ಎಲೆಕ್ಟ್ರಾನಿಕ್‌ ಸಿಟಿಯಂತಹ ಕಡೆ ಬಿಬಿಎಂಪಿ ಆಚೆಗೂ ಭಾರಿ ಬದಲಾವಣೆಗಳಾಗಿವೆ. ಕೆಲವು ಗ್ರಾಮಗಳು ನಡುಗಡ್ಡೆಗಳಂತೆ ಈ ಪ್ರದೇಶಗಳಲ್ಲಿವೆ. ಅಂತಹವುಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವುದು ಅನಿವಾರ್ಯ.
ರಿಜ್ವಾನ್‌: ಹೊಸ ಪ್ರದೇಶ ಸೇರ್ಪಡೆಗೆ ವಿರೋಧವಿಲ್ಲ. ಆದರೆ, ‘ಬೃಹತ್‌’ ಎಂಬ ಪರಿಕಲ್ಪನೆಯೇ ಸರಿಯಲ್ಲ. ಈ ಹಿಂದೆ ಬಿಬಿಎಂಪಿಗೆ ಸೇರ್ಪಡೆಗೊಂಡ ಸೇರಿದ ನಗರ ಸಭೆ ಹಾಗೂ ಗ್ರಾಮಗಳು ಈಗಲೂ ಅಭಿವೃದ್ಧಿ ಕಂಡಿಲ್ಲ. ಹಾಗಾಗಿ ಬಿಬಿಎಂಪಿಯನ್ನು ಮೂರು ಅಥವಾ ನಾಲ್ಕು ಘಟಕಗಳನ್ನಾಗಿ ವಿಂಗಡಿಸಿ ಆ ಪ್ರದೇಶಕ್ಕೆ ಸೀಮಿತವಾದ ಪಾಲಿಕೆ ರೂಪಿಸುವುದು ಒಳ್ಳೆಯದು.

* 13 ವರ್ಷಗಳ ಹಿಂದೆ ಬಿಬಿಎಂಪಿಗೆ ಸೇರಿದ ಪ್ರದೇಶಗಳು ಈಗಲೂ ಅಭಿವೃದ್ಧಿ ಆಗಿಲ್ಲ ಎಂಬ ಆರೋಪದ ಬಗ್ಗೆ ಏನನ್ನುತ್ತೀರಿ?
ಸತೀಶ ರೆಡ್ಡಿ: ಹೊಸತಾಗಿ ಸೇರ್ಪಡೆಗೊಂಡ ಪ್ರದೇಶ ಅಭಿವೃದ್ಧಿ ಆಗಿಲ್ಲ ಎಂಬುದನ್ನು ಒಪ್ಪಲಾಗದು. ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198ಕ್ಕೆ ಹೆಚ್ಚಿಸುವಾಗಲೂ ವಿರೋಧ ಇತ್ತು. ಕೆಲವು ಗ್ರಾಮಗಳಲ್ಲಿ ಹಿಂದೆ ಬೋರ್‌ವೆಲ್‌ ಹಾಕುವುದಕ್ಕೆ ಬಿಟ್ಟು ಬೇರೇನಕ್ಕೂ ದುಡ್ಡಿರಲಿಲ್ಲ. ಈಗ ನೆಲಮಂಗಲದಿಂದ ಹಿಡಿದು ಎಲೆಕ್ಟ್ರಾನಿಕ್‌ ಸಿಟಿ ವರೆಗೆ ಸಾಕಷ್ಟು ಅಭಿವೃದ್ಧಿ ಆಗಿಲ್ಲವೇ. ಈಗಲೂ ಅತಿ ಹೆಚ್ಚು ತೆರಿಗೆ ಬರುತ್ತಿರುವುದು ಹೊರವಲಯದ ಪ್ರದೇಶಗಳಿಂದಲೇ. ಮಹದೇವಪುರ ಕ್ಷೇತ್ರದಿಂದ ಅಥವಾ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸಂಗ್ರಹವಾಗುವಷ್ಟು ತೆರಿಗೆ ಶಿವಾಜಿನಗರದಲ್ಲಿ ಅಥವಾ ಚಾಮರಾಜಪೇಟೆ ಕ್ಷೇತ್ರದಲ್ಲಿ ಸಂಗ್ರಹವಾಗುತ್ತಿಲ್ಲ.
ರಿಜ್ವಾನ್‌: ಇವೆರಡು ಕ್ಷೇತ್ರಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಿಂದಾಗಿ ಅಭಿವೃದ್ಧಿ ಆಗಿವೆ. ಹೊರ ವಲಯಕ್ಕೊಂದು ಪಾಲಿಕೆ ರೂಪಿಸಿ ನೋಡಿ. ಆ ಪ್ರದೇಶ ಇನ್ನಷ್ಟು ಅಭಿವೃದ್ಧಿ ಆಗಲಿದೆ.

* ವಲಯ ಮಟ್ಟದ ಸಮಿತಿ ನಿರ್ಣಯ ರದ್ದುಪಡಿಸುವ ಅಧಿಕಾರವನ್ನು ಮುಖ್ಯ ಆಯುಕ್ತರಿಗೆ ನೀಡಲಾಗುತ್ತಿದೆ. ಇದು ಅಧಿಕಾರ ಕೊಟ್ಟು ಕಿತ್ತುಕೊಂಡಂತೆ ಅಲ್ಲವೇ?
ಸತೀಶ ರೆಡ್ಡಿ: ಶಾಸಕರು ಹಾಗೂ ಪಾಲಿಕೆ ಸದಸ್ಯರ ನಡುವೆ ತಿಕ್ಕಾಟ ಏರ್ಪಟ್ಟರೆ ಯಾರಾದರೂ ಅದನ್ನು ಬಗೆಹರಿಸಲೇ ಬೇಕಲ್ಲ. ಅದಕ್ಕೆ ಮುಖ್ಯ ಆಯುಕ್ತರಿಗಿಂತ ಸೂಕ್ತ ವ್ಯಕ್ತಿ ಯಾರು. ಇದು ದುರ್ಬಳಕೆ ಆಗುತ್ತದೆ ಎಂಬ ಆತಂಕ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT