ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್: ನ್ಯಾಯಾಂಗ ತನಿಖೆ ಆರಂಭಿಸಿದ ಫ್ರಾನ್ಸ್

ಫ್ರಾನ್ಸ್‌ನ ತನಿಖಾ ವೆಬ್‌ಸೈಟ್ ಮೀಡಿಯಾಪಾರ್ಟ್ ವರದಿ
Last Updated 3 ಜುಲೈ 2021, 21:39 IST
ಅಕ್ಷರ ಗಾತ್ರ

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ಮತ್ತು ಪಕ್ಷಪಾತ ನಡೆದಿದೆ ಎಂಬ ಆರೋಪದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ನ್ಯಾಯಾಧೀಶರನ್ನು ನೇಮಿಸಲಾಗಿದೆ ಎಂದು ಫ್ರಾನ್ಸ್‌ನ ತನಿಖಾ ವೆಬ್‌ಸೈಟ್ ಮೀಡಿಯಾಪಾರ್ಟ್ ವರದಿ ಮಾಡಿದೆ.

ರಾಷ್ಟ್ರೀಯ ಹಣಕಾಸು ಅಭಿಯೋಜಕರ ಕಚೇರಿಯು (ಪಿಎನ್‌ಎಫ್) ಈ ತನಿಖೆಯನ್ನು ಪ್ರಾರಂಭಿಸಿದೆ ಎಂದು ವರದಿ ಹೇಳಿದೆ.

2016ರಲ್ಲಿ ಭಾರತ ಹಾಗೂ ಫ್ರಾನ್ಸ್ ಸರ್ಕಾರಗಳ ನಡುವೆಸುಮಾರು ₹59,000 ಕೋಟಿ ಮೊತ್ತದ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಡಾಸೊ ಕಂಪನಿ ತಯಾರಿಸಿದ 36 ರಫೇಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ಒದಗಿಸಲು ಒಪ್ಪಂದ ಏರ್ಪಟ್ಟಿತ್ತು.

ಈ ಒಪ್ಪಂದದಲ್ಲಿ ತಪ್ಪುಗಳು ಆಗಿವೆ ಎಂದು, ಮೀಡಿಯಾಪಾರ್ಟ್ಏಪ್ರಿಲ್‌ನಲ್ಲಿ ವರದಿ ಮಾಡಿತ್ತು. ಇದಾದ ಬಳಿಕ, ಆರ್ಥಿಕ ಅಪರಾಧ ಪತ್ತೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ಫ್ರಾನ್ಸ್‌ನ ಶೆರ್ಪಾ ಎನ್‌ಜಿಒ ಸಲ್ಲಿಸಿದ ದೂರಿನ ಅನ್ವಯ, ಫ್ರಾನ್ಸ್‌ನ ರಾಷ್ಟ್ರೀಯ ಹಣಕಾಸು ಅಭಿಯೋಜಕರ ಕಚೇರಿಯಿಂದ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.

ಮೀಡಿಯಾಪಾರ್ಟ್ ಸಂಸ್ಥೆಯ ಪತ್ರಕರ್ತ ಯಾನ್ ಫಿಲಿಪಿನ್ ಅವರು ಈ ಒಪ್ಪಂದದಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತು ಸರಣಿ ವರದಿಗಳನ್ನು ಪ್ರಕಟಿಸಿದ್ದರು. ‘ಇದಕ್ಕೆ ಸಂಬಂಧಿಸಿದ ದೂರನ್ನು 2019ರಲ್ಲಿ ಮಾಜಿ ಪಿಎನ್‌ಎಫ್ ಮುಖ್ಯಸ್ಥರು ಮುಚ್ಚಿಹಾಕಿದ್ದರು’ ಎಂದು ಯಾನ್ ಟ್ವೀಟ್ ಮಾಡಿದ್ದಾರೆ.

‘ಡಾಸೊ ಏವಿಯೇಷನ್ ಕಂಪನಿಯು ಭಾರತದ ಮಧ್ಯವರ್ತಿಗೆ ಸುಮಾರು ₹8.8 ಕೋಟಿ ಪಾವತಿಸಿದೆ’ ಎಂದು ಫ್ರಾನ್ಸ್‌ನ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ನಡೆಸಿದ ತನಿಖೆಯನ್ನುಉಲ್ಲೇಖಿಸಿ ಮೀಡಿಯಾಪಾರ್ಟ್ ಸಂಸ್ಥೆಯು ಏಪ್ರಿಲ್‌ನಲ್ಲಿ ವರದಿ ಪ್ರಕಟಿಸಿತ್ತು. ಆದರೆ ಈ ಆರೋಪವನ್ನು ಡಾಸೊ ನಿರಾಕರಿಸಿತ್ತು.

ಜಂಟಿ ಸದನ ಸಮಿತಿ ತನಿಖೆಗೆ ಕಾಂಗ್ರೆಸ್ ಆಗ್ರಹ
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ರಫೇಲ್ ಒಪ್ಪಂದ ಕುರಿತು ಜಂಟಿ ಸದನ ಸಮಿತಿಯ (ಜೆಪಿಸಿ) ತನಿಖೆಗೆ ಆದೇಶಿಸಬೇಕು ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್‌ ಸುರ್ಜೆವಾಲಾ ಒತ್ತಾಯಿಸಿದ್ದಾರೆ. ‘ಈ ಒಪ್ಪಂದದಲ್ಲಿ ನಡೆದಿರುವ ಭ್ರಷ್ಟಾಚಾರ ಈಗ ಸ್ಪಷ್ಟವಾಗಿ ಹೊರಬಂದಿದೆ. ಫ್ರಾನ್ಸ್‌ ಸರ್ಕಾರ ತನಿಖೆಗೆ ಆದೇಶಿಸಿರುವುದು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯವರ ನಿಲುವನ್ನು ಸಮರ್ಥಿಸಿದಂತಾಗಿದೆ’ ಎಂದು ಅವರು ತಿಳಿಸಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತೀ ವಿಮಾನಕ್ಕೆ ₹526 ಕೋಟಿ ನೀಡಿ ಖರೀದಿಸುವ ಒಪ್ಪಂದವಾಗಿತ್ತು. ಆದರೆ ಎನ್‌ಡಿಎ ಸರ್ಕಾರವು ಅದೇ ವಿಮಾನವನ್ನು ₹1,670 ಕೋಟಿ ನೀಡಿ ಖರೀದಿಸಲು ಮುಂದಾಗಿರುವ ಔಚಿತ್ಯವೇನು ಎಂದು ಪ್ರಶ್ನಿಸಿದ್ದ ಕಾಂಗ್ರೆಸ್, ಒಪ್ಪಂದದಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿತ್ತು.

‘ದಾಳ’ವಾಗಿ ರಾಹುಲ್ ಬಳಕೆ: ‍ಬಿಜೆಪಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರತಿಸ್ಪರ್ಧಿ ರಕ್ಷಣಾ ಕಂಪನಿಗಳು ‘ದಾಳ’ವಾಗಿ ಬಳಸುತ್ತಿವೆ ಎಂದು ಬಿಜೆಪಿ ಶನಿವಾರ ಆರೋಪಿಸಿದೆ.

ಎನ್‌ಜಿಒ ನೀಡಿದ ದೂರು ಆಧರಿಸಿ ತನಿಖೆಗೆ ಆದೇಶಿಸಲಾಗಿದೆಯೇ ವಿನಾ, ಅದನ್ನು ಭ್ರಷ್ಟಾಚಾರದ ದೃಷ್ಟಿಯಲ್ಲಿ ನೋಡಬಾರದು ಎಂದಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ‘ಈ ವಿಷಯವಾಗಿ ಕಾಂಗ್ರೆಸ್ ಸುಳ್ಳು ಮತ್ತು ತಪ್ಪು ಕಲ್ಪನೆಗಳನ್ನು ಹರಡುತ್ತಿದೆ. ರಾಹುಲ್ ವರ್ತನೆಯನ್ನು ನೋಡಿದರೆ, ಅವರು ಪ್ರತಿಸ್ಪರ್ಧಿ ಕಂಪನಿಗಳ ಏಜೆಂಟ್ ಆಗಿರುವಂತೆ ತೋರುತ್ತಿದೆ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT