ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ನಕಲಿ ಗುರುತಿನ ಚೀಟಿ ಸೃಷ್ಟಿಸುವ ಜಾಲ ಪತ್ತೆ

ಸಿಸಿಬಿ, ಪೀಣ್ಯ ಪೊಲೀಸರ ಜಂಟಿ ಕಾರ್ಯಾಚರಣೆ : ಕಂಪ್ಯೂಟರ್ ಆಪರೇಟರ್‌ಗಳು ಸೇರಿ ಐವರ ಬಂಧನ
Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮತದಾರರ ನಕಲಿ ಗುರುತಿನ ಚೀಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ನಗರದ ಪೊಲೀಸರು, ಕಂಪ್ಯೂಟರ್‌ ಆಪರೇಟರ್‌ಗಳು ಸೇರಿದಂತೆ ಐವರನ್ನು ಗುರುವಾರ ಬಂಧಿಸಿದ್ದಾರೆ.

ಬಾಗಲಗುಂಟೆ ಡಿಫೆನ್ಸ್‌ ಕಾಲೊನಿಯ ಸಿ.ಜಿ. ನವೀನ್ ಕುಮಾರ್ (30), ಬೀದರ್‌ ಜಿಲ್ಲೆಯ ಹುಮ್ನಾಬಾದ್‌ನ ಸಂಜಯ್ ಕುಮಾರ್ ಶೀಲವಂತ (29), ಶಿರಾ ತಾಲ್ಲೂಕಿನ ಹುಲಿಕುಂಟೆಯ ಎನ್‌. ಸಚಿನ್ (26), ಕಸಬಾದ ದೇವರಾಜ್ (25)‌‌ ಹಾಗೂ ಹೊಸದುರ್ಗ ತಾಲ್ಲೂಕಿನ ಎಂ.ಜಿ.ದಿಬ್ಬದ ಕರಿಸಿದ್ದೇಶ್ವರ (34) ಬಂಧಿತರು. ಆರೋಪಿಗಳಿಂದ ಕಂಪ್ಯೂಟರ್, ಪೆನ್‌ ಡ್ರೈವ್ ಹಾಗೂ ಅರ್ಜಿ ನಮೂನೆ–6ರ ಪ್ರತಿಗಳನ್ನು ಜಪ್ತಿ ಮಾಡಲಾಗಿದೆ.

ಚುನಾವಣಾ ಆಯೋಗದ ಸೂಚನೆಯಂತೆ ದಾಸರಹಳ್ಳಿ ಸಹಾಯಕ ಚುನಾವಣಾಧಿಕಾರಿ ನಾಗರತ್ನ, ಇತ್ತೀಚೆಗೆ ಮತದಾರರ ಪಟ್ಟಿಯನ್ನು ಪರಿಶೀಲಿಸಿದ್ದರು. ಅದೇ ವೇಳೆ ಕೆಲವು ಮತದಾರರಿಗೆ ನಕಲಿ ಗುರುತಿನ ಚೀಟಿಗಳನ್ನು ನೀಡಿದ್ದು ಪತ್ತೆಯಾಗಿತ್ತು. ಆ ಬಗ್ಗೆ ಪೀಣ್ಯ ಠಾಣೆಗೆ ನಾಗರತ್ನ ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ಪೀಣ್ಯ ಹಾಗೂ ಸಿಸಿಬಿ ಪೊಲೀಸರು, ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಕರಿಸಿದ್ದೇಶ್ವರ

‘ಬಂಧಿತರ ಪೈಕಿ ನವೀನ್ ಹಾಗೂ ಸಂಜಯ್‌, ತಹಸೀಲ್ದಾರ್‌ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಂಪ್ಯೂಟರ್ ಆಪರೇಟರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಗುತ್ತಿಗೆ ಅವಧಿ ಮುಗಿದಿದ್ದರಿಂದ ಕೆಲ ತಿಂಗಳ ಹಿಂದಷ್ಟೇ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದರು. ನಂತರ, ಅವರಿಬ್ಬರು ಸೇರಿಕೊಂಡು ದೊಡ್ಡಬಿದರಕಲ್ಲು ಬಳಿ ಸೈಬರ್‌ ಕೆಫೆ ಆರಂಭಿಸಿದ್ದರು. ಅಲ್ಲಿಯೇ ನಕಲಿ ಗುರುತಿನ ಚೀಟಿಗಳನ್ನು ತಯಾರಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಇಬ್ಬರ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದ ಇತರೆ ಆರೋಪಿಗಳು, ಸಾರ್ವಜನಿಕರನ್ನು ಸೈಬರ್‌ ಕೆಫೆಗೆ ಕರೆತರುವ ಹಾಗೂ ಅವರ ಮನೆಗೆ ಹೋಗಿ ಗುರುತಿನ ಚೀಟಿ ನೀಡುವ ಕೆಲಸ ಮಾಡುತ್ತಿದ್ದರು. ಇವರೆಲ್ಲರೂ ಸೇರಿಕೊಂಡು ಸುಮಾರು 1,000 ಗುರುತಿನ ಚೀಟಿಗಳನ್ನು ಮಾರಾಟ ಮಾಡಿರುವುದು ಪತ್ತೆಯಾಗಿದೆ. ಚೀಟಿ ಪಡೆದವರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದೇವೆ. ಅವರೆಲ್ಲರ ಹೇಳಿಕೆ ಪಡೆಯಲಿದ್ದೇವೆ’ ಎಂದರು.

‘ಆರೋಪಿ ನವೀನ್‌, ನೆಲಮಂಗಲದವ. ಕಂಪ್ಯೂಟರ್‌ ಡಿಪ್ಲೊಮಾ ಮಾಡಿದ್ದಾನೆ. ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದು ಬಾಗಲಗುಂಟೆಯಲ್ಲಿ ನೆಲೆಸಿದ್ದ. ಸಂಜಯ್‌ ಸಹ ಡಿಪ್ಲೊಮಾ ಪೂರ್ಣಗೊಳಿಸಿದ್ದು, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಇಲ್ಲಿಯೇ ಆತನಿಗೆ ಉಳಿದ ಆರೋಪಿಗಳ ಪರಿಚಯವಾಗಿತ್ತು. ನಂತರ, ತಂಡ ಕಟ್ಟಿಕೊಂಡು ಕೃತ್ಯ ಎಸಗಲು ಆರಂಭಿಸಿದ್ದರು’ ಎಂದರು.


ಸಚಿನ್‌

ಅಧಿಕಾರಿಗಳ ಪಾಸ್‌ವರ್ಡ್‌ ಬಳಕೆ: ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಮತದಾರರ ಹೆಸರು ಸೇರ್ಪಡೆಗೆ ಆಯೋಗವು ಅವಕಾಶ ಮಾಡಿಕೊಟ್ಟಿತ್ತು. ‘www.erms.kar.nic.in’ ಜಾಲತಾಣದ ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಲು ತಾಲ್ಲೂಕು ಕಚೇರಿಯ ಅಧಿಕಾರಿಗಳಿಗೆ ಸೂಚಿಸಿತ್ತು. ಅದಕ್ಕಾಗಿ ಪ್ರತಿಯೊಬ್ಬ ಅಧಿಕಾರಿಗೂ ಪ್ರತ್ಯೇಕ ಯೂಸರ್‌ ಐಡಿ ಹಾಗೂ ಪಾಸ್‌ವರ್ಡ್‌ ನೀಡಿತ್ತು. ಅದೇ ಪಾಸ್‌ವರ್ಡ್‌ ಬಳಸಿಕೊಂಡು ಆರೋಪಿಗಳು, ನಕಲಿ ಗುರುತಿನ ಚೀಟಿಗಳನ್ನು ಸಿದ್ಧಪಡಿಸುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ ಕಂಪ್ಯೂಟರ್‌ ಆಪರೇಟರ್‌ ಆಗಿದ್ದ ನವೀನ್‌ ಹಾಗೂ ಸಂಜಯ್‌ಗೆ ಅಧಿಕಾರಿಗಳು ತಮ್ಮ ಯೂಸರ್‌ ಐಡಿ ಹಾಗೂ ಪಾಸ್‌ವರ್ಡ್‌ ತಿಳಿಸಿದ್ದರು. ಅಧಿಕಾರಿಗಳು ಮಾಡಬೇಕಿದ್ದ ಕೆಲಸವನ್ನೂ ಅವರಿಬ್ಬರೇ ಮಾಡುತ್ತಿದ್ದರು. ಅವರು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ ಬಳಿಕ, ಅಧಿಕಾರಿಗಳು ತಮ್ಮ ಪಾಸ್‌ವರ್ಡ್‌ ಬದಲಿಸಿರಲಿಲ್ಲ. ಅದು ಆರೋಪಿಗಳಿಗೆ ಅನುಕೂಲವಾಗಿತ್ತು’.

ಮನೆ ಬಾಗಿಲಿಗೆ ಚೀಟಿ: ‘ತಾಲ್ಲೂಕು ಕಚೇರಿ ಬಳಿಯೇ ಓಡಾಡುತ್ತಿದ್ದ ಆರೋಪಿಗಳು, ಗುರುತಿನ ಚೀಟಿ ಮಾಡಿಸಲು ಕಚೇರಿಗೆ ಬರುತ್ತಿದ್ದ ಸಾರ್ವಜನಿಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ‘ಸರದಿಯಲ್ಲಿ ನಿಂತರೆ ಗುರುತಿನ ಚೀಟಿ ಸಿಗುವುದು ತಡವಾಗುತ್ತದೆ. ₹400 ಕೊಟ್ಟರೆ ನಾವೇ ಮನೆ ಬಾಗಿಲಿಗೆ ಚೀಟಿ ತಂದು ಕೊಡುತ್ತೇವೆ’ ಎಂದು ಸಾರ್ವಜನಿಕರಿಗೆ ಹೇಳುತ್ತಿದ್ದರು. ಸರದಿ ನಿಲ್ಲಲು ಆಗದ ಹಲವರು, ಆರೋಪಿಗಳಿಗೆ ಹಣ ಕೊಟ್ಟು ಗುರುತಿನ ಚೀಟಿ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

‘ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಕೆಲವರು, ಅರ್ಜಿ ನಮೂನೆ –6 ಭರ್ತಿ ಮಾಡಿ ತಾಲ್ಲೂಕು ಕಚೇರಿ ಅಧಿಕಾರಿಗಳಿಗೆ ಸಲ್ಲಿಸುತ್ತಿದ್ದರು. ವಿಳಾಸದ ದಾಖಲೆಗಳು ಸಮರ್ಪಕವಾಗಿರದ ಕಾರಣಕ್ಕೆ ಆ ಅರ್ಜಿಗಳನ್ನು ಅಧಿಕಾರಿಗಳು ತಿರಸ್ಕರಿಸುತ್ತಿದ್ದರು. ಅಂಥ ಜನರನ್ನೂ ಸಂಪರ್ಕಿಸುತ್ತಿದ್ದ ಆರೋಪಿಗಳು, ಅವರಿಗೂ ಗುರುತಿನ ಚೀಟಿ ಕೊಟ್ಟಿದ್ದಾರೆ. ಅವರ ಮಾಹಿತಿಯನ್ನೂ ಕಲೆಹಾಕಿದ್ದೇವೆ’ ಎಂದರು.
**
ಅಧಿಕಾರಿಗಳು ಭಾಗಿ ಅನುಮಾನ 
‘ದಾಸರಹಳ್ಳಿ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ವಾಸವಿರುವವರಿಗೆ ಆರೋಪಿಗಳು, ನಕಲಿ ಗುರುತಿನ ಚೀಟಿಗಳನ್ನು ತಯಾರಿಸಿ ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ಕೆಲ ಅಧಿಕಾರಿಗಳೂ ಭಾಗಿಯಾಗಿರುವ ಅನುಮಾನವಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ಒಂದು ಗುರುತಿನ ಚೀಟಿಗೆ ಆರೋಪಿಗಳು ₹400 ಪಡೆಯುತ್ತಿದ್ದರು. ಅದರಲ್ಲಿ ಕೆಲ ಅಧಿಕಾರಿಗಳಿಗೆ ಪಾಲು ಸಹ ಕೊಡುತ್ತಿದ್ದರು ಎಂಬ ಮಾಹಿತಿ ಇದೆ. ಈ ಬಗ್ಗೆ ಆರೋಪಿಗಳೇ ಹೇಳಿಕೊಂಡಿದ್ದಾರೆ. ಅಂಥ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ ಬಳಿಕವೇ ನಿಖರ ಮಾಹಿತಿ ಗೊತ್ತಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT